29ರಂದು ಟೋಲ್ ಸಂಗ್ರಹ ಕೇಂದ್ರಕ್ಕೆ ಮುತ್ತಿಗೆ

19 tnp photo 02 vv
Published on

ತಿ.ನರಸೀಪುರ: ತಾಲೂಕಿನ ಯಡದೊರೆ ಗ್ರಾಮದ ಬಳಿ ಕಾನೂನು ಬಾಹಿರವಾಗಿ ವಸೂಲಿ ಮಾಡುತ್ತಿರುವ ಟೋಲ್ ಸಂಗ್ರಹವನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಫೆ.29ರಂದು ಟೋಲ್ ಸಂಗ್ರಹ ಕೇಂದ್ರಕ್ಕೆ ಮುತ್ತಿಗೆ ಹಾಕಲು ವಿವಿಧ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕಿನ ವಿವಿಧ ಸಂಘಟನೆಯ ಮುಖ್ಯಸ್ಥರ ಸಭೆ ನಡೆಯಿತು. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಬೇಕು. ಹಳೇ ತಿರುಮಕೂಡಲಿನಿಂದ ಟೋಲ್ ಕೇಂದ್ರದವರೆಗೆ ಮೆರವಣಿಗೆ ನಡೆಸಲಾಗುವುದು. ಆಟೋ, ಲಾರಿ, ಖಾಸಗಿ ಬಸ್ ಮಾಲೀಕರು ತಮ್ಮ ವಾಹನಗಳನ್ನು ಟೋಲ್ ಬಳಿ ನಿಲ್ಲಿಸುವ ಮೂಲಕ ಪ್ರತಿಭಟನೆಗೆ ಸಹಕರಿಸಬೇಕೆಂದು ಮನವಿ ಮಾಡಲಾಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ವಸೂಲಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ. ಟೋಲ್ ಸಂಗ್ರಹ ನಿಲ್ಲಿಸಿ ವಾಹನಗಳ ಮುಕ್ತ ಸಂಚರಕ್ಕೆ ಅನುಕೂಲ ಕಲ್ಪಿಸಬೇಕು. ಟೋಲ್ ಸಂಗ್ರಹಣಾಕಾರರು ಸಾರ್ವಜನಿಕರೊಂದಿಗೆ ಗೂಂಡಾ ದುರ್ವರ್ತನೆ ತೋರುತ್ತಿದ್ದು, ಮನಬಂದಂತೆ ವಾಹನ ಮಾಲೀಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿದರು.
ಇದೇ ವೇಳೆ ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲು ತಿ.ನರಸೀಪುರ ತಾಲೂಕು ಸರ್ವ ಸಂಘಟನೆಗಳ ಒಕ್ಕೂಟದ ಸಮಿತಿಯನ್ನು ಸಭೆಯಲ್ಲಿ ರಚಿಸಲಾಯಿತು. ರೈತ ಮುಖಂಡ ಕಿರಗಸೂರು ಶಂಕರ್, ಮಣಿಕಂಠರಾಜ ಗೌಡ, ಬಾಳೆಎಲೆ ಕುಮಾರ್, ಆಲಗೂಡು ಚಂದ್ರಶೇಖರ್, ಕುಕ್ಕೂರು ರಾಜು, ಎಚ್.ಆರೀಫ್, ಸೋಸಲೆ ಪರಶಿವ ಮೂರ್ತಿ, ಯೋಗೇಶ್ ಅವರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಪುಟ್ಟರಾಜು, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕುರುಬೂರು ಸಿದ್ದೇಶ್, ಪ್ರಸಾದ್ ನಾಯಕ, ಸೋಸಲೆ ರಾಜಶೇಖರ ಮೂರ್ತಿ, ಗಣೇಶ್, ರಘು ನಂದನ್, ಅಂಗಡಿ ಮಹೇಶ್, ಬಸವರಾಜು, ಸ್ಟಿಕ್ಕರ್ ಬಸವರಾಜು ಮತ್ತಿತರರಿದ್ದರು.

1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net