

ಬೆಂಗಳೂರು: ವಿಜಯವಾಣಿ ಡಿಜಿಟಲ್ ವಿಭಾಗದ ಮುಖ್ಯಸ್ಥ ಸಿದ್ಧಪ್ಪ ಕಾಳೋಜಿ, ಸ್ಥಾನಿಕ ಸಂಪಾದಕ ಪ್ರಕಾಶ್ ಎಸ್. ಶೇಟ್ ಹಾಗೂ ದಾವಣಗೆರೆ ಜಿಲ್ಲಾ ವಿಶೇಷ ವರದಿಗಾರ ರಮೇಶ್ ಜಹಗೀರದಾರ ಅವರಿಗೆ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರದಾನ ಮಾಡಿದರು.
ಇದೇ ವೇಳೆ 2023 ಮತ್ತು 24ನೇ ಸಾಲಿನಲ್ಲಿ ಕ್ರಮವಾಗಿ ಹಿರಿಯ ಪತ್ರಕರ್ತರಾದ ಅ.ಚ. ಶಿವಣ್ಣ ಮತ್ತು ಅಬ್ದುಸ್ಥಲಾಂ ಪುತ್ತಿಗೆ ಅವರಿಗೆ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ, ವಿವಿಧ ಮಾಧ್ಯಮಗಳ 60 ಮಂದಿಗೆ ವಾರ್ಷಿಕ ಪ್ರಶಸ್ತಿ ಮತ್ತು 20 ಮಂದಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಮೊತ್ತ ಹೆಚ್ಚಳ
ಎಲ್ಲ ವಸ್ತುಗಳ ಬೆಲೆ ಕೂಡ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನು ಕೂಡ ಹೆಚ್ಚಳ ಮಾಡಲಾಗಿದೆ. ಜೀವಮಾನ ಸಾಧನೆ ಪ್ರಶಸ್ತಿ ಮೊತ್ತವನ್ನು 50 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ, ವರ್ಷದ ವ್ಯಕ್ತಿ ಪ್ರಶಸ್ತಿಯನ್ನು 25 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ದತ್ತಿ ಪ್ರಶಸ್ತಿ ಮೊತ್ತ ಹಿಂದಿನಂತೆಯೇ 10 ಸಾವಿರ ರೂ.ಗಳಿರಲಿದೆ.