ನಾಳೆ ಸಿಡ್ಬಿ ಶಿವಮೊಗ್ಗ ಶಾಖೆ ಉದ್ಘಾಟನೆ

Gopinath
Published on

ಶಿವಮೊಗ್ಗ: ವಿನೋಬನಗರ ವಿಧಾತ್ರಿ ಹೋಟೆಲ್ ಪಕ್ಕದಲ್ಲಿರುವ ಪ್ರಕಾಶ್ ಆರ್ಕೇಡ್‌ನಲ್ಲಿ ನ. 9ರ ಮಧ್ಯಾಹ್ನ 2.30ಕ್ಕೆ ಎಸ್‌ಐಡಿಬಿಐ(ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್) ಶಾಖೆ ಉದ್ಘಾಟನೆ ನೆರವೇರಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ರಾಜ್ಯದಲ್ಲಿ ಸಿಡ್ಬಿಯ ಒಟ್ಟು 7 ಶಾಖೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನ. 9ರ ಮಧ್ಯಾಹ್ನ ವರ್ಚುವಲ್ ಕಾರ್ಯಕ್ರಮದಲ್ಲಿ ಉದ್ಘಾಟಿಸಲಿದ್ದಾರೆ. ಶಿವಮೊಗ್ಗದಲ್ಲಿ ಬ್ಯಾಂಕ್‌ನ ಶಾಖೆ ಪ್ರಕಾಶ್ ಆರ್ಕೇಡ್‌ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಡ್ಬಿ ಶಾಖೆ ಶಿವಮೊಗ್ಗದಲ್ಲಿ ಆರಂಭವಾಗುತ್ತಿರುವುದರ ಹಿಂದೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಶ್ರಮವಿದೆ. ಎಂಎಸ್‌ಎಂಇ ವಲಯಗಳಿಗೆ ಸಾಲ ನೀಡುವ ಮೂಲಕ ಬ್ಯಾಂಕ್ ಅರ್ಥಿಕ ಉತ್ತೇಜನ ನೀಡಲಿದೆ. ಹಾಲಿ ಉದ್ಯಮಗಳನ್ನು ನಡೆಸುತ್ತಿರುವವರು ಹಾಗೂ ನವೋದ್ಯಮಿಗಳಿಗೆ ಅನುಕೂಲವಾಗಲಿದೆ ಎಂದರು.

ಆನ್‌ಲೈನ್‌ನಲ್ಲೇ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಸಲ್ಲಿಕೆಯಾಗುವ ದಾಖಲೆಗಳು ಸರಿ ಇದ್ದರೆ 48 ತಾಸಿನಲ್ಲೇ ಬ್ಯಾಂಕ್‌ನಿಂದ ಸಾಲ ಮಂಜೂರು ಮಾಡಲಾಗುತ್ತದೆ. ತ್ವರಿತ ಬ್ಯಾಂಕಿಂಗ್ ಸೇವೆಯಿಂದ ಉದ್ಯಮಿ ಸ್ನೇಹಿ ಬ್ಯಾಂಕ್ ಎನಿಸಿದೆ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರಿ, ಉಪಾಧ್ಯಕ್ಷ ಹರ್ಷ ಬಿ.ಕಾಮತ್, ಕಾರ್ಯದರ್ಶಿ ಎಸ್.ವಿಶ್ವೇಶ್ವರಯ್ಯ, ಖಜಾಂಚಿ ಎಚ್.ಬಿ.ರಮೇಶ್‌ಬಾಬು, ಕಿರಣ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net