

ಬೀರೂರು : ಪಟ್ಟಣದ ಕಟ್ಟೆಕೋಡಿ ಅಂತರಘಟ್ಟಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ದೇವಿ ಯುವಕ ಸಂಘದಿಂದ ಪ್ರತಿಷ್ಠಾಪಿಸಿದ್ದ ಶ್ರೀಸತ್ಯ ಗಣಪತಿಯನ್ನು ಭಾನುವಾರ ರಾತ್ರಿ ಬೃಹತ್ ಶೋಭಾಯಾತ್ರೆ ಮೂಲಕ ಸಮೀಪದ ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.
ಕಳೆದ 29 ದಿನಗಳಿಂದ ಶ್ರೀಸತ್ಯ ಗಣಪತಿ ಮೂರ್ತಿಗೆ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಶನಿವಾರ ಬೆಳಗ್ಗೆ ಗಣಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಗೋಲ್ಡನ್ ಬಾಯ್ಸಯಿಂದ ಹೂವಿನ ಅಲಂಕಾರ ಸಂಜೆ ವಿಶೇಷ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾನುವಾರ ಸಂಜೆ 4ಕ್ಕೆ ವಿಶೇಷ ಶೋಭಾಯಾತ್ರೆ ಆರಂಭವಾಯಿತು.
ದೇವರ ಕುಣಿತ, ತಮಟೆ ವಾದ್ಯಗಳು, ಗೊಂಬೆಮೇಳ, ಕೇರಳದ ಆಕರ್ಷಕ ದುರ್ಗಿ ಕುಣಿತ, ಡಿಜೆ ಹಾಗೂ ವಿವಿಧ ಕಲಾತಂಡಗಳ ವೈಭವದೊಂದಿಗೆ ಬಿ.ಎಚ್.ರಸ್ತೆ, ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿ ಸಿಡಿಮದ್ದು ಪ್ರದರ್ಶಿಸಿದರು. ನಂತರ ಮೆರವಣಿಗೆ ಮಾರ್ಗದ ಕ್ಯಾಂಪ್ ಮೂಲಕ ಲಿಂಗದಹಳ್ಳಿ ರಸ್ತೆಯಲ್ಲಿ ಸಾಗಿ ಸಮೀಪದ ಬಾಕಿನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀದೇವಿ ಯುವಕರ ಸಂಘದ ಬಿ.ಪಿ.ಪ್ರಭಾಕರ್, ಬಿ.ಎನ್.ಪ್ರಸನ್ನಕುಮಾರ್, ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್, ಪದಾಧಿಕಾರಿಗಳಾದ ಬೀರೇಶ್, ಮಧು, ಸೂರಜ್, ಪ್ರದೀಪ್, ಪ್ರಕಾಶ್, ಮನು, ಚಂದ್ರಶೇಖರ್, ಮುಬಾರಕ್ ಹಾಗೂ ಭಕ್ತಾದಿಗಳು ಇದ್ದರು.