ಸಂಸ್ಕಾರವಂತ ಸಜ್ಜನರಿಂದ ಬದುಕು ಉಜ್ವಲ

ckm rambapuri
ಚಿಕ್ಕಮಗಳೂರು ತಾಲೂಕು ಮುತ್ತಿನಪುರ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.
Published on

ಚಿಕ್ಕಮಗಳೂರು: ಮಾತಿಗೆ ಒಂದು ಅರ್ಥ ಇದ್ದರೆ ಮೌನಕ್ಕೆ ಹಲವು ಅರ್ಥ ಇರುತ್ತದೆ. ಮಾತೆಂಬುದು ಜ್ಯೋತಿರ್ಲಿಂಗ. ದಾರಿ ತಪ್ಪಿದರೆ ಮರಳಿ ಸರಿ ದಾರಿಯಲ್ಲಿ ಸಾಗಬಹುದು. ಆದರೆ ಬಾಯಿ ತಪ್ಪಿ ವಚನ ಭ್ರಷ್ಟರಾದರೆ ಮನುಷ್ಯನ ವ್ಯಕ್ತಿತ್ವಕ್ಕೆ ಗೌರವ ಸಿಗಲಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ತಾಲೂಕಿನ ಮುತ್ತಿನಪುರದ ಶ್ರೀ ವೀರಭದ್ರೇಶ್ವರ ಕ್ಷೇತ್ರದಲ್ಲಿ ಭಾನುವಾರ ಮಂಡಲ ಪೂಜೆ ನಿಮಿತ್ತ ಜರುಗಿದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ನಂತರ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಗೆಲ್ಲುತ್ತಾ ಹೋಗುವವನು ಇತಿಹಾಸ ಸೃಷ್ಟಿಸುತ್ತಾನೆ. ಸೋತು ಗೆಲ್ಲುವವನು ಇತಿಹಾಸವನ್ನೇ ಬದಲಾಯಿಸುತ್ತಾನೆ. ಹೃದಯವಂತರ ಹತ್ತಿರ ಮೌನದಿಂದಿರಬೇಕು. ಮೂಢರಿಂದ ದೂರದಲ್ಲಿರಬೇಕು. ಆಗಲೇ ಮೌನಕ್ಕೊಂದು ಅರ್ಥ ಮಾತಿಗೊಂದು ಬೆಲೆ ಬರುತ್ತದೆ ಎಂದು ಹೇಳಿದರು.
ಎಷ್ಟೇ ಒಳ್ಳೆಯವರಾದರೂ ಚುಚ್ಚು ಮಾತನಾಡುವ ಜನರು ಇದ್ದೇ ಇರುತ್ತಾರೆ ಎಂದು ಬೇಸರ ಪಟ್ಟುಕೊಳ್ಳಬಾರದು. ಸೂಜಿಯಿಂದ ಹೂವನ್ನು ಪೋಣಿಸುವಾಗ ಹೂವು ನೋವು ಅನುಭವಿಸುವುದು. ನೋವು ಸಹಿಸಿಕೊಂಡಾಗ ಅದು ದೇವರಿಗೆ ಮಾಲೆಯಾಗಿ ಸಮರ್ಪಿತಗೊಳ್ಳುತ್ತದೆ. ಸಂಸ್ಕಾರವಂತ ಸಜ್ಜನರಿಂದ ಬದುಕು ಉಜ್ವಲಗೊಳ್ಳುತ್ತದೆ ಎಂದು ತಿಳಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನದಲ್ಲಿ ಅಮೂಲ್ಯವಾದ ಆಧ್ಯಾತ್ಮ ಚಿಂತನೆಗಳನ್ನು ಬೋಧಿಸಿದ್ದನ್ನು ಯಾರೂ ಮರೆಯಬಾರದು. ದುಷ್ಟರ ಸಂಹಾರ, ಶಿಷ್ಟರ ಸಂರಕ್ಷಣೆಗಾಗಿ ಶ್ರೀ ವೀರಭದ್ರಸ್ವಾಮಿಯ ಅವತಾರಗೊಂಡಿರುವುದು ಸರ್ವರಿಗೂ ತಿಳಿದಿದೆ. ವೇದ್ಯ, ಮುತ್ತಿನಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪುರಾತನವಾಗಿದ್ದು ಮಲೆನಾಡು ಪ್ರಾಂತ್ಯದ ಎಲ್ಲ ಭಕ್ತರ ಸಹಕಾರದಿಂದ ಭವ್ಯ, ಸುಂದರ ಶಿಲಾ ದೇಗುಲ ನಿರ್ಮಾಣ ಮಾಡಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನೂತನ ದೇವಾಲಯದ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಮುತ್ತಿನಪುರ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸಿದರು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಮತ್ತು ಪ್ರಧಾನ ಅರ್ಚಕ ಶಶಿಧರ ಇತರರು ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರಕ್ಕೆ ಆಗಮಿಸಿದ ಜಗದ್ಗುರುಗಳನ್ನು ಮಂಗಳ ವಾದ್ಯ, ಪೂರ್ಣ ಕುಂಭದೊಂದಿಗೆ ಭಕ್ತಿಯಿಂದ ಸ್ವಾಗತಿಸಲಾಯಿತು.
ಕೆ.ಬಿದರೆ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ದೇವಾಲಯದ ಅರ್ಚಕ ಶಶಿಧರ್, ಪ್ರಮುಖರಾದ ಪ್ರಭುಲಿಂಗಶಾಸ್ತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net