ಟೀಮ್ ಸಿದ್ದರಾಮಯ್ಯ ಹೈಕಮಾಂಡ್ ಬಳಿಗೆ ದೌಡು; ಅಪ್ರಜಾಸತ್ತಾತ್ಮಕ, ವಿಲಕ್ಷಣ ಬೆಳವಣಿಗೆ

Basavaraj Bommai (1)
Published on

ಬೆಂಗಳೂರು: ಸರ್ಕಾರ ರಚಿಸಿದ ಕೇವಲ ಎರಡು ತಿಂಗಳು ಕಳೆಯುವಷ್ಟರಲ್ಲಿ ಮಂತ್ರಿಗಳ ದಂಡಿನೊಂದಿಗೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿ, ಕಾಂಗ್ರೆಸ್ ಹೈಕಮಾಂಡ್ ಗೆ ಭೇಟಿಯಾಗಿರುವುದು ಅಪ್ರಜಾಸತ್ತಾತ್ಮಕ, ವಿಲಕ್ಷಣ ಬೆಳವಣಿಗೆಯಾಗಿದೆ. ಅಷ್ಟೇ ಅಲ್ಲ, ರಾಜ್ಯದ ಜನರಿಗೆ ಮಾಡಿದ ಅವಮಾನವೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಕಟುವಾಗಿ ಟೀಕಿಸಿದ್ದಾರೆ.

ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಸಿಎಂ, ಡಿಸಿಎಂ ಅಥವಾ ಒಬ್ಬರೋ ಇಬ್ಬರು ಸಚಿವರು ಜತೆಗೆ ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ತಪ್ಪೇನಲ್ಲ. ಆದರೆ ಮಂತ್ರಿ ಮಂಡಲವನ್ನು ಕಟ್ಟಿಕೊಂಡು ಹೈಕಮಾಂಡ್ ಬಳಿಗೆ ತೆರಳಿರುವುದು ಅನೇಕ ಅರ್ಥಗಳನ್ನು ಕೊಡುತ್ತದೆ. ಮೊದಲಿದ್ದ ಸಿದ್ದರಾಮಯ್ಯ ಈಗಿಲ್ಲ, ಅತ್ಯಂತ ದುರ್ಬಲ ಸಿಎಂ ಎಂಬುದು ನಿಚ್ಚಳವಾಗಿದೆ. ಸಚಿವರು, ಶಾಸಕರು ಹಾಗೂ ಒಟ್ಟಾರೆ ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ.

ಜನಾದೇಶ ಪಡೆದ ಸರ್ಕಾರವೊಂದು ಹೀಗೆ ವರ್ತಿಸಿರುವುದು ರಾಜ್ಯದಲ್ಲಿ ಹಿಂದೆಂದೂ ಕಂಡಿಲ್ಲ. ರಣದೀಪಸಿಂಗ್ ಸುರ್ಜೆವಾಲಾ ಈ ಹಿಂದೆ ಅಧಿಕಾರಿಗಳ ಸಭೆ ನಡೆಸಿದರು. ಈಗ ಮಂತ್ರಿ ಮಂಡಲವನ್ನು ವರಿಷ್ಠರು ನಿಯಂತ್ರಿಸಿ, ‌ನಿರ್ದೇಶಿಸುತ್ತಿದ್ದು, ಅಪ್ರಜಾಸತ್ತಾತ್ಮಕ ನಡೆಯು ರಾಜ್ಯದ ಜನತೆಗೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದರು.

ವರ್ಗಾವಣೆ ದಂಧೆ ಬಗ್ಗೆ ಕಾಂಗ್ರೆಸ್ ಶಾಸಕರು ವ್ಯಕ್ತಪಡಿಸಿದ ಆಕ್ಷೇಪವು ವರಿಷ್ಠರು ಸಭೆಯಿಂದ ದೃಢಪಟ್ಟಿದೆ. ಬಹುದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಅನೇಕ ವರ್ಗಾವಣೆಗಳ ರದ್ದು, ತಡೆಯೇ ಎಲ್ಲವನ್ನೂ ಸಾರುತ್ತದೆ ಎಂದು ಬೊಮ್ಮಾಯಿ‌ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net