ಶುಚಿ ಯೋಜನೆಯಡಿ ಮುಟ್ಟಿನ ಕಪ್ ವಿತರಣೆ : ಎರಡು ಜಿಲ್ಲೆಗಳಿಗೆ ವಿಸ್ತರಣೆ

Shuchi
Published on

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಹದಿಹರೆಯದ ವಿದ್ಯಾರ್ಥಿನಿಯರಲ್ಲಿ ಮುಟ್ಟಿನ ನೈರ್ಮಲ್ಯ ಕಾಪಾಡಿಕೊಳ್ಳಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎರಡು ತಾಲೂಕುಗಳಲ್ಲಿ ಶುಚಿ ಯೋಜನೆಯಡಿ ಪ್ರಾಯೋಗಿಕವಾಗಿ ಆರಂಭಿಸಿದ್ದ ‘ಮುಟ್ಟಿನ ಕಪ್’ ವಿತರಣೆ ಕಾರ್ಯಕ್ರಮವನ್ನು ಎರಡು ಜಿಲ್ಲೆಗಳಿಗೆ ವಿಸ್ತರಿಸುತ್ತಿದೆ.

ಮುಟ್ಟಿನ ಕಪ್ ಬಳಕೆ ಕುರಿತು ಅರಿವು ಮೂಡಿಸಲು ಯಳಂದೂರು ಹಾಗೂ ಪುತ್ತೂರು ತಾಲೂಕುಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 300 ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ವಿತರಿಸಲಾಗಿತ್ತು. ಇವರಲ್ಲಿ 272 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದಿದ್ದಾದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯೋಜನೆ ವಿಸ್ತರಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಉಪನಿರ್ದೇಶಕಿ ಡಾ.ವಿ.ವೀಣಾ ತಿಳಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ನೀತಿಯಲ್ಲಿ ಮುಟ್ಟಿನ ಕಪ್‌ಗಳನ್ನು ಪರಿಚಯಿಸಿರುವ ಮತ್ತು ಅವುಗಳ ಬಳಕೆಯನ್ನು ಉತ್ತೇಜಿಸುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕ. ಯೋಜನೆ ವಿಸ್ತರಣೆಯಿಂದ 15 ಸಾವಿರ ವಿದ್ಯಾರ್ಥಿನಿಯರಿಗೆ ಸೌಲಭ್ಯ ದೊರೆಯಲಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯಾದ್ಯಂತ ಯೋಜನೆ ವಿಸ್ತರಿಸಲಾಗುವುದು ಎಂದು ಹೇಳಿದರು.

ವಿಲೇವಾರಿ ಸಮಸ್ಯೆಗೆ ಪರಿಹಾರ: ಸ್ಯಾನಿಟರಿ ಪ್ಯಾಡ್‌ಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಪರಿಸರಕ್ಕೂ ಹಾನಿಯನ್ನುಂಟುಮಾಡುತ್ತವೆ. ಅದಕ್ಕೆ ಮುಟ್ಟಿನ ಕಪ್‌ಗಳು ಪರಿಹಾರ ಒದಗಿಸಲಿವೆ. ಇದು ಕೇವಲ ಪರಿಸರ ಸ್ನೇಹಿ ಮಾತ್ರವಲ್ಲ ಬಳಕೆದಾರರ ಆರೋಗ್ಯ ಸ್ನೇಹಿಯೂ ಆಗಿದೆ. ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಮುಟ್ಟಿನ ಕಪ್ ಬಳಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪರಿಣಾಮಕಾರಿಯಾಗಿ ಬಳಕೆ ಮಾಡಿದಲ್ಲಿ 6-8 ವರ್ಷಗಳವರೆಗೆ ಉಪಯೋಗಿಸಬಹುದಾಗಿದೆ. ಸೆಪ್ಟೆಂಬರ್‌ನಲ್ಲಿ ಎರಡೂ ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ವಿತರಿಸಲಾಗುವುದು ಎಂದು ತಿಳಿಸಿದರು.

ಶಾಲೆಗಳಿಗೆ ಸ್ಯಾನಿಟರಿ ಪ್ಯಾಡ್:ರಾಜ್ಯದಲ್ಲಿ 2015-16ರಲ್ಲಿ ಶುಚಿ ಯೋಜನೆ ಪ್ರಾರಂಭವಾಗಿದ್ದು, 19 ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರು ಸ್ಯಾನಿಟರಿ ಪ್ಯಾಡ್‌ಗಳ ಲಾನುಭವಿಗಳಿದ್ದಾರೆ. ಪ್ರತಿವರ್ಷ ಪ್ರತಿ ಲಾನುಭವಿಗೆ ತಲಾ 10 ಪ್ಯಾಡ್‌ಗಳ 12 ಪ್ಯಾಕ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ ವಾರ್ಷಿಕ ಸುಮಾರು 47 ಕೋಟಿ ರೂ. ಖರ್ಚು ಮಾಡುತ್ತಿದೆ. ಶುಚಿ ಯೋಜನೆಯಿಂದಾಗಿ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಪ್ರದೇಶದ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಹೆಚ್ಚಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net