ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ

basavaraj bommai
Published on

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಅಭಿವೃದ್ಧಿಗೆ ಹಣವಿಲ್ಲವೆಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಆಂತರಿಕ ಸಭೆಯಲ್ಲಿ ಹೇಳಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿವೃದ್ಧಿಗೆ ಹಣವಿಲ್ಲವೆಂದಿದ್ದಾರೆ. ಸರ್ಕಾರದ ವೈಫಲ್ಯಗಳಿಗೆ ಕಾಂಗ್ರೆಸ್ ಶಾಸಕರೇ ಅತೃಪ್ತಿಯೇ ಕೈಗನ್ನಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದು ಮುಂದುವರಿಸಿದ್ದು, ಪದೇ ಪದೆ ಸುಳ್ಳುಗಳನ್ನು ಹೇಳಿದರೆ ಸತ್ಯವಾಗುವುದಿಲ್ಲ ಎಂದು ತಿವಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಉಳಿತಾಯ ಬಜೆಟ್ ಮಾಡಿದ್ದೆವು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಕೊರತೆ ಬಜೆಟ್ ಮಂಡಿಸಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ದಲಿತರ, ರೈತರ, ಬಡವರ ಹಣ ಕಡಿತ ಮಾಡಿದ್ದಾರೆ. ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಮೀಸಲಿಟ್ಟಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಕರೊನಾ ಸಂಕಷ್ಟ ಕಾಲದಲ್ಲೂ ಸರ್ಕಾರ ನೌಕರರಿಗೆ ನಾವು ಸಂಬಳ ಪಾವತಿಸಿದ್ದೆವು. ಈಗ ಸಾರಿಗೆ ನಿಗಮಗಳ ಸಿಬ್ಬಂದಿಗೆ ಪೂರ್ಣ ಸಂಬಳ ಕೊಡಲಾಗುತ್ತಿಲ್ಲ. ಪೊಲೀಸರಿಗೆ ಸಂಬಳ ನೀಡುತ್ತಿಲ್ಲ, ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net