

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಗದೊಮ್ಮೆ ಸ್ಪಷ್ಟನೆ ನೀಡಿದ್ದು, ರಾಜ್ಯದ ಜನರ ಪಾಲಿನ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಮಗೆ ತೆರಿಗೆ ಹೆಚ್ಚಿಸುವ ಅಗತ್ಯವೇ ಬೀಳುತ್ತಿರಲಿಲ್ಲ ಎಂದು ಕೇಂದ್ರದತ್ತ ಬೊಟ್ಟುಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ, ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ ಎಂದು ಕೆಲವು ರಾಜ್ಯಗಳ ಅಂಕಿಅಂಶಗಳನ್ನು ಮುಂದಿಟ್ಟರು.
ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದರು ಎಂದು ಬಿಜೆಪಿ- ಜೆಡಿಎಸ್‌ನವರು ಪ್ರತಿಭಟಿಸಿದ್ದಾರೆ. ನಾವು ಪೆಟ್ರೋಲ್‌ಮೇಲೆ ಮೂರು ರೂ., ಡೀಸೆಲ್ ಮೇಲೆ ಮೂರು ರೂ. ಏರಿಸಿದ್ದೇವೆ. ಆದರೆ ಅವರು ಪ್ರತಿಭಟನೆ ಮಾಡಬೇಕಾಗಿರುವುದು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಎಂದರು.
ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ, ಕೇಂದ್ರದಿಂದ ಬೆಲೆ ಏರಿಕೆಯಾಗಿದೆ ಎಂದು ದೊಡ್ಡ ಹೇಳಿಕೆ ಕೊಟ್ಟಿದ್ದರು. ನಾನು ಪ್ರಧಾನಿಯಾದಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತೇನೆ ಎಂದಿದ್ದರು. ಆದರೆ ಪ್ರಧಾನಿಯಾದ ಬಳಿಕ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಡವರ ಬಗ್ಗೆ, ಜನ ಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟಿಸಲಿ ಎಂದು ಸವಾಲು ಹಾಕಿದರು.
ಬರ ಪರಿಹಾರ ಪಡೆಯಲು ನಾವು ಕೋರ್ಟ್‌ಗೆ ಹೋಗಬೇಕಾಯಿತು. ಇವರ ಹತ್ತಿರ ಪಾಠ ಕೇಳಬೇಕು. ಬಿಜೆಪಿಯವರು ಬಡವರು, ದಲಿತರ ಕಾರ್ಯಕ್ರಮ ವಿರುದ್ಧ ಇದ್ದಾರೆ ಎಂದು ಟೀಕಿಸಿದ ಅವರು ಬಿಜೆಪಿಯವರಿಗೆ ಪ್ರತಿಭಟಿಸುವ ನೈತಿಕತೆಯೇ ಇಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯುವುದೇ ಇವರ ಕೆಲಸ. ಕೇಂದ್ರ ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡುತ್ತಿದೆ. ಅದರ ಬಗ್ಗೆ ಚಕಾರ ಎತ್ತಲ್ಲ. ಬರಗಾಲ ಬಂದಾಗ ಮಾತನಾಡಲಿಲ್ಲ. ಈಗ ಅವರಿಗೆ ಬೇರೆ ಏನೂ ವಿಷಯಗಳಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು ಮೂರು ಸಾವಿರ ಕೋಟಿ ರೂಪಾಯಿಗಳು ರಾಜ್ಯದ ಜಾನೆಗೆ ಸಂದಾಯವಾಗುತ್ತದೆ, ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಯಾವುದೇ ಮೂಲಗಳಿಲ್ಲ. ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಪೆಟ್ರೋಲ್ ಡೀಸೆಲ್ ಬೆಲೆಗೆ ಹೋಲಿಸಿದರೆ ರಾಜ್ಯದ ದರಗಳು ಕಡಿಮೆ ಇರುವುದು ಗಮನಿಸಿ, ರಾಜ್ಯ ಸರ್ಕಾರ ಅಲ್ಪ ಪ್ರಮಾಣದ ತೆರಿಗೆ ಹೆಚ್ಚಳ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಮನಮೋಹನ್ ಸಿಂಗ್ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್ ಇತ್ತು. 2015 ರಲ್ಲಿ ಈ ಬೆಲೆ ಅರ್ಧಕ್ಕರ್ಧ ಕಡಿಮೆಯಾದರೂ, ಬೆಲೆ ಇಳಿಸಿ, ಜನರ ಹೊರೆ ಕಡಿಮೆ ಮಾಡುವ ಕಾಳಜಿಯನ್ನು ನರೇಂದ್ರ ಮೋದಿ ತೋರಲಿಲ್ಲ. ಹೀಗಿರುವಾಗ ಬಿಜೆಪಿಯವರು ಯಾರ ವಿರುದ್ಧ ಹೋರಾಡಬೇಕು ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತ ಬಂದಿದ್ದರೂ, ಬಿಜೆಪಿಯವರು ದನಿ ಎತ್ತಿಲ್ಲ. ತೆರಿಗೆ ಅನ್ಯಾಯವಾದಾಗ ಸಂಸದರು ಈ ವಿಷಯದ ಕುರಿತು ಮಾತನಾಡಿಲ್ಲ, ರಾಜ್ಯಕ್ಕೆ 15ನೇ ಹಣಕಾಸು ಆಯೋಗವು ವಿಶೇಷ ಅನುದಾನ ನೀಡುವಂತ ಶಿಫಾರಸು ಮಾಡಿದ್ದರೂ, ಕೇಂದ್ರ ಸರ್ಕಾರ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಆಯವ್ಯಯದಲ್ಲಿ 5 ಸಾವಿರ ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರೂ, ಬಿಡಿಗಾಸೂ ನೀಡಿಲ್ಲ. ಈ ವಿಷಯಗಳ ಕುರಿತು ಬಿಜೆಪಿಯವರು ದನಿ ಎತ್ತಿದ್ದಾರೆಯೇ? ಬಿಜೆಪಿಯು ಬಡವರು, ದಲಿತರ ವಿರೋಧಿ ಧೋರಣೆ ಹೊಂದಿದೆ ಎಂದು ಕುಟುಕಿದರು.
ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿ ಬೇಕು. ಯಾರಿಗೆ ಕೊಡುತ್ತಾ ಇದ್ದೇವೆ? ಶ್ರೀಮಂತರಿಗೆ ಕೊಡುತ್ತಾ ಇದ್ದೀವಾ? ಅಂಬಾನಿ, ಅದಾನಿಗಳಿಗೆ ಸಾಲ ಮನ್ನಾ ಮಾಡ್ತಾ ಇದ್ದೀವಾ? ರೈತರ ಸಾಲ ಮನ್ನ ಮಾಡಿ ಎಂದರೆ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಇವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇದೆಯೇ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಗೋಷ್ಠಿಯಲ್ಲಿ ಸಚಿವರಾದ ಚಲುವರಾಯಸ್ವಾಮಿ, ಬೈರತಿ ಸುರೇಶ್, ಶಾಸಕರಾದ ನರೇಂದ್ರಸ್ವಾಮಿ, ಗೋಪಾಲಕೃಷ್ಣ ಬೇಳೂರು ಉಪಸ್ಥಿತರಿದ್ದರು.