ಪರಮಾನಂದ ಮಠದ ಮಹಾಯೋಗೀಂದ್ರ ಶ್ರೀ ಶಿವಾನಂದರು

Punyaradane
Published on

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ನವಿಲುಗೋಣ ಊರಿನಲ್ಲಿ ಈಶ್ವರ ನಾಮ ಸಂವತ್ಸರದ ಭಾದ್ರಪದ ಬಹುಳ ಷಷ್ಠಿಯಂದು ಶ್ರೀ ಶಿವಾನಂದ ಸರಸ್ವತಿಗಳು ಜನಿಸಿದರು. ತಂದೆ ರಾಮಭಟ್ಟರು. ತಾಯಿ ದುರ್ಗಿ. ತಿರುಮಲರಿಗೆ ಮೂರು ವರ್ಷವಾದಾಗ ತಂದೆ ದೈವಾಧೀನರಾದರು. ತಿರುಮಲರಿಗೆ 10ನೆಯ ವಯಸ್ಸಿನಲ್ಲಿ ಉಪನಯನವಾಯಿತು. ವೇದಾಧ್ಯಯನ ಕಲಿತು ಅಣ್ಣನಿಗೆ ಸಹಾಯಕರಾದರು. ಅಣ್ಣನಿಂದಲೇ ಶಕ್ತಿಯ ಉಪಾಸನೆಯ ಉಪದೇಶ ಪಡೆದ ಅವರು ನವರಾತ್ರಿಯ ಸಮಯದಲ್ಲಿ ಕೊಲ್ಲೂರಿಗೆ ಹೋಗಿ ಶಕ್ತಿಮಂತ್ರ ಪುರಶ್ಚರಣ ಮಾಡುತ್ತಿದ್ದರು. ಆಗ ಅವರಿಗೆ 22 ವರ್ಷ. ಲಕ್ಷಿ್ಮ ಎಂಬ ಕನ್ಯೆಯೊಡನೆ ವಿವಾಹವಾಯಿತು. ಆಗಾಗ ಯಾರಿಗೂ ತಿಳಿಸದೆ ಕೊಲ್ಲೂರಿಗೆ ಹೋಗಿ ಹಲವು ದಿನ ತಪಸ್ಸನ್ನಾಚರಿಸಿ ಬರುತ್ತಿದ್ದರು.

ಸ್ವಗ್ರಾಮಕ್ಕೆ ಮರಳುವ ವೇಳೆಗೆ ಪತ್ನಿಯು ಹೆಣ್ಣುಮಗುವಿನ ತಾಯಿಯಾದಳು. ಆದರೆ ಆ ಶಿಶುವು ಕೆಲವೇ ದಿನಗಳಲ್ಲಿ ಅಕಾಲ ಮೃತ್ಯು ಹೊಂದಿದಳು. ಎರಡು ತಿಂಗಳ ಬಳಿಕ ಶಿರಸಿ ಬಳಿಯ ನರಸಿಂಹ ದೇವಾಲಯಕ್ಕೆ ತೆರಳಿ ಒಂಬತ್ತು ದಿನ ನಿರಶನ ವ್ರತ, ಧ್ಯಾನ ನಡೆಸಿದರು. ಆಗ ತೇಜೋಮಯ ಈಶ್ವರನ ಶಕ್ತಿಯೇ ಬೆಳಕಾಗಿ ಅವರನ್ನು ಪ್ರವೇಶಿಸಿತು. ಇದೇ ಸ್ಥಿತಿಯಲ್ಲಿ 21 ದಿನ ಕಳೆದಾಗ ಆರೋಗ್ಯ ಹದಗೆಟ್ಟಿತು. ವಿಷಯ ತಿಳಿದ ಅಣ್ಣ ಊರಿಗೆ ಕರೆದೊಯ್ದು ಸಣ್ಣ ಪರ್ಣಕುಟೀರ ನಿರ್ವಿುಸಿಕೊಟ್ಟರು. ಒಮ್ಮೆ ಇವರಿಗೆ ಸಮೀಪದ ಕರಿಕಾನ ಅಮ್ಮನವರ ಸನ್ನಿಧಿಯಲ್ಲಿ ತಪಸ್ಸನ್ನಾಚರಿಸುವಂತೆ ಅಪ್ಪಣೆಯಾಯಿತು. ಅಲ್ಲಿಯೂ ಒಂದು ವಾರ ಕಠಿಣ ತಪಸ್ಸನ್ನು ಆಚರಿಸಿದರು. ಎಷ್ಟೋ ದಿನಗಳ ಸಾಧನೆಯ ಬಳಿಕ ಬರಿಗಾಲಿನಲ್ಲಿ ನಡೆಯುತ್ತ ಕೊಡಚಾದ್ರಿಗೆ ತೆರಳುತಿದ್ದರು. ಮನೆಗೆ ಮರಳಿದ ಅವರು ಪತ್ನಿಗೆ ತಮ್ಮ ವೈರಾಗ್ಯದ ಭಾವನೆಯನ್ನು ತಿಳಿಸಿ, ತಾಯಿಯ ಒಪ್ಪಿಗೆ ಪಡೆದು ಯಲ್ಲಾಪುರದಲ್ಲಿದ್ದ ಯೋಗೀಂದ್ರ ಪರಮಾನಂದರಿಂದ ಅನೇಕ ಯೋಗರಹಸ್ಯಗಳನ್ನು ಕಲಿತರು. ನಂತರ ದಕ್ಷಿಣಕ್ಷೇತ್ರಗಳ ತೀರ್ಥಯಾತ್ರೆ ಪೂರ್ಣಗೊಳಿಸಿ ಶಿರಸಿಯ ಹತ್ತಿರದ ಶೀಗೆಹಳ್ಳಿಗೆ ಆಗಮಿಸಿದರು. ಅಲ್ಲಿನ ತಿಮ್ಮಣ್ಣ ದೀಕ್ಷಿತರು ತಿರುಮಲರಿಗಾಗಿ ಗುಹೆ ನಿರ್ವಿುಸಿ ಸ್ಥಳವನ್ನು ವಿಸ್ತರಿಸಿ ಮಠವನ್ನು ನಿರ್ವಿುಸಿದರು. ಅಲ್ಲಿ ಪರಮಾನಂದರ ಪಾದುಕೆ ಸ್ಥಾಪಿಸಿ ದತ್ತಾರಾಧನೆ ಪ್ರಾರಂಭಿಸಿದರು. ಇದೇ ವೇಳೆಗೆ ಆಷಾಢಮಾಸದಲ್ಲಿ 4-5 ದಿನ ಸತತ ಜ್ವರ ಬಂದು ಜಪ ತಪಗಳಿಗೆ ತಡೆಯಾಯಿತು. ಅವರು ಗುಹೆ ಪ್ರವೇಶಿಸಿ ಧ್ಯಾನನಿರತರಾದಾಗ ಗೋಚರಿಸಿದ ತೇಜೋಮಯ ಶಕ್ತಿಯು ಯೋಗಿಂದ್ರರಲ್ಲಿ ಸೇರಿತು. ಆ ತೇಜೋಗೋಲದಿಂದ ದತ್ತಾತ್ರೇಯನ ಸ್ವರೂಪವು ಪ್ರತ್ಯಕ್ಷವಾಗಿ, ಸಂನ್ಯಾಸ ಸ್ವೀಕರಿಸುವಂತೆ ದಿವ್ಯವಾಣಿ ಆಯಿತು. ಹೀಗೆ ಗುಹೆಯಲ್ಲಿ ವಾರಗಳು ಕಳೆದ ಮೇಲೆ ಪುನಃ ದತ್ತಾತ್ರೇಯನ ದರ್ಶನವಾಯಿತು. ‘ಇನ್ನೂ ಯಾಕೆ ಅಪ್ಪಣೆಯನ್ನು ನೆರವೇರಿಸಿಲ್ಲ? ಆತ್ಮಚಿಂತನೆಯ ಬಲದಿಂದ ನೂತನ ಅಭಿಧಾನ ಶಿವಾನಂದ ಸರಸ್ವತಿ ಸಾಕಲ್ಲ?’ ಶ್ರೀ ಗುರುದೇವನ ಅಪ್ಪಣೆಗೆ ಸಕಲ ಲೋಕಶಕ್ತಿಗಳು ಜಯಕಾರಗೈಯ್ದಂತೆ ಗುಹೆಯ ಒಳಗೂ ಹೊರಗೂ ಶಿವಾನಂದ ಸರಸ್ವತಿ ಎಂಬ ನಾದತರಂಗಗಳು ಮೊಳಗಿದವು. ಗುಹಾವಾಸದಿಂದ ಅವರು ಹೊರಬಂದಾಗ ಭೈರವನೇ ಪ್ರಶಾಂತವಾಗಿ ಶಿವಸ್ವರೂಪದಲ್ಲಿ ಹೊರಬಂದಂತೆ ಅನಿಸಿತು. 2-3 ವರ್ಷಗಳಿಂದ ಮಗನ ದರ್ಶನವಿಲ್ಲದ ತಾಯಿ ಇದೇ ಸಮಯಕ್ಕೆ ಸೊಸೆಯೊಂದಿಗೆ ಶೀಗೆಹಳ್ಳಿಗೆ ಬಂದಳು. ತಾಯಿ-ಪತ್ನಿಯ ಸಮ್ಮುಖದಲ್ಲಿ ಶ್ರಾವಣ ಶುದ್ಧ ಪೂರ್ಣಿಮೆಯಂದು (02.08.1917) ತಿಮ್ಮಣ್ಣ ದೀಕ್ಷಿತರ ಮಾರ್ಗದರ್ಶನದಲ್ಲಿ ಸಂನ್ಯಾಸದೀಕ್ಷೆ ಪಡೆದರು. ನಂತರ ಜೀವಧಾರಣೆಗೆ ಮಾತ್ರ ಆಹಾರಸೇವನೆ. ನಿತ್ಯ ಭಜನೆ, ಪುರಾಣ, ಧಮೋಪದೇಶ, ಅಧ್ಯಯನ, ಲಂಬಿಕಾಯೋಗದಿಂದ ತಪಗೈಯುವ ಅಭ್ಯಾಸ - ಇವುಗಳಲ್ಲಿ 24 ವರ್ಷ ತಲೆಯನ್ನು ನೆಲಕ್ಕೆ ಇಡದೆ ಹಗಲು-ರಾತ್ರಿ ಕಳೆದರು. ಅನೇಕ ಅಲೌಕಿಕ ಪವಾಡಗಳನ್ನು ಮಾಡುತ್ತಿದ್ದ ಶಿವಾನಂದರು ಆರ್ತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದರು.

1860ನೇ ಈಶ್ವರ ಸಂವತ್ಸರದ ಆಷಾಢ ಶುಕ್ಲಪಕ್ಷದ ಒಂದು ದಿನ ಶಿವಾನಂದರು ಕೆರೆಯಲ್ಲಿ ಸ್ನಾನ ಮುಗಿಸಿ ಮಠಕ್ಕೆ ಬರುವಾಗ ಪಾದುಕೆ ಜಾರಿತು. ಒಂದು ಕ್ಷಣ ತಲೆಯೆತ್ತಿ, ಗುರುವೇ ನಿನ್ನಿಷ್ಟ ಏನಿದೆಯೋ ಎಂದು ಉದ್ಗರಿಸಿದರು. ಅಂದೇ ಹಕ್ಕಿ ರಾಮ ಭಟ್ಟರನ್ನು ಕರೆದು ಮಠದ ಮುಂದಿನ ಆಚರಣೆ, ವ್ಯವಹಾರಗಳ ಬಗ್ಗೆ ಮೃತ್ಯುಪತ್ರದ ಸಿದ್ಧತೆ ಮಾಡಿಸಿದರು. ಅದೇ ಬಹುಳ ತ್ರಯೋದಶಿಯಂದು (04.08.1937) ಶಿಷ್ಯರನ್ನು ಕರೆದು ತಮ್ಮ ಗುಹೆಯ ದ್ವಾರದಲ್ಲಿದ್ದ ಪ್ರಣವ ಬರೆಯಲು ಹೇಳಿದರು. ತಾವೇ ಓಂಕಾರನಾದ ಗೈದು ಪ್ರಣವದ ಮೇಲೆ ಕುಳಿತು ಯೋಗಸ್ಥರಾದರು. ಬೆಳಗಾಯಿತು. ಆಗ ನಿರೀಕ್ಷಿಸಿದರೆ ಗುರುಗಳು ಸಮಾಧಿಸ್ಥರಾಗಿ ಕಾಣುತ್ತಿದ್ದರು. ಅವರು ಅತಿ ಪ್ರೀತಿಯಿಂದ ಕಾಣುತ್ತಿದ್ದ ಮಠದಲ್ಲಿನ ಗಂಗೆ ಎಂಬ ಹಸು ಅಂದು ಬೆಳಗ್ಗೆ ಮುಂಚೆಯೇ ಬಂದು ಕಣ್ಣೀರಿಡತೊಡಗಿತು. ಗುರುಗಳು ಪೂರ್ಣ ಸಮಾಧಿಸ್ಥರಾದರೆಂದು ಆಗ ಎಲ್ಲರೂ ಅರಿತರು. ನಂತರ ಅವರ ದೇಹವನ್ನು ಸಮಾಧಿ ಮಾಡಲಾಯಿತು. ಶ್ರೀಗಳ ಭಕ್ತರಾದ ಚಂದ್ರಮೌಳೀಶ್ವರ ಹೆಗಡೆ, ಪೂರ್ವಾಶ್ರಮದ ಸಂಬಂಧಿ ರವಿ ಭಟ್ಟರು ಹಾಗೂ ಊರ ನಾಗರಿಕರು ಪ್ರತಿ ವರ್ಷ ಆಷಾಢ ಬಹುಳ ತ್ರಯೋದಶಿಯಂದು ಪರಮಾನಂದ ಮಠದಲ್ಲಿ ಶಿವಾನಂದರ ಆರಾಧನೋತ್ಸವ ನಡೆಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net