

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಗಡಿಭಾಗದಲ್ಲಿರುವ ಆಂಧ್ರ ಪ್ರದೇಶದ ವೀರಾಪುರ ಕೆರೆಗಳಲ್ಲಿ ವಿದೇಶದಿಂದ ಬಂದು ಸಂತಾನೋತ್ಪತ್ತಿಯಲ್ಲಿ ತೊಡಗಿರುವ ಕೊಕ್ಕರೆಗಳ ಕಲರವ ಗಮನ ಸೆಳೆಯುತ್ತಿದೆ.
ಹೌದು! ಸೈಬೀರಿಯಾ ದೇಶದಿಂದ ಪೇಂಟೆಡ್ ಸ್ಟಾರ್ಕ್ ಎಂಬ ಜಾತಿಯ ಕೊಕ್ಕರೆಗಳು ಇಲ್ಲಿಗೆ ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಬರುತ್ತವೆ. ಮತ್ತೆ ಇಲ್ಲಿಯೇ ತಿಂಗಳಾನುಗಟ್ಟಲೇ ಇದ್ದು ಜೂನ್‌ಗೆ ವಾಪಸ್ ತೆರಳುತ್ತವೆ. ಇದರ ನಡುವೆ ಹಕ್ಕಿಗಳನ್ನು ನೋಡಲು ಜನರು ಮುಗಿ ಬೀಳುತ್ತಾರೆ. ಇದು ಇಲ್ಲಿ ಸಾಮಾನ್ಯವಾಗಿದೆ. ಕೆಲ ಪಕ್ಷಿಗಳು ಕಾಲಕ್ಕೆ ಮತ್ತು ವಾತಾವರಣಕ್ಕೆ ಅನುಗುಣವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವಿಕೆಯು ಸಹಜ. ಅದರಂತೆ ಇಲ್ಲಿಗೆ ಸೈಬೀರಿಯಾದ ಪಕ್ಷಿಗಳು ಬಂದು, ಮೊಟ್ಟೆ ಇಟ್ಟು ಮರಿ ಮಾಡಿ, ಮರಿಗಳಿಗೆ ರೆಕ್ಕೆ ಬಲಿತ ನಂತರ ಮತ್ತೆ ಆ ದೇಶಕ್ಕೆ ಹೋಗುತ್ತವೆ. ಈ ಕೊಕ್ಕರೆಗಳು 6 ಸಾವಿರ ಕಿ.ಮೀ ದೂರದವರೆಗೂ ಹಾರಿ ಬರುವುದು ವಿಶೇಷ ಎನ್ನುತ್ತಾರೆ ಪಕ್ಷಿ ತಜ್ಞರು.
ಪಕ್ಷಿಗಳ ಸಂತಾನಾಭಿವೃದ್ಧಿ
ಡಿಸೆಂಬರ್‌ನಲ್ಲಿ ಇಲ್ಲಿಗೆ ಬರುವ ನೂರಾರು ಪೇಯಿಂಟೆಡ್ ಸ್ಟಾರ್ಕ್ ಗಳು ಮಾರ್ಚ್ ನಲ್ಲಿ ಮೊಟ್ಟೆ ಇಟ್ಟು ಕಾವು ಕೊಡಲು ಶುರು ಮಾಡುತ್ತವೆ. ಏಪ್ರಿಲ್ ತಿಂಗಳಿನಲ್ಲಿ ಮರಿ ಮಾಡುವ ಇವುಗಳು ಜೂನ್‌ವರೆಗೂ ಮರಿಗಳ ಲಾಲನೆ, ಪಾಲನೆ ಮಾಡುತ್ತವೆ. ಮತ್ತೆ ಮರಿಗಳ ಸಮೇತ ಇಲ್ಲಿಂದ ವಲಸೆ ಆರಂಭಿಸುವ ಸ್ಟೋರ್ಕ್ ಮತ್ತೆ ದರ್ಶನ ನೀಡುವುದು ಮುಂದಿನ ಡಿಸೆಂಬರ್ ತಿಂಗಳಿನಲ್ಲೆ?.
ಗ್ರಾಮಸ್ಥರೇ ಕಾವಲುಗಾರರು
ಇಲ್ಲಿನ ಕೆರೆಯಲ್ಲಿ ಸಿಗುವ ಮೀನುಗಳೇ ಕೊಕ್ಕರೆಗಳಿಗೆ ಆಹಾರ. ಒಂದು ವೇಳೆ ನೀರು ಮತ್ತು ಮೀನುಗಳು ಪ್ರಮಾಣ ಕಡಿಮೆಯಾದರೆ, ಕರ್ನಾಟಕ ಗಡಿಭಾಗದ ಗುಡಿಬಂಡೆ ತಾಲೂಕಿನ ಕೆರೆಗಳಿಗೆ ಪಕ್ಷಿಗಳು ಬಂದು, ಮೀನು ಹಿಡಿದುಕೊಂಡು ಮತ್ತೆ ಹೋಗಿ ಮರಿಗಳಿಗೆ ಆಹಾರವಾಗಿ ನೀಡುತ್ತವೆ. ಇನ್ನೂ ಊರಿನವರೂ ಕೂಡ ಈ ಪಕ್ಷಿಗಳಿಗೆ ಯಾವತ್ತೂ ಸಮಸ್ಯೆ ಕೊಟ್ಟಿಲ್ಲ. ಒಂದು ವೇಳೆ ಬೇರೆ ಯಾರಾದರೂ ತೊಂದರೆ ಕೊಡಲು ಯತ್ನಿಸಿದರೆ ಗ್ರಾಮಸ್ಥರೇ ಅವರನ್ನು ಹಿಡಿದು ಶಿಕ್ಷಿಸಿ ಹೊರಗೆ ಕಳುಹಿಸುತ್ತಾರೆ. ಹೀಗಾಗಿ, ಇಲ್ಲಿ ಅವುಗಳಿಗೆ ಯಾವುದೇ ಸಮಸ್ಯೆ ಇಲ್ಲ. ಇದಕ್ಕೆ ಪಕ್ಷಿಗಳು ನಿರಾಳವಾಗಿ ಈ ಗ್ರಾಮಕ್ಕೆ ಬಂದು ಹೋಗುತ್ತಿರುತ್ತವೆ.
ಪ್ರವಾಸಿಗರ ಲಗ್ಗೆ
ಕೊಕ್ಕರೆಗಳು ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಪ್ರವಾಸಿಗರು ವೀರಾಪುರ ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಪ್ರವಾಸಿಗರು ಬಂದು ಕೊಕ್ಕರೆಗಳನ್ನು ವೀಕ್ಷಿಸುವುದಲ್ಲದೇ ಕ್ಯಾಮೆರಾಗಳಲ್ಲಿ ಸೆರೆ ಹಿಡಿದುಕೊಂಡು ಮುದ ಅನುಭವಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಮತ್ತು ವಿಡಿಯೋಗಳನ್ನು ಹಾಕಿ, ಖುಷಿಪಡುತ್ತಿದ್ದಾರೆ.
ಎಲ್ಲಿದೆ ವೀರಾಪುರ?:
ಬೆಂಗಳೂರು ಮತ್ತು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಬಾಗೇಪಲ್ಲಿಯ ಟಿ.ಬಿ.ಕ್ರಾಸ್ ಮುಂಚೆಯೇ ಎಡಗಡೆಗೆ ಗ್ರೀನ್ ಪಾರ್ಕ್ ಹೋಟಲ್ ಬಳಿ ಹಲಗೂರು ರಸ್ತೆ ಎಂಬ ನಾಮ ಫಲಕ ಕಾಣುತ್ತದೆ. ಅಲ್ಲಿಂದ ಕಡೇಹಳ್ಳಿ ಕ್ರಾಸ್ ಮೂಲಕ ನೇರವಾಗಿ 15 ಕಿ.ಮೀ.ದೂರ ಸಾಗಿದರೆ, ಆಂಧ್ರಪ್ರದೇಶದ ವೀರಾಪುರ ಸಿಗುತ್ತದೆ. ಅಲ್ಲಿಂದ ನಂತರ ಜೀವ ವೈವಿಧ್ಯ ಪಾರಂಪರಿಕ ತಾಣ ಎಲ್ಲೋಡು ಶ್ರೀ ಲಕ್ಷಿ÷್ಮಆದಿನಾರಾಯಣಸ್ವಾಮಿ ಬೆಟ್ಟವನ್ನೂ ಸಹ ವೀಕ್ಷಿಸಬಹುದು.