ಸಿದ್ದರಾಮಯ್ಯ ರಾಜಕೀಯ ವರ್ಚಸ್ಸು ಹೆಚ್ಚಿಸಿದ ಸಮಾವೇಶ; ತಮ್ಮದೇ ಗರಡಿಯಲ್ಲಿ ವಿರೋಧಿಗಳನ್ನು ಕಟ್ಟಿ ಹಾಕಿದ ಸಿಎಂ

siddaramaiah
Published on

ಶಿವಾನಂದ ತಗಡೂರು, ಬೆಂಗಳೂರು:

ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ ಮಾಡುವ ಜನಸಾಗರದಲ್ಲಿ ಮಿಂದೆದ್ದಿರುವ ಸಿಎಂ ಸಿದ್ದರಾಮಯ್ಯ ಅವರು, ರಾಜಕೀಯವಾಗಿ ಇನ್ನಷ್ಟು ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.

ಆ ಮೂಲಕ ಎದುರಾಳಿಗಳನ್ನು ಒಂದೇ ಏಟಿಗೆ ಕಟ್ಟಿ ಹಾಕಿರುವುದು ಅಷ್ಟೆ ಅಲ್ಲ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತವರಿನಲ್ಲಿಯೇ ತೊಡೆ ಪಂಥಾಹ್ವಾನ ನೀಡಿದ್ದಾರೆ.

ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಗೆದ್ದ ಸಂಭ್ರಮದಲ್ಲಿ ಬೀಗುತ್ತಲೇ ಜೆಡಿಎಸ್‌ನ ಮತ್ತೊಂದು ಭದ್ರಕೋಟೆ ಒಕ್ಕಲಿಗರ ಪ್ರಭಾವವಿರುವ ಬೇರುಗಳ ಕ್ಷೇತ್ರದಲ್ಲಿ ತಮ್ಮದೇ ರಾಜಕೀಯ ಹಿಡಿತ ಸಾಧಿಸುವಲ್ಲಿ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ರಾಜಕೀಯ ಬಿರುಗಾಳಿ:

ಮುಡಾ ಹಗರಣ, ವಾಲ್ಮೀಕಿ ಹಗರಣ, ವಕ್ಫ್ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಹಣಿಯಲು ಮುಂಚೂಣಿಯಲ್ಲಿದ್ದ ದಳಪತಿಗಳ ಬಿಡಾರದಲ್ಲಿ ರಾಜಕೀಯ ಅತಂತ್ರದ ಬಿರುಗಾಳಿ ಎಬ್ಬಿಸುವಲ್ಲಿ ಜನ ಕಲ್ಯಾಣ ಸಮಾವೇಶ ಯಶಸ್ವಿಯಾಗಿದೆ. ಇದೆಲ್ಲವನ್ನೂ ಮೆಟ್ಟಿ ನಿಂತು ರಾಜಕೀಯ ಹಿಡಿತ ಉಳಿಸಿಕೊಳ್ಳುವ ಸವಾಲಿನ ಅನಿವಾರ್ಯತೆ ಜೆಡಿಎಸ್‌ಗೆ ಎದುರಾಗಿದೆ.

ಜನಸಾಗರದ ಶಕ್ತಿ:

3 ಉಪ ಚುನಾವಣೆಗಳನ್ನು ಗೆದ್ದ ಮಾತ್ರಕ್ಕೆ ಸಿದ್ದರಾಮಯ್ಯ ಅವರಿಗೆ ಯಾಕೋ ಸಮಾಧಾನವಾಗಲಿಲ್ಲ. ರಾಮನಗರ ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಕೈ ವಶವಾದರೂ

ಹಾಸನದಲ್ಲೊಂದು ತಮ್ಮ ರಾಜಕೀಯ ಶಕ್ತಿ ಸಮಾರ್ಥ್ಯವನ್ನು ಸಾಭೀತುಪಡಿಸಬೇಕು ಎನ್ನುವ ಉಮೇದು ಮಾತ್ರ ಹೆಚ್ಚುತ್ತಲೇ ಇತ್ತು. ದೇವೇಗೌಡರ ಗರಡಿಯಲ್ಲಿ ಪಳಗಿ ಬಂದ ಸಿದ್ದರಾಮಯ್ಯಗೆ ಅವರದೇ ತವರು ನೆಲದಲ್ಲಿ ಜನಸಾಗರದ ಮೂಲಕ ಉತ್ತರ ನೀಡಬೇಕು ಎನ್ನುವ ಬಯಕೆ ಒಂದೂವರೆ ವರ್ಷಗಳ ಬಳಿಕ ಈಡೇರಿದೆ.

ಸ್ವಪಕ್ಷೀಯರಿಗೂ ಎಚ್ಚರಿಕೆ ಸಂದೇಶ:

ತಾವು ಅಂದುಕೊಂಡಿದ್ದನ್ನು ಎಲ್ಲೂ ಎಡವದೆ ಸಾಧಿಸಿರುವುದು ಸಿದ್ದರಾಮಯ್ಯ ಅವರ ಹೆಗ್ಗಳಿಕೆ. ಮತ್ತೊಂದೆಡೆ ಮಗ್ಗಲಲ್ಲೇ ಇರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಎಚ್ಚರಿಕೆ ಸಂದೇಶವನ್ನು ಪರೋಕ್ಷವಾಗಿ ರವಾನಿಸುವಲ್ಲಿಯೂ ಸಮಾವೇಶ ಯಶಸ್ವಿಯಾಗಿದೆ.

ಸ್ವಾಭಿಮಾನದ ಸಮಾವೇಶ ಮಾಡಲು ಹೊರಟಿದ್ದಕ್ಕೆ ತಡೆ ಹಾಕಿದ್ದ ಡಿಕೆಶಿ, ಈ ಸಮಾವೇಶದಲ್ಲಿ ಸಿಗುವ ಕ್ರೆಡಿಟ್ ಪಕ್ಷಕ್ಕೆ ಸಂದಾಯವಾಗಲಿ ಎನ್ನುವ ಇರಾದೆ ಇತ್ತು. ಆದರೆ, ಅದ್ಯಾವುದೂ ಲಿಸಿಲ್ಲ.

ಒಕ್ಕೊರಲಿನ ಕೂಗು:

ಸಮಾವೇಶದಲ್ಲಿ ಭಾಗವಹಿಸಿದ್ದ ಜನ ಸಮುದಾಯ ಒಕ್ಕೊರಲಿನಿಂದ ಸಿದ್ದರಾಮಯ್ಯನೇ ನಮ್ಮ ನಾಯಕ ಎಂದು ಕೂಗಿ ಕೂಗಿ ಹೇಳಿದೆ. ಆ ಮೂಲಕ ಸಿದ್ದರಾಮಯ್ಯ ತಮ್ಮದೇ ಗರಡಿಯ ಒಳ ಸುಳಿಯಲ್ಲಿ ಡಿಕೆಶಿ ರಾಜಕೀಯ ವೇಗಕ್ಕೆ ಬ್ರೇಕ್ ಹಾಕುವಲ್ಲಿಯೂ ಯಶಸ್ವಿಯಾಗಿರುವುದನ್ನು ಆ ಪಕ್ಷದ ಮುಖಂಡರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಸಮಾವೇಶ ಪಕ್ಷದೊಳಗಿರುವ ಹಿತ ಶತ್ರುಗಳಿಗೆ ತಕ್ಕ ಉತ್ತರ ನೀಡಿದೆ. ಆ ಮೂಲಕ ರಾಜಕೀಯವಾಗಿ ಸಿದ್ದರಾಮಯ್ಯ ಇನ್ನಷ್ಟು ಗಟ್ಟಿ ಎನ್ನುವ ಸಂದೇಶವನ್ನು ರವಾನಿಸಿದೆ.

ರಾಜಕೀಯ ಪಟ್ಟು:

ಮುಂದೆ ಬಂದೆರಗಬಹುದಾದ ರಾಜಕೀಯ ಅಲೆಗಳಿಗೆ ಸಮಾವೇಶದ ಮೂಲಕ ಪ್ರತಿರೋಧ ತಂತ್ರವನ್ನು ಎಣೆದಿರುವ ಸಿದ್ದರಾಮಯ್ಯ ಅವರ ರಾಜಕೀಯ ಪಟ್ಟುಗಳಿಗೆ ವಿರೋಧ ಪಕ್ಷವಷ್ಟೆ ಅಲ್ಲ, ಕೈ ಪಕ್ಷದ ಒಳಗೆ ಹೊರಗಿನ ಹಿತಶತ್ರುಗಳು ಕಕ್ಕಾಬಿಕ್ಕಿಯಾಗಿರುವುದಂತೂ ದಿಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net