ಮುಂದುವರಿದ ವರ್ಗಾವಣೆಗಳಿಗೆ ಆಕ್ಷೇಪ; ಇಲಾಖೆ ಮುಖ್ಯಸ್ಥರ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ

vidhanasoudha
Published on

ಬೆಂಗಳೂರು: ವರ್ಗಾವಣೆ ನಿಯಮ ಉಲ್ಲಂಸಿ ಸದ್ದಿಲ್ಲದೇ ಮುಂದುವರಿದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ಈ ರೀತಿ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೇ ಶಿಸ್ತುಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದೆ.

ನಿಗದಿತ ವರ್ಗಾವಣೆ ಅವಧಿಯ ನಂತರವೂ ಇಲಾಖೆ ಹಂತದಲ್ಲಿ ವರ್ಗಾವಣೆ ಜಾರಿಗೊಳಿಸಿ ನಂತರ ಘಟನೋತ್ತರ ಅನುಮೋದನೆಗಾಗಿ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುತ್ತಿದೆ. ಈ ಬೆಳವಣಿಗೆ ಅಸಮಾಧಾನಕ್ಕೆ ಕಾರಣವಾಗಿದೆ.

- ನಿಯಮ ಹೇಳೋದೇನು?

ಯಾವುದೇ ರೀತಿಯ ಅವಧಿಪೂರ್ವ ವರ್ಗಾವಣೆಗಳನ್ನು ಹಾಗೂ ಸಾಮಾನ್ಯ ವರ್ಗಾವಣಾ ಅವಧಿ ಮುಗಿದ ನಂತರ ವರ್ಗಾವಣೆ ಮಾಡುವುದಕ್ಕೆ ಮುಖ್ಯಮಂತ್ರಿಯವರ ಅನುಮೋದನೆ ತಪ್ಪದೇ ಪಡೆಯಬೇಕು.

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಯವರು ಯಾವುದೇ ಪ್ರಸಂಗದಲ್ಲಿ ಮೊದಲು ವರ್ಗಾವಣೆ ಮಾಡಿ ನಂತರ ಮುಖ್ಯಮಂತ್ರಿಯವರ ಸ್ಥಿರೀಕರಣ, ಘಟನೋತ್ತರ ಅನುಮೋದನೆ ಪಡೆಯತಕ್ಕದಲ್ಲ ಎಂಬುದು ವರ್ಗಾವಣೆ ನಿಯಮದಲ್ಲಿರುವ ಪ್ರಧಾನ ಅಂಶವಾಗಿದೆ.

- ಅವಧಿ ಮುಗಿದಿದ್ದು ಯಾವಾಗ?

2023-24ನೇ ಸಾಲಿಗೆ ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರಷ್ಟನ್ನು ಮೀರದಂತೆ ಜೂ.1ರಿಂದ ಜುಲೈ 3ರವರೆಗೆ ಸಾರ್ವತ್ರಿಕ ವರ್ಗಾವಣೆಗಳನ್ನು ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಿ ಆದೇಶಿಸಲಾಗಿತ್ತು. ಅಂದರೆ ಜುಲೈ 3ರ ನಂತರ ಯಾವುದೇ ವರ್ಗಾವಣೆ ಆಗಬೇಕಾದರೂ ಸಿಎಂ ಒಪ್ಪಿಗೆ ಬೇಕಾಗುತ್ತಿತ್ತು. ಆದರೆ ನೂರಾರು ಪ್ರಕರಣಗಳಲ್ಲಿ ಸಿಎಂ ಗಮನಕ್ಕೆ ಬಾರದೆ ವರ್ಗಾವಣೆ ಪ್ರಕ್ರಿಯೆ ಮುಗಿಸಿ ಬಳಿಕ, ಸಿಎಂ ಸಹಿ ಹಾಕಿರುವ ಹಾಗೂ ಹಿಂದಿನ ದಿನಾಂಕಕ್ಕೆ ವರ್ಗಾವಣೆ ಆದೇಶ ಹೊರಡಿಸಿರುವ ಉದಾಹರಣೆಗಳು ಸಹ ಇವೆ.

- ಎಚ್ಚರಿಕೆ

ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆಯನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮಾಡುವುದು ಅತ್ಯಗತ್ಯವಾಗಿದ್ದಲ್ಲಿ ಮುಖ್ಯಮಂತ್ರಿಯವರು ಪೂರ್ವಾನುಮೋದನೆ ಪಡೆಯಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ ಪೂರ್ವಾನುಮೋದನೆ ಪಡೆಯದೇ ಯಾವುದೇ ವರ್ಗಾವಣೆ ಮಾಡಿದಲ್ಲಿ ಸಂಬಂಧಪಟ್ಟ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಇಲಾಖಾ ಮುಖ್ಯಸ್ಥರನ್ನು ನೇರ ಜವಾಬ್ದಾರರನ್ನಾಗಿಸಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net