ಸಿದ್ದು ಮಾನಸಿಕ ದಾರಿದ್ರ್ಯ ಬಹಿರಂಗ

Ravikumar 12 Feb 20
Published on

ಬೆಂಗಳೂರು: ರಾಜ್ಯ ಸರ್ಕಾರವನ್ನು ದರಿದ್ರ ಸರ್ಕಾರ ಎಂದು ಜರಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಮತ್ತೆ ಕೆಟ್ಟ ಭಾಷೆ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ನಡೆಸಿದ ಐದು ವರ್ಷಗಳ ತುಘಲಕ್ ದರ್ಬಾರ್ ಸರ್ಕಾರಕ್ಕೆ ದರಿದ್ರ ಪದ ಅನ್ವಯಿಸಬಹುದು. ಇದು ಅವರ ಮಾನಸಿಕ ದಾರಿದ್ರ್ಯವನ್ನು ತೋರುತ್ತದೆ, ಅವರು ತಮ್ಮ ಮಾತನ್ನು ಹಿಂಪಡೆಯಲಿ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಾಂಗ್ರೆಸ್ ಒಡೆದ ಮನೆಯಾಗಿದ್ದು ಅವಸಾನದತ್ತ ಸಾಗಿದೆ. ಅತ್ಯಂತ ಹಳೆಯ ಪಕ್ಷಕ್ಕೆ ರಾಜ್ಯದಲ್ಲಿ ಇನ್ನೂ ಸಾರಥಿ ಸಿಗುತ್ತಿಲ್ಲ. ಪಕ್ಷ ಅನಾಥವಾಗಿದ್ದು, ಸಿದ್ದರಾಮಯ್ಯ ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮಾತನಾಡಲಿ ಎಂದು ಕುಟುಕಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನೇಕಾರರು, ಮೀನುಗಾರರ ಸಾಲ ಮನ್ನಾ ಮಾಡಲಾಗಿದೆ. ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ ನೀಡುವ ಕೆಲಸ ಮಾಡಲಾಗಿದೆ. ರಚನಾತ್ಮಕ ಪ್ರತಿಪಕ್ಷವಾಗಿ ಗಮನಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ಕೆಟ್ಟ ಪದ ಬಳಸುವ ಮೂಲಕ ತಮ್ಮ ಮನಸ್ಥಿತಿಯನ್ನು ತೋರ್ಪಡಿಸಿದ್ದಾರೆ ಎಂದು ಟೀಕಿಸಿದರು.

ದೆಹಲಿಯಲ್ಲಿ ಬಿಜೆಪಿ ಸೋಲಿಗೆ ನೋವಾಗಿದೆ. ಆದರೆ, ಸೀಟು ಮತ್ತು ಮತಗಳಿಕೆಯಲ್ಲಿ ಹೆಚ್ಚಳವಾಗಿದ್ದು, ಅರವಿಂದ ಕೇಜ್ರಿವಾಲ್ ಜತೆಗೆ ಸೋನಿಯಾ ಗಾಂಧಿ ಆಂತರಿಕ ಒಪ್ಪಂದ ಮಾಡಿಕೊಂಡ ಕಾರಣ ಬಿಜೆಪಿ ಅಧಿಕಾರದಿಂದ ವಂಚಿತವಾಯಿತು ಎಂದ ರವಿಕುಮಾರ್, ಅಲ್ಲಿ ಕಾಂಗ್ರೆಸ್​ನ 67 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಮತ ಗಳಿಕೆ ಪ್ರಮಾಣ ಶೇ.4ಕ್ಕೆ ಕುಸಿದಿದೆ. ಆದರೂ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಖುಷಿಪಡುತ್ತಿದ್ದಾರೆ. 130 ವರ್ಷಗಳ ಇತಿಹಾಸವುಳ್ಳ ಪಕ್ಷ ಅವನತಿಯತ್ತ ಸಾಗುತ್ತಿರುವುದಕ್ಕೆ ಇದು ನಿದರ್ಶನ. ಪ್ರಜಾತಂತ್ರ ಮೌಲ್ಯಗಳು, ಒಕ್ಕೂಟ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಇಟ್ಟಿರುವ ಬಿಜೆಪಿ ಪ್ರತಿಪಕ್ಷ ಸ್ಥಾನ ಗಟ್ಟಿಯಾಗಿ ಇರಬೇಕೆಂದು ಬಯಸುತ್ತದೆ ಎಂದು ಕೈ ನಾಯಕರನ್ನು ತಿವಿದರು.

ಪರಿವಾರ ಮತ್ತು ತಳವಾರ ಮತ್ತು ಸಿದ್ದಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಣಯ ತೆಗೆದುಕೊಂಡ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇವೆ. ಇದಕ್ಕಾಗಿ ದಿವಂಗತ ಅನಂತಕುಮಾರ್ ನಿರಂತರವಾಗಿ ಪ್ರಯತ್ನಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಯಸುತ್ತೇನೆ ಎಂದರು.

ಸ್ಥಳೀಯ ಸಂಸ್ಥೇಲಿ ಗಣನೀಯ ಸಾಧನೆ

ನಗರ ಪಟ್ಟಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ, ಹಿಂದಿನ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ ಎಂದು ರವಿಕುಮಾರ್ ಹೇಳಿದರು. 2015ರಲ್ಲಿ 151 ವಾರ್ಡ್​ಗಳಿಗೆ ಚುನಾವಣೆ ನಡೆದಿತ್ತು, ಅದರಲ್ಲಿ ಬಿಜೆಪಿ 26, ಕಾಂಗ್ರೆಸ್ 68, ಜೆಡಿಎಸ್ 28, ಇತರರು 14, ಪಕ್ಷೇತರ 14 ಮಂದಿ ಗೆಲುವು ಸಾಧಿಸಿದ್ದರು. ಈ ಬಾರಿ 167 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 59, ಕಾಂಗ್ರೆಸ್ 69, ಜೆಡಿಎಸ್ 15, ಇತರರು 10, ಪಕ್ಷೇತರ 14 ಮಂದಿ ಗೆಲುವು ಸಾಧಿಸಿದ್ದಾರೆ ಎಂದು ಅಂಕಿ-ಅಂಶ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net