

ಬೆಂಗಳೂರು: ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಮಸೂದೆ ಮತ್ತು ಲವ್ ಜಿಹಾದ್ ಕುರಿತಾಗಿ ಮಸೂದೆ ಮಂಡನೆಯಾಗಬೇಕು ಎನ್ನುವ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಸೂದೆಯ ಕುರಿತಾಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ. ಗೋಹತ್ಯೆ ನಿಷೇದ ಮಸೂದೆ ಮಂಡನೆಯಾದರೆ ನಾವು ಅದನ್ನು ವಿರೋಧ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಸ್ಲಿಂ ನಿಯೋಗ ಬಂದು ನನ್ನ ಜತೆ ಚರ್ಚೆ ಮಾಡಿದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡ್ತೀವಿ ಅಂತ ಸರ್ಕಾರ ಹೇಳಿದೆ. ಹೀಗಾಗಿ ಆತಂಕದಿಂದ ನನ್ನ ಭೇಟಿ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಂತಹ ಕಾನೂನು ಇಲ್ಲ. ಇಲ್ಲಿ ಯಾಕೆ ಮಾಡಬೇಕು? ಬಿಜೆಪಿ ಅಧಿಕಾರಲ್ಲಿರುವ ಗೋವಾದಲ್ಲಿ ಇಂತಹ ಕಾನೂನನ್ನು ಯಾಕೆ ಜಾರಿ ಮಾಡಲ್ಲ. ನಾವಂತೂ ಈ ಬಿಲ್ ಅನ್ನು ವಿರೋಧಿಸುತ್ತೇವೆ. ಈ ಹಿಂದಿನ ಕಾನೂನೇ ಮುಂದುವರಿಯಲಿ ಎಂದು ಅವರು ಹೇಳಿದ್ದಾರೆ.
ಲವ್ ಜಿಹಾದ್ ಬಗ್ಗೆ ಮಾತನಾಡಿರುವ ಅವರು, 'ಲವ್ ಜಿಹಾದ್ ಕಾನೂನು ವಿವೇಕ ಇಲ್ಲದೇ ತರುತ್ತಿರುವ ಕಾನೂನು. 18 ವರ್ಷದ ಬಳಿಕ ಮದುವೆ ಆಗುವುದು ಅವರಿಗೆ ಬಿಟ್ಟಿದ್ದು. ಯಾರನ್ನೂ ತಡೆಯಲು ಸಾಧ್ಯವಿಲ್ಲ. ಸಂವಿಧಾನ ವಿರೋಧಿ ತಿದ್ದುಪಡಿ. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಇದೊಂದು ರಾಜಕೀಯ ದುರುದ್ದೇಶದ ಕಾನೂನು. ರಾಜ್ಯದಲ್ಲಿ ಶಾಂತಿ ಭಂಗ ಮಾಡಲು ಈ ಕಾನೂನು ತರಲು ಹೊರಟಿದ್ದಾರೆ' ಎಂದು ದೂರಿದ್ದಾರೆ.
ಗೋ ಹತ್ಯೆ ನಿಷೇಧ ಬಿಲ್ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ನಿಯೋಗ ವಿಧಾನಸೌಧದ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.