

ಬೆಂಗಳೂರು: ಪಕ್ಷದೊಳಗಿನ ಆಂತರಿಕ ಕಲಹದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಮನಿರಸನಗೊಂಡಿದ್ದಾರೆ. ಆಡಳಿತಕ್ಕೆ ಬಂದು 3 ತಿಂಗಳಲ್ಲಿ ಇಷ್ಟು ಜನವಿರೋಧಿ ಸರಕಾರವನ್ನು ಕರ್ನಾಟಕ ಮಾತ್ರವಲ್ಲದೆ ದೇಶದ ಯಾವುದೇ ರಾಜ್ಯದಲ್ಲಿ ನಾನು ಕಂಡಿಲ್ಲ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಟೀಕಿಸಿದರು.
ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಂಗಳವಾರ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಆಗಿ ಅನುಭವ ಇರುವವರು. ಆದರೆ ಅವರ ಆಡಳಿತಾನುಭವ ಎಲ್ಲಿ ಹೋಗಿದೆ ಎಂದು ಗೊತ್ತಾಗುತ್ತಿಲ್ಲ ಅಂತೂ ಇಂತೂ ಕರ್ನಾಟಕದಲ್ಲಿ ಅತಿ ಶೀಘ್ರವಾಗಿ ಅವರ ಆಂತರಿಕ ಗೊಂದಲಗಳಿಂದಲೇ ಆಡಳಿತಕ್ಕೆ ಇತಿಶ್ರೀ ಆಗಲಿದೆ ಎಂಬ ಬಲವಾದ ನಂಬಿಕೆ ನನ್ನದು ಎಂದು ಭವಿಷ್ಯ ನುಡಿದರು.
ಬಿ.ಕೆ. ಹರಿಪ್ರಸಾದ್, ಡಿ.ಕೆ.ಶಿವಕುಮಾರ್, ರಾಯರೆಡ್ಡಿ, ಇನ್ನೂ ಹಲವಾರು ಜನ ಪಾಟೀಲರು ಸಿದ್ದರಾಮಯ್ಯರ ವಿರುದ್ಧ ಕಾಲ್ಕೆರೆದು ನಿಂತು ಜಗಳವಾಡುತ್ತಿದ್ದಾರೆ. ಸಿದ್ದರಾಮಯ್ಯರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂಬಂತಾಗಿದೆ. ಇದು ರಾಜ್ಯದ ಹಿತಾಸಕ್ತಿಗೆ ಪೂರಕವಲ್ಲ ಒಳ್ಳೆಯ ಆಡಳಿತ ಕೊಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಉಚಿತ ಭಾಗ್ಯಗಳು ಸರಕಾರದ ಖಜಾನೆ ಲೂಟಿಗೆ ಕಾರಣವಾಗಿವೆ. ಎಸ್‍ಸಿಎಸ್‍ಟಿ ಮೀಸಲು ಹಣದಿಂದ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಅಹಿಂದ ಎನ್ನುತ್ತಿದ್ದ ಸಿದ್ದರಾಮಯ್ಯರ ಸರಕಾರ ಬೇರೆಡೆಗೆ ವರ್ಗಾಯಿಸಿದೆ ಎಂದರೆ, ಅದು ಅವರ ನೀತಿಗೆ ವಿರುದ್ಧವಾದ ನಡೆ ಎಂದು ಆಕ್ಷೇಪಿಸಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದಲ್ಲಿ ಕೇಂದ್ರ ನಾಯಕತ್ವವು ನಿರ್ಧಾರ ತೆಗೆದುಕೊಳ್ಳಲಿದೆ. ಇದರ ಕುರಿತು ನಾವೇನೂ ಮಾತನಾಡುವಂಥದ್ದಿಲ್ಲ ಎಂದು ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು. ಕರ್ನಾಟಕದ ವಿದ್ಯಮಾನವನ್ನು ಗಮನಿಸಿ ಕೇಂದ್ರದ ನಾಯಕರು ಲೋಕಸಭಾ ಚುನಾವಣೆಗೆ ಬೇಕಾದ ಕಾರ್ಯತಂತ್ರದ ಕುರಿತು ಆಲೋಚಿಸಿದ್ದಾರೆ. ಅದರ ಆಧಾರದಲ್ಲಿ ಅವರು ಮುಂದುವರೆಯುತ್ತಾರೆ. ಅದರ ಕುರಿತು ನಾವಿಲ್ಲಿ ಕುಳಿತು ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದು ಡಿ.ವಿ.ಸದಾನಂದಗೌಡ ಹೇಳಿದರು.