

ಬೆಂಗಳೂರು: ಕಳೆದ ಎರಡು ತಿಂಗಳಿಂದಲೂ ರಾಜಕೀಯ ಜಂಜಡ, ಟೀಕೆ ಪ್ರತ್ಯುತ್ತರದಲ್ಲಿ ಬ್ಯುಸಿ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಸಚಿವಾಲಯ ನೌಕರರಿಗಾಗಿನ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ವಿಶೇಷ ಲಹರಿಯಲ್ಲಿದ್ದರು.
ಮುಖ್ಯವಾಗಿ, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸರ್ಕಾರಿ ನೌಕರರಿಗೆ ಸಲಹೆಗಳನ್ನು ನೀಡಿ ಗಮನ ಸೆಳೆದರು. ತಮ್ಮ ಅನುಭವಗಳನ್ನು ಸಹ ಹಂಚಿಕೊಂಡು ಆರೋಗ್ಯ ಭಾಗ್ಯದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ಜೀವನ ಶೈಲಿ, ಆಹಾರ ಪದ್ಧತಿ ಮನುಷ್ಯನ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಒಳ್ಳೆಯ ಜೀವನಶೈಲಿ, ಆಹಾರ ಪದ್ಧತಿ ಇಟ್ಟುಕೊಳ್ಳುವ ಅಗತ್ಯ ಎಂದ ಅವರು ಎಲ್ಲ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯವೇ ಮುಖ್ಯ. ಉತ್ತಮ ಜೀವನಕ್ಕೆ ಐಶ್ವರ್ಯ ಇಟ್ಟುಕೊಳ್ಳಬೇಕು ಆದರೆ ಆರೋಗ್ಯ ಮುಖ್ಯ. ಎಷ್ಟುವರ್ಷ ಬದುಕುತ್ತೇವೆ ಎಂಬುದು ಮುಖ್ಯವಲ್ಲ. ಎಷ್ಟು ವರ್ಷ ಆರೋಗ್ಯದಿಂದ ಬದುಕುತ್ತೇವೆ ಎಂಬುದು ಮುಖ್ಯ. ಗುಣಮಟ್ಟದ ಜೀವನ ಮುಖ್ಯ ಎಂದು ಪ್ರತಿಪಾದಿಸಿದರು.
ನಾನು ಥ್ರೆಡ್ ಮಿಲ್ ಬಳಸುತ್ತೇನೆ, ಪ್ರಾಣಾಯಾಮ ಮಾಡುತ್ತೇನೆ. ಚುನಾವಣೆ ಇರುವಾಗ ನಿಲ್ಲುಸುತ್ತಿದ್ದೆ. ಪುನಃ ಈಗ ಪ್ರಾರಂಭಿಸಲು ಕೆಲವು ದಿನವೇ ಬೇಕಾಗುತ್ತದೆ ಎಂದ ಅವರು, ತಮಗೆ ಕರೋನಾ ಎರಡು ಬಾರಿ ಬಂತು. ಕರೊನಾ ಬರುವ ಮುನ್ನ ಮಧುಮೇಹಕ್ಕೆ ಮಾತ್ರೆ ತೆಗೆದುಕೊಳ್ಳುತ್ತಿದ್ದೆ ಬಳಿಕ ಇನ್ಸುಲಿನ್‌ಗೆ ಹೋದೆ. ಇದರಿಂದ ಹೊಟ್ಟೆ ಬರಲು ಶುರುವಾಗಿದೆ ಹೇಗೋ ಮ್ಯಾನೇಜ್ ಮಾಡುತ್ತಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಈ ಸೂತ್ರ ಪಾಲಿಸಿ
1. ಪ್ರತಿವರ್ಷ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಆರೋಗ್ಯ ಸಮಸ್ಯೆ ಮುಂಚಿತವಾಗಿ ಅರಿವಿಗೆ ಬರುತ್ತದೆ.
2. ಹಿಂದೆಲ್ಲ ಸಾವಯವನ್ನೇ ಬೆಳೆಯುತ್ತಿದ್ದು, ಇಂದು ಆಹಾರದಲ್ಲಿ ಸತ್ವವೇ ಇಲ್ಲವಾಗಿದೆ. ಹೀಗಾಗಿ ಸಮತೋಲಿತ ಆಹಾರ ಮುಖ್ಯ.
3. ದೈಹಿಕ ಕಸರತ್ತು ಮಾಡುವುದು ಅತಿ ಮುಖ್ಯ. ಪ್ರತಿ ದಿನ ದೈಹಿಕ ಕಸರತ್ತು ಮಾಡುವುದಕ್ಕೆ ಆದ್ಯತೆ ಕೊಡಿ.
4. ದುಶ್ಚಟದ ಬಗ್ಗೆ ಗೊತ್ತಿದ್ದೂ ಗೊತ್ತಿದ್ದು ಬಲಿಯಾಗಬಾರದು. ಹೊಗೆಸೊಪ್ಪು ಉತ್ಪನ್ನಗಳಿಂದ ರೋಗ ಬರುವುದು ನೋಡುತ್ತಿದ್ದೇವೆ. ಒಳ್ಳೆಯ ಜೀವನ ಕ್ರಮ ರೂಡಿಸಿಕೊಳ್ಳಬೇಕು.
5. ಸಹವಾಸ ದೋಷವೂ ಒಂದೊಂದುಬಾರಿ ಕಾರಣ ಆಗಬಹುದು. ಎಚ್ಚರ ವಹಿಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.