

ಶಿವಮೊಗ್ಗ: ಭದ್ರಾ ನಾಲೆ ಸೀಳಿ ಕುಡಿಯುವ ನೀರು ಯೋಜನೆ ಕಾರ್ಯಗತಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಜು.9ರ ಬೆಳಗ್ಗೆ 10ಕ್ಕೆ ಸಾಗರ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕಚೇರಿಗೆ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಸಚಿವ ಎಂ.ಪಿ.ರೇಣಕಾಚಾರ್ಯ ಹೇಳಿದರು.
ನಾಲೆಯನ್ನು ಸೀಳಿ ಕುಡಿಯುವ ನೀರು ಯೋಜನೆ ರೂಪಿಸಿರುವುದರಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಆತಂಕ ಉಂಟಾಗಿದೆ. ಈ ಯೋಜನೆ ವಿರೋಧಿಸಿ ಹಲವು ಹಂತಗಳಲ್ಲಿ ಹೋರಾಟ ನಡೆಸಲಾಗಿತ್ತು. ಆದರೆ ರಾಜ್ಯ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜೂ.21ರಂದು ಭದ್ರಾ ನಾಲೆ ವೀಕ್ಷಣೆ ಮಾಡಿದ ಬಳಿಕ 23ರಂದು ಬೃಹತ್ ಹೋರಾಟ ನಡೆಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸರ್ಕಾರದ ಏಜೆಂಟರಂತೆ ಕಾರ್ಯನಿರ್ವಹಿಸಿತು. ಪ್ರತಿಭಟನಾಕಾರರನ್ನು ಭಯೋತ್ಪಾದಕರಂತೆ ಕಾಣಲಾಯಿತು. ನಿಷೇಧಾಜ್ಞೆ ಜಾರಿಗೊಳಿಸಿ ನಮ್ಮನ್ನು ಬಂಧಿಸಲಾಯಿತು. 25ರಂದು ದಾವಣಗೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಾಗ ನಮ್ಮ ಮುಖಂಡರ ಮೇಲೆ ಬಲವಂತವಾಗಿ ಹಲ್ಲೆ ನಡೆಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜುಲೈ 4ರಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಅವರು ಭರವಸೆ ನೀಡಿದ್ದರೂ ಅದು ಭರವಸೆಯಾಗಿಯೇ ಉಳಿದಿದೆ. ನಂತರ ಕರಪತ್ರಗಳನ್ನು ಹಂಚುವ ಮೂಲಕ ಯೋಜನೆಯಿಂದ ಆಗುವ ಸಮಸ್ಯೆಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದರು.
ಪ್ರಮುಖರಾದ ಹರಕೆರೆ ನಾಗರಾಜ್, ಕುಬೇಂದ್ರಪ್ಪ, ರಂಗಪ್ಪ, ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿದ್ದರು.