ಮತ್ತೆ ಟಿಪ್ಪು ಪರ ನಿಂತ ಸಿದ್ದರಾಮಯ್ಯ; ಸರ್ಕಾರದ ವಿರುದ್ಧ ಮಾಜಿ ಸಿಎಂ ಕಿಡಿ ಕಾರಲು ಕಾರಣವಿದು..

Tippu Siddu
Published on

ಮಂಡ್ಯ: ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿ ಆಗಿದ್ದಾಗ ಟಿಪ್ಪು ಸುಲ್ತಾನ್ ಪರವಹಿಸಿದ್ದಲ್ಲದೆ, ಟಿಪ್ಪು ಜಯಂತಿ ಆಚರಿಸಲು ಹಠಕ್ಕೆ ಬಿದ್ದು ಒಂದು ವರ್ಗದ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದರು. ಅದಾಗ್ಯೂ ಆಗಾಗ ಟಿಪ್ಪುವನ್ನು ವಹಿಸಿಕೊಂಡು ಮಾತನಾಡುತ್ತಲೇ ಬಂದಿರುವ ಸಿದ್ದರಾಮಯ್ಯ ಇದೀಗ ಮತ್ತೊಮ್ಮೆ ಟಿಪ್ಪು ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಈ ಸಲ ಅವರು ನೇರವಾಗಿ ಟಿಪ್ಪು ಸುಲ್ತಾನ್ ಪರವಾಗಿ ಮಾತನಾಡದಿದ್ದರೂ, ಪರೋಕ್ಷವಾಗಿ ಟಿಪ್ಪುವತ್ತ ತಮ್ಮ ಒಲವು ಇರುವುದನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರು ಇದೀಗ ಮತ್ತೊಮ್ಮೆ ಟಿಪ್ಪುವನ್ನು ವಹಿಸಿಕೊಂಡು ಮಾತನಾಡಲು ಕಾರಣ ಟಿಪ್ಪು ಎಕ್ಸ್​ಪ್ರೆಸ್​.

ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್​ಪ್ರೆಸ್​ ರೈಲಿಗೆ ಒಡೆಯರ್ ಎಕ್ಸ್​ಪ್ರೆಸ್ ಹಾಗೂ ಮೈಸೂರು-ತಾಳಗುಪ್ಪ ಎಕ್ಸ್​ಪ್ರೆಸ್​ ರೈಲಿಗೆ ಕುವೆಂಪು ಎಕ್ಸ್​ಪ್ರೆಸ್​ ಎಂದು ಮರು ನಾಮಕರಣ ಮಾಡಿ ರೈಲ್ವೆ ಇಲಾಖೆ ಇಂದು ಆದೇಶ ಹೊರಡಿಸಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮ್ಯಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಇಂದು ಮಂಡ್ಯದಲ್ಲಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಬಿಜೆಪಿಯವರು ಬರೀ ಧರ್ಮ ರಾಜಕೀಯ ಮಾಡುತ್ತಾರೆ. ಒಡೆಯರ್ ಹೆಸರು ಇಡಲಿ ಪರವಾಗಿಲ್ಲ. ಆದರೆ ಬೇರೆ ರೈಲುಗಳು ಇರಲೇ ಇಲ್ವಾ? ಎಂದು ಪ್ರಶ್ನಿಸುವ ಮೂಲಕ ಟಿಪ್ಪು ಎಕ್ಸ್​ಪ್ರೆಸ್​ ಹೆಸರನ್ನು ತೆಗೆದು ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಯಾವಾಗಲೂ ಜಾತಿ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಬರೀ ದ್ವೇಷ ಹುಟ್ಟು ಹಾಕುವ ಕೆಲಸ ಮಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net