ನಾಳೆಯೂ ಪ್ರಧಾನಿ ರೋಡ್​ ಶೋ; ಟ್ವೀಟ್​ ಮಾಡಿ ಕಿಡಿಕಾರಿದ ಸಿದ್ದರಾಮಯ್ಯ

Siddaramaiah
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಹೆಚ್ಚಾಗುತ್ತಿದ್ದು ಕಾಂಗ್ರೆಸ್​ ಹಾಗೂ ಬಿಜೆಪಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಇನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್​ ಶೋ ಹಮ್ಮಿಕೊಂಡಿರುವುದನ್ನು ಖಂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್​ಗಳನ್ನು ಮಾಡುವ ಮೂಲಕ ಕಿಡಿಕಾರಿದ್ದಾರೆ.

ಯಾರು ಹೊಣೆ ?

ಈ ಕುರಿತು ಟ್ವೀಟ್​ ಮಾಡಿರುವ ಸಿದ್ದು ನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಧಿಕ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋವನ್ನು ಒಂದು ದಿನ ಮುಂದಕ್ಕೆ ಹಾಕಬಹುದು ಆದರೆ ವಿದ್ಯಾರ್ಥಿಗಳು ಪರೀಕ್ಷೆ ನಾಳೆ ಬರೆಯುತ್ತೇನೆ ಎಂದರೆ ಆಗುತ್ತಾ. ವಿನಾಶಕಾಲೇ ವಿಪರೀತ ಬುದ್ದಿ ಎನ್ನುವ ಹಾಗಿದೆ ಬಿಜೆಪಿಯ ಹಠಮಾರಿತನ.

ಹೊಣೆಗೇಡಿತನ ಮತ್ತು ದುರಹಂಕಾರ

ಜನಾಕ್ರೋಶಕ್ಕೆ ಮಣಿದು ರೋಡ್ ಶೋವನ್ನು ರದ್ದುಗೊಳಿಸುವುದು ಬಿಟ್ಟು ಅದನ್ನು ಸಮರ್ಥಿಸಿಕೊಂಡು, ವಿರೋಧಿಸುವವರ ಮೇಲೆ ಎರಗುತ್ತಿರುವುದು ಬಿಜೆಪಿ ನಾಯಕರ ತಲೆಗೇರಿರುವ ಅಧಿಕಾರದ ಮದವನ್ನು ತೋರಿಸುತ್ತದೆ.

ರೋಡ್ ಶೋ ದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿದ್ದರೆ ಅವರು ಮುಂಚಿತವಾಗಿ ಹೋಗಿ ಉಳಿದುಕೊಳ್ಳಲ್ಲಿ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಅತ್ಯಂತ ಹೊಣೆಗೇಡಿತನ ಮತ್ತು ದುರಹಂಕಾರದ್ದು. ಬಡ ವಿದ್ಯಾರ್ಥಿಗಳಿಗೆ ಇದು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಗುಲಾಮಗಿರಿಯ ಉದಾಹರಣೆ

ವಿದ್ಯಾರ್ಥಿಗಳು ಅನುಭವಿಸಬೇಕಾಗಿರುವ ಕಷ್ಟಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದು ರೋಡ್ ಶೋ ರದ್ದು ಮಾಡಬೇಕಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರೋಡ್ ಶೋವನ್ನು ಸಮರ್ಥಿಸುತ್ತಿರುವುದು ಸಚಿವರ ಗುಲಾಮಗಿರಿ ಮನಸ್ಥಿತಿಗೆ ಒಂದು ಉದಾಹರಣೆ.

ಜವಾಬ್ದಾರಿ ಸ‍್ಥಾನದಲ್ಲಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ತಮ್ಮ ನಾಯಕನಿಗೆ ಸರಿಯಾದ ಸಲಹೆ ಕೊಡುವ ಧೈರ್ಯವಿಲ್ಲ. ಇದರ ಬದಲಾಗಿ ಅವರು ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಲು ಹೊರಟಿದ್ದಾರೆ ಇದು ಖಂಡನೀಯ.

ಸಾಮಾನ್ಯ ಜನರ ಗತಿಯೇನು

ಪ್ರಧಾನಿ ಅವರ ರೋಡ್‌ ಶೋ ಕಾರಣಕ್ಕೆ ನನ್ನ ಸಂಚಾರಕ್ಕೂ ಪೊಲೀಸರು ನಿರ್ಬಂಧ ಹಾಕಿದ್ದರು. ಮೋದಿ ಅವರು ಹೊಸಪೇಟೆಗೆ ಹೋಗುತ್ತಿದ್ದರು, ನಾನು ಗಂಗಾವತಿಗೆ ಹೊರಟಿದ್ದೆ.

ಮೋದಿ ಅವರು ಹೋಗುತ್ತಿರುವ ಕಾರಣಕ್ಕೆ ನನಗೆ ಗಂಗಾವತಿ ಹೋಗಲು ಅನುಮತಿಯನ್ನೇ ನೀಡಿಲ್ಲ. ವಿಧವಿಧವಾಗಿ ನಾನು ಮನವಿ ಮಾಡಿದೆ, ಆದರೂ ಅನುಮತಿ ಕೊಡಲಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕನಿಗೆ ಹೀಗಾದರೆ, ಸಾಮಾನ್ಯ ಜನರ ಗತಿಯೇನು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net