ಮಹಿಳೆಯರಿಗೆ ರಾಜಕೀಯದಲ್ಲಿ ಪಾಲು ಸಿಕ್ಕಿದ್ದರೆ, ಸಂವಿಧಾನಕ್ಕೆ ತಂದ ಈ ತಿದ್ದುಪಡಿಗಳು ಕಾರಣ: ಸಿಎಂ

ವಿಜಯವಾಣಿ-2024-08-20T154306.128
Published on

ಬೆಂಗಳೂರು: ಇಂದು ಕೆಪಿಸಿಸಿ ಕಚೇರಿಯಲ್ಲಿ ಸದ್ಭಾವನಾ ದಿನಾಚರಣೆ ಹಾಗೂ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜೀವ್ ಗಾಂಧಿ ಹಾಗೂ ದೇವರಾಜ ಅರಸುರವರ ಬದುಕು- ಕೆಲಸಗಳು ನಮಗೆ ಮಾರ್ಗದರ್ಶಿಯಾಗಿದೆ. ಅವರ ಹಾದಿಯಲ್ಲಿ ನಾವು ನಡೆಯಬೇಕು. ರಾಜೀವ್‌ ಗಾಂಧಿಯವರು ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರಧಾನಿಯಾಗಿದ್ದರು. ಅವರು ಪಿಎಂ ಆಗಿದ್ದಾಗ ಆಧುನಿಕ ಭಾರತದ ಕನಸನ್ನು ಕಂಡಿದ್ದರು. ಯುವಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟುಕೊಂಡಿದ್ದರು ಎಂದರು.

"ವಿಶೇಷವಾಗಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಪಾಲು ಸಿಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಜಾರಿಗೆ ತಂದರು. ಈ ದೇಶದಲ್ಲಿ ಏನಾದರೂ ಮಹಿಳೆಯರಿಗೆ ರಾಜಕೀಯದಲ್ಲಿ ಪಾಲು ಸಿಕ್ಕಿದ್ದರೆ, ಸಂವಿಧಾನಕ್ಕೆ ತಂದ ಈ ತಿದ್ದುಪಡಿಗಳು ಕಾರಣ. ಬಿಜೆಪಿಯವರು ತಾವು ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರ ಪರ ಎಂದು ಎಷ್ಟೇ ಹೇಳಿಕೊಂಡರೂ, ಅವರು ಬಡವರು, ದಲಿತರು, ಅಲ್ಪಸಂಖ್ಯಾತರ ಪರ ಇರಲು ಸಾಧ್ಯವೇ ಇಲ್ಲ. ಅವರದ್ದು ಬಾಯಿ ಮಾತೇ ಬೇರೆ, ಕೃತಿಯೇ ಬೇರೆ" ಎಂದು ವ್ಯಂಗ್ಯವಾಡಿದರು.

"ಇಂದು ದೇಶದ ಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಗೆ ರಾಜೀವ್ ಗಾಂಧಿಯವರು ಕಾರಣ. ಯುವ ಶಕ್ತಿ ಮೇಲೆ ಅವರು ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಆದ್ದರಿಂದ ಮತದಾನದ ವಯಸ್ಸು 21ರಿಂದ 18ಕ್ಕೆ ಇಳಿಸಿದರು. ಅವರು ಇನ್ನೂ ಬದುಕಿರಬೇಕಾಗಿತ್ತು. ಅವರು ಇದ್ದಿದ್ದರೆ ದೇಶದಲ್ಲಿ ನಿಜವಾದ ಬದಲಾವಣೆ ಆಗಿರುತ್ತಿತ್ತು. ದೇಶ, ಸಮಾಜದ ಬಗ್ಗೆ ಕಾಳಜಿ ಇದ್ದವರು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನು ಅಗಲಿದರು. ದೇವರಾಜ ಅರಸು ಅವರು 1972ರಿಂದ ದೀರ್ಘಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು" ಎಂದರು.

"ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಹಾವನೂರ ಆಯೋಗ ರಚನೆ ಮಾಡಿ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಒದಗಿಸಿದರು. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ರಾಜಕೀಯವಾಗಿ ಗುರುತಿಸಿ, ಅವರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಕೊಟ್ಟರು. ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವೇ ಇಲ್ಲ ಎಂದುಕೊಂಡವರೂ ವಿಧಾನಸೌಧ ಪ್ರವೇಶಿಸುವಂತೆ ಮಾಡಿದರು. ಅರಸು ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಜಾಫರ್‌ ಷರೀಫ್‌ ಅವರಿಗೆ ಟಿಕೆಟ್‌ ಕೊಟ್ಟರು. ನಾಗರತ್ನಮ್ಮ ಜಟಕಾ ಗಾಡಿ ಓಡಿಸುವವರಿಗೆ ಟಿಕೆಟ್‌ ಕೊಡ್ತೀಯಲ್ಲ ಎಂದು ಕೇಳಿದರು. ನೋಡಮ್ಮ, ಇನ್ಮೇಲೆ ಜಟಕಾ ಸಾಹೇಬರಿಗೆ, ಕ್ಷೌರ ಮಾಡುವವರಿಗೆ ಟಿಕೆಟ್‌ ಕೊಡೋದು, ಶೋಕಿ ಮಾಡುವವರಿಗಲ್ಲ ಎಂದು ಅರಸುರವರು ಉತ್ತರಿಸಿದ್ದರಂತೆ” ಎಂದು ಹೇಳಿದರು.

"ಮಲ ಹೊರುವ ಪದ್ಧತಿ, ಜೀತ ಪದ್ಧತಿ ನಿಷೇಧ, ಸಾಲ ಮನ್ನಾ ಇಂತಹ ಅನೇಕ ಪ್ರಗತಿಪರ ಕಾನೂನುಗಳನ್ನು ಮಾಡಿದ ದೇವರಾಜ ಅರಸು ಅವರು, ಅರಸು ಮನೆತನದಲ್ಲಿ ಹುಟ್ಟಿದರೂ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದರು. ಅಂತೆಯೇ ಕಾಂಗ್ರೆಸ್‌ ಪಕ್ಷ ಅಸಮಾನತೆಯನ್ನು ಹೋಗಲಾಡಿಸಲು ಬಯಸುತ್ತದೆ. ಈಗಲೂ ಅಸಮಾನತೆ ವಿರುದ್ಧ ಹೋರಾಟ ಮಾಡುತ್ತಿದೆ. ಅದಕ್ಕೆ ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಅಸಮಾನತೆ ವಿರುದ್ಧ ಕಾರ್ಯಕ್ರಮ ನೀಡುತ್ತೇನೆಂಬ ಕಾರಣಕ್ಕೇ ಬಿಜೆಪಿ ನನ್ನನ್ನು ಸಹಿಸುತ್ತಿಲ್ಲ" ಎಂದರು.

"ಈಗ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಕ್ಕೆ ಹೊಟ್ಟೆಯುರಿಯಿಂದ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ನಾನು ಹೆದರಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧನಾಗಿ ನಿಂತಿದ್ದೇನೆ" ಎಂದು ಬಿಜೆಪಿ ನಾಯಕರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net