

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ವಿಚಾರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಾಗಿದ್ದಾರೆ. ಆ ಮೂಲಕ ತಾನು ಸಾಚಾ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆಗ ಮಾತ್ರ ವಾಸ್ತವಿಕ ಸಂಗತಿಗಳು ಹೊರಬರುತ್ತವೆ. ಲೋಕ ವಿಚಾರಣೆಗೆ ಹಾಜರಾಗಿದ್ದರ ಬಣ್ಣ ಬಯಲಾಗುತ್ತದೆ ಎಂದರು.
ಅನಗತ್ಯ ಗೊಂದಲ, ಆತಂಕ ಸೃಷ್ಟಿಸಿದ ಸಚಿವ ಜಮೀರ್ ಅಹ್ಮದ್, ಅಬಕಾರಿ ಇಲಾಖೆಯಲ್ಲಿ ಮಾಸಿಕ ವಸೂಲಿ ಆರೋಪ ಎದುರಿಸುತ್ತಿರುವ ಸಚಿವ ಆರ್.ಬಿ.ತಿಮ್ಮಾಪುರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೃಷಿ ಜಮೀನು, ಮಠ-ಮಾನ್ಯಗಳ ಆಸ್ತಿಗಳನ್ನು ವಕ್ಫ್ ಎಂದು ಪಹಣಿ ಪತ್ರದಲ್ಲಿ ನಮೂದಿಸಿದ್ದರ ವಿರುದ್ಧ ರೈತರು, ಮಠಾಧೀಶರು ಬೀದಿಗೆ ಇಳಿದಿದ್ದಾರೆ. ನೋಟಿಸ್ ವಾಪಸ್ ಪಡೆದರಷ್ಟೇ ಸಾಲದು, ಮೂಲ ಸಮಸ್ಯೆ ಬಗೆಹರಿಸಿ, ವೃಥಾ ತೊಂದರೆ ನೀಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.
ಬೆಳಗಾವಿ ತಹಸೀಲ್ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಪ್ರಕರಣದ ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ. ಆ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಯಾರೊಬ್ಬರ ಮೇಲೂ ದೋಷಾರೋಪಣೆ ಮಾಡಲು ಬಯಸುವುದಿಲ್ಲ ಎಂದರು.
ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಎನ್‌ಡಿಎ, ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಬೇಸತ್ತ ಜನರು, ಕಾಂಗ್ರೆಸ್ ಪಕ್ಷದ ವಿರುದ್ಧ ತೀರ್ಪು ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೂರು ಕ್ಷೇತ್ರಗಳ ಉಪಚುನಾವಣೆ ಲಿತಾಂಶದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಉಂಟಾಗದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರದ ಭ್ರಷ್ಟಾಚಾರ, ಹಗರಣಗಳಿಗೆ ತಕ್ಕಶಾಸ್ತಿ ಸಂದೇಶವನ್ನು ಜನರು ರವಾನಿಸಲಿದ್ದಾರೆ ಎಂದು ಯಡಿಯೂರಪ್ಪ ವಿಶ್ಲೇಷಿಸಿದರು.