ಸಿದ್ದಲಿಂಗೇಶ್ವರಸ್ವಾಮಿ ರಥೋತ್ಸವ ಸಂಪನ್ನ;ಸಿದ್ಧಗಂಗಾ ಮಠದಲ್ಲಿ ಜಾತ್ರೆ ವೈಭವ

2
*ತುಮಕೂರಿನ ಸಿದ್ಧಗಂಗೆಯ ಆರಾಧ್ಯ ದೈವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ನಾಡಿನಾದ್ಯಂತ ಬಂದಿದ್ದ ಸಹಸ್ರಾರು ಭಕ್ತರು ಭಕ್ತಿ ಸಮರ್ಪಿಸಿದರು.
Published on

ತುಮಕೂರು: ಸಿದ್ಧಗಂಗಾ ಮಠದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ನಾಡಿನೆಲ್ಲೆಡೆಯಿಂದ ಭಕ್ತಸಾಗರವೇ ಹರಿದುಬಂದಿತ್ತು.

ಮಾಘ ಬಹುಳ ಚತುರ್ದಶಿಯಂದು ಶ್ರೀಮಠದ ಆವರಣದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ರಥದ ಗಾಲಿಗೆ ತೆಂಗಿನಕಾಯಿ ಒಡೆದು, ಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬೆಳಗ್ಗೆ 11.50ಕ್ಕೆ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರ ಭಕ್ತಿಯ ಪರಕಾಷ್ಠೆ ಮುಗಿಲುಮುಟ್ಟಿತು.

ರಥೋತ್ಸವದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ತಹಸೀಲ್ದಾರ್ ಸಿದ್ದೇಶ್, ವಿವಿಧ ಮಠಾಧೀಶರು ಸೇರಿ ಅನೇಕ ಗಣ್ಯರು, ಸಹಸ್ರಾರು ಭಕ್ತರು ರಥೋತ್ಸವವನ್ನು ಸಾಕ್ಷೀಕರಿಸಿದರು.

ರಥಾಂಗ ಹೋಮ: ರಥಕ್ಕೆ ಗಣಪತಿ ಪೂಜೆ, ಪುಣ್ಯಾಹ ಸೇರಿ ವಿವಿಧ ಧಾರ್ಮಿಕ ಪೂಜೆ ಸಲ್ಲಿಸಲಾಯಿತು. ಸಿದ್ದಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ರಾಜೋಪಚಾರ ಹಾಗೂ ಅಷ್ಟೋತ್ತರ ನೆರವೇರಿಸಲಾಯಿತು. ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ತಂದವಲ್ಲದೆ, ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿದವು. ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದವರು ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು. ಕ್ಷೇತ್ರದ ಶಾಲೆ, ವಸತಿನಿಲಯಗಳ ಕಟ್ಟಡ ಮೇಲೆ ನಿಂತು ಭಕ್ತರು ರಥೋತ್ಸವ ವೀಕ್ಷಿಸಿದರು. ಹಲವು ಸಂಘ-ಸಂಸ್ಥೆಗಳ ವತಿಯಿಂದ ಪಾನಕ, ಮಜ್ಜಿಗೆ ವಿತರಿಸಲಾಯಿತು. ಭಕ್ತಾದಿಗಳಿಗೆ ವಿಶೇಷ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಇಂದು ಬೆಳ್ಳಿಪಲ್ಲಕ್ಕಿ: ಫೆ.20ರಂದು ವಿಶ್ವಪ್ರಸಿದ್ಧ ಬೆಳ್ಳಿಪಲ್ಲಕ್ಕಿ ಉತ್ಸವವು ವೈಭವಯುತವಾಗಿ ಜರುಗಲಿದೆ. 21ರಂದು ತೆಪ್ಪೋತ್ಸವ, ಪಂಚಬ್ರಹ್ಮೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಉತ್ಸವದ ದಿಕ್ಕುಬದಲು! ಈ ಬಾರಿ ರಥೋತ್ಸವದ ದಿಕ್ಕು ಬದಲಿಸಿದ್ದು ಗಮನಸೆಳೆಯಿತು. ಸಿದ್ಧಗಂಗಾ ಬೆಟ್ಟದ ಮೆಟ್ಟಿಲುಗಳ ಮುಂಭಾಗದಿಂದ ಆರಂಭವಾಗುತಿದ್ದ ರಥೋತ್ಸವವನ್ನು ಪಶ್ಚಿಮಾಭಿಮುಖವಾಗಿ ಎಳೆಯಲಾಗುತ್ತಿತ್ತು. ಈ ಬಾರಿ ಪೂರ್ವಾಭಿಮುಖವಾಗಿ ಎಳೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net