

ಚಂಡೀಗಡ/ನವದೆಹಲಿ : ಪಂಜಾಬ್ ಕಾಂಗ್ರೆಸ್ನಲ್ಲಿ ನಡೆಯುತ್ತಿದ್ದ ಅಂತಃಕಲಹಕ್ಕೆ ಶೀಘ್ರದಲ್ಲೇ ತೆರೆಬೀಳುವ ಸಾಧ್ಯತೆ ಇದೆ. ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಮಾಜಿ ಸಚಿವ ನವಜೋತ್ ಸಿಂಗ್ ಸಿಧು ನಡುವಣ ಬಹಿರಂಗ ಜಟಾಪಟಿಗೆ ಪರಿಹಾರವಾಗಿ ಪಕ್ಷದ ಹೈಕಮ್ಯಾಂಡ್ ಹೊಸ ಸೂತ್ರ ರೂಪಿಸಿದೆ. ಇದರನ್ವಯ, ಅಮರಿಂದರ್ ಸಿಂಗ್ ಸಿಎಂ ಆಗಿ ಮುಂದುವರಿಯಲಿದ್ದು, ಸಿಧುಗೆ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷಗಿರಿಯನ್ನು ನೀಡಲಾಗುವುದು ಎನ್ನಲಾಗಿದೆ.
ಕಳೆದ ಹಲವು ತಿಂಗಳಿಂದ ಸಿಧು ಅವರು ಸಿಂಗ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಗ್ಗೆ ದೆಹಲಿಗೆ ಹೋಗಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದರು. ದೆಹಲಿ ನಾಯಕರನ್ನು ಭೇಟಿ ಮಾಡಿದ ಸಿಎಂ ಸಿಂಗ್, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದರು.
ಇದೀಗ ರಾಜ್ಯ ಸರ್ಕಾರಕ್ಕೆ ಅಮರಿಂದರ್ ಸಿಂಗ್ ನೇತೃತ್ವವನ್ನು ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮತ್ತೊಂದೆಡೆ, ಸಿಧು ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಲಿದ್ದಾರೆ. ಜೊತೆಗೆ, ಹಿಂದೂ ಮತ್ತು ದಲಿತ ಸಮುದಾಯಗಳಿಂದ ತಲಾ ಒಬ್ಬೊಬ್ಬರು ಕಾರ್ಯಕಾರಿ ಅಧ್ಯಕ್ಷರನ್ನೂ ನೇಮಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗಳ ಬಗ್ಗೆ ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡಿರುವ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, "ಒಂದೆರಡು ದಿನಗಳಲ್ಲಿ ಪರಿಹಾರವನ್ನು ಪ್ರಕಟಿಸುತ್ತೇವೆ. ಸಿಎಂ ಅಮರಿಂದರ್ ಸಿಂಗ್ ನಾಯಕತ್ವದಲ್ಲೇ ಮುಂಬರಲಿರುವ ವಿಧಾನಸಭಾ ಚುನಾವಣೆ ಎದುರಿಸಲಿದ್ದೇವೆ. ಸಿಧು ಈ ರಾಜ್ಯದ ಭವಿಷ್ಯ. ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಥವಾ ಏನಾದರೂ ಹೇಳುವ ಮುನ್ನ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು" ಎಂದಿದ್ದಾರೆ. (ಏಜೆನ್ಸೀಸ್)