ಪಾಕ್ ಕರುಳುಬಳ್ಳಿ ಸಂಬಂಧ ಇರೋರಿಗೂ ಪೌರತ್ವ ಕೊಡಿ

Siddaramaia 11 Dec 19
Published on

ಬೆಂಗಳೂರು: ಪಾಕಿಸ್ತಾನದಲ್ಲಿರುವ ಎಲ್ಲ ಹಿಂದುಗಳಿಗೆ ಪೌರತ್ವ ನೀಡಲಿ. ಹಾಗೆಯೇ ಭಾರತದ ಜತೆ ಕರುಳುಬಳ್ಳಿ ಸಂಬಂಧ ಇರುವ ಮುಸ್ಲಿಮರಿಗೂ ಪೌರತ್ವ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದೇಶದ ದಲಿತರ ದುಸ್ಥಿತಿ-ದೌರ್ಜನ್ಯದ ಬಗ್ಗೆ ಮಾತನಾಡದ ಪ್ರಧಾನಿ ಮೋದಿ, ಪಾಕಿಸ್ತಾನದ ದಲಿತರ ಬಗ್ಗೆ ಕಣ್ಣೀರು ಸುರಿಸುತ್ತಿರುವುದು ನಾಟಕ ಎಂದು ಟೀಕಿಸಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ಕಾರ್ಯಕ್ರಮಗಳನ್ನು ಜಾರಿಮಾಡುವುದು ವಾಜಪೇಯಿ ಕಾಲದಲ್ಲಿ ಬಿಜೆಪಿಯ ರಹಸ್ಯ ಅಜೆಂಡಾವಾಗಿತ್ತು, ಮೋದಿ ಅಧಿಕಾರಕ್ಕೆ ಬಂದ ನಂತರ ದೇಶವಿರೋಧಿ, ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಅಜೆಂಡಾವನ್ನು ಜಾರಿಗೆ ತರಲು ಬಹಿರಂಗವಾಗಿ ತೊಡೆ ತಟ್ಟಿನಿಂತಿದ್ದಾರೆ. ಇದು ದೇಶದ ಭವಿಷ್ಯಕ್ಕೆ ಮಾರಕ ಎಂದಿದ್ದಾರೆ.

ರಾಹುಲ್ ಎಐಸಿಸಿ ಅಧ್ಯಕ್ಷರಾಗಲಿ

ಕಲಬುರಗಿ: ಕಾಂಗ್ರೆಸ್​ಗೆ ಇನ್ನಷ್ಟು ಶಕ್ತಿ ತುಂಬಲು ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಬೇಕು ಎಂಬುದು ನನ್ನ ಅಪೇಕ್ಷೆ. ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಶೀಘ್ರ ಆಗಲಿದೆ. ವರಿಷ್ಠರು ಅಭಿಪ್ರಾಯ ಸಂಗ್ರಹಿಸಿದ್ದು, ನಾನು ಜನರ ಪರ ಬ್ಯಾಟಿಂಗ್ ಮಾಡುತ್ತೇನಷ್ಟೆ ಎಂದು ಸಿದ್ದರಾಮಯ್ಯ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್​ಗೆ ಪ್ರಬುದ್ಧತೆ ಬಂದಂತಿಲ್ಲ. ಹೀಗಾಗಿ ಅವರ ಹೇಳಿಕೆಗೆ ಪ್ರತಿಕ್ರಿಯಿಸ ಲಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬಿಜೆಪಿಯ ಅನೇಕ ಶಾಸಕರು ಪಕ್ಷ ತೊರೆಯಲು ಸಿದ್ಧ್ದಾಗಿದ್ದಾರೆಂಬ ಸಿ.ಎಂ. ಇಬ್ರಾಹಿಂ ಹೇಳಿಕೆ ಉಲ್ಲೇಖಿಸಿದ ಸಿದ್ದರಾಮಯ್ಯ, ರಾಜ್ಯ ಬಿಜೆಪಿಯಲ್ಲಿ ತಳಮಳ ಹಾಗೂ ಅಧಿಕಾರದ ಕಚ್ಚಾಟ ಶುರುವಾಗಿದ್ದು, ಸರ್ಕಾರ ಉರುಳಲಿದೆ. ಅದನ್ನು ಬಳಸಿ ಕಾಂಗ್ರೆಸ್​ಗೆ ಮತ್ತೆ ಅಧಿಕಾರ ಹಿಡಿಯುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಬೊಕ್ಕಸವೇ ಖಾಲಿಯಾಗಿರುವಾಗ ಬಜೆಟ್ ಹೇಗೆ ಮಾಡ್ತಾರೆ ನೋಡ್ಬೇಕು. ಬಜೆಟ್ ಬಳಿಕ ಯಡಿಯೂರಪ್ಪರ ನಿಜಬಣ್ಣ ಬಯಲಿಗೆ ಬರಲಿದೆ ಎಂದರು.

ಗೆಸ್ಟ್ ಹೌಸ್, ಕಾರು ಸಿಗದೆ ಕಿರಿಕಿರಿ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ತಡರಾತ್ರಿ ಕಲಬುರಗಿಗೆ ಬರುವುದು ನಿರ್ಧಾರವಾಗಿದ್ದರಿಂದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಕೋಣೆಯೊಂದನ್ನು ಬುಕ್ ಮಾಡಲಾಗಿತ್ತು. ಆದರೆ, ಕೊನೇ ಘಳಿಗೆಯಲ್ಲಿ ಕೋಣೆ ಬುಕ್ಕಿಂಗ್ ರದ್ದುಗೊಳಿಸಿದ್ದರಿಂದ ಅನಿವಾರ್ಯವಾಗಿ ಕಾಂಗ್ರೆಸ್​ನವರು ಹೋಟೆಲ್​ವೊಂದರಲ್ಲಿ ರೂಂ ಮಾಡಿದರು. ಇನ್ನೊಂದೆಡೆ ಜಿಲ್ಲಾಡಳಿತದಿಂದ ಕಾರು ನೀಡದ ಪ್ರಸಂಗವೂ ನಡೆಯಿತು. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿರುವುದರಿಂದ ಅವರಿಗೆ ನಿಯಮದಂತೆ ಸರ್ಕಾರಿ ಅತಿಥಿ ಗೃಹ ಹಾಗೂ ಕಾರು ಕೊಡಬೇಕು. ಶಿಷ್ಟಾಚಾರ ಉಲ್ಲಂಘಿಸುವ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರ ಪ್ರತಿಪಕ್ಷ ನಾಯಕರಿಗೆ ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net