ಪಂಚ ರಾಜ್ಯಗಳ ಚುನಾವಣೆ: ಮೂರು ರಾಜ್ಯಗಳಲ್ಲಿ ಗೆಲ್ಲಲಿದೆಯಂತೆ ಕಾಂಗ್ರೆಸ್​!

Untitled design (79)
Published on

ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಹಂಚಿಕೊಂಡ ಸಿಎಂ ಸಿದ್ದರಾಮಯ್ಯ, "ನನಗೆ ದೊರೆತಿರುವ ಮಾಹಿತಿಯ ಪ್ರಕಾರ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ ಪಕ್ಷ ಗೆಲುವು ಸಾಧಿಸಲಿದೆ" ಎಂದು ಹೇಳಿದ್ದಾರೆ.

ಈ ಕುರಿತಂತೆ ಹೆಚ್ಚಿನ ಮಾಹಿತಿ ಹಂಚಿಕೊಂಡ ಸಿಎಂ, "ಪಂಚ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ನನಗಿರುವ ಮಾಹಿತಿಯ ಪ್ರಕಾರ ಮೂರು ರಾಜ್ಯಗಳಲ್ಲಿ ನಮ್ಮ ಪಕ್ಷ ಗೆಲ್ಲಲಿದೆ. ಇದರ ಫಲಿತಾಂಶದಿಂದ ಲೋಕಸಭಾ ಚುನಾವಣೆ ಮುಂದೂಡಲಾಗುವುದಿಲ್ಲ. ಏಕೆಂದರೆ ಈಗಾಗಲೇ ನವೆಂಬರ್ ಕೊನೆಯಲ್ಲಿದ್ದೇವೆ, ಚುನಾವಣಾ ನೀತಿ ಸಂಹಿತೆ ಮಾರ್ಚ್ ಅಂತ್ಯಕ್ಕೆ ಆಗಬಹುದು ಎಂಬ ನಿರೀಕ್ಷೆಯಿದೆ" ಎಂದರು.

"ಜನವರಿ 22ರಂದು ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು, ಇದರಿಂದ ಬಿಜೆಪಿಗೆ ರಾಜಕೀಯ ಲಾಭವಾಗಲ್ಲ. ವಿವಾದ ಬಹಳ ವರ್ಷಗಳಿಂದ ಇದ್ದು, ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ರಾಮಮಂದಿರ ಕಟ್ಟಲು ನಮ್ಮದೇನು ವಿರೋಧವಿಲ್ಲ. ಅದರಿಂದ ಮತದಾರರು ಬದಲಾಗುತ್ತಾರೆ ಎನ್ನುವುದು ಸುಳ್ಳು. ನಮ್ಮ ದೇಶದ ಜನ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಂಡಿದ್ದಾರೆ. ಬ್ರಿಟಿಷರ ಹಾಗೂ ಮೊಘಲರ ದಾಳಿಯಾದರೂ ಒಂದು ದೇಶವಾಗಿ ನಾವು ಉಳಿದುಕೊಂಡಿದ್ದೇವೆ. ಈ ದೇಶದಲ್ಲಿ ಅನೇಕ ಜಾತಿ, ಭಾಷೆಗಳು ಹಾಗೂ ಧರ್ಮಗಳಿದ್ದರೂ ದೇಶವಾಗಿ ಒಂದಾಗಿರುವುದು ಜನರ ನಡುವಿನ ಐಕ್ಯತೆ, ಒಗ್ಗಟ್ಟಿನಿಂದ. ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟವರು ದೇಶದಲ್ಲಿ ಹೆಚ್ಚಿದ್ದಾರೆ" ಎಂದು ಹೇಳಿದರು.

"ಬೇರೆ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರು ಕರ್ನಾಟಕವನ್ನು ಟೀಕೆ ಮಾಡುತ್ತಿದ್ದಾರೆ. ಅದಕ್ಕೆ ಅವರು ಮಧ್ಯಪ್ರದೇಶದಲ್ಲಿ ನನ್ನ ಹಾಗೂ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿಗಳಿಗೆ ವಿರೋಧ ಮಾಡಿದ್ದರು. ಈಗ 'ವಿಕಸಿತ್ ಭಾರತ್' ಎಂದು ವ್ಯಾನ್ ಕಳಿಸಿ ಅದರಲ್ಲಿ ಪಿಎಂ ಗ್ಯಾರಂಟಿ ಎಂದು ಬರೆದಿದ್ದಾರೆ. ಅದನ್ನು ಭಾರತದ ಸರ್ಕಾರ ಕಳುಹಿಸಿದೆ. ಮೊದಲು ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿ ಈಗ ಅವರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇದನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯದೆ ಬೇರೇನು ಹೇಳಬೇಕು?" ಎಂದು ಟೀಕಿಸಿದರು.

"ರಾಜ್ಯ ಸರ್ಕಾರಕ್ಕೆ ಬರಪರಿಹಾರ ನೀಡುವ ಸಂಬಂಧ ಕೇಂದ್ರವನ್ನು ಹಲವು ಬಾರಿ ಒತ್ತಾಯಿಸಿದ್ದೇವೆ. ಕೇಂದ್ರದಿಂದ 17,900 ಕೋಟಿ ರೂ.ಗಳ ಬರಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿ ಒಂದು ತಿಂಗಳಾದರೂ ಕೂಡ ವರದಿಯನ್ನು ನೀಡಿಲ್ಲ ಹಾಗೂ ನಮ್ಮ ಸರ್ಕಾರದ ಮನವಿಗೆ ಕೇಂದ್ರ ಇದುವರೆಗೂ ಸ್ಪಂದಿಸಿಲ್ಲ. ಬರಪರಿಹಾರ ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ. ಎನ್​ಡಿಆರ್​ಎಫ್​ನಡಿ ಪರಿಹಾರವನ್ನು ನೀಡಬೇಕಿದ್ದು, ಅದನ್ನು ರಾಜ್ಯ ನೀಡಿರುವ ತೆರಿಗೆಯ ಮೊತ್ತವೇ ಆಗಿದೆ. ಬರಪರಿಹಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಗಳನ್ನು ನಡೆಸಲಾಗಿದೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net