ಗಣೇಶನ ಮಾತೆ ಸಕಲ ಸೌಭಾಗ್ಯದಾತೆ ಶಿವನ ಸತಿ ಶ್ರೀಗೌರಿ

photo-4-68acaa2604afa
Published on
| ಕೆ. ವಿ. ಪದ್ಮಾವತಿ

ಗೌರಿ ಹಬ್ಬ ಮಹಿಳೆಯರ ಹಬ್ಬ. ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಗೌರಿ ಹಬ್ಬ ಆಚರಿಸಲಾಗುತ್ತದೆ. ಇದು ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ.

ಬಾಗಿನ ಕೊಡುವುದು ಸ್ವರ್ಣಗೌರಿ ಹಬ್ಬದ ವಿಶೇಷ ಆಚರಣೆಗಳಲ್ಲಿ ಒಂದು. ಈ ಬಾಗಿನವನ್ನು ಪಡೆಯುವುದರಿಂದ ಮುತ್ತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವುದು ಪುರಾಣದ ನಂಬಿಕೆ.

ಪುರಾಣದಲ್ಲಿ...: ಕೃಷ್ಣವರ್ಣೆ ಕಾಳಿ ತನ್ನ ದೇಹದ ಕಪ್ಪನ್ನು ಕಳೆದುಕೊಂಡು ಗೌರವರ್ಣದ ಗೌರಿಯಾದಂತೆ ನಮ್ಮ ಜೀವನದ ಕಪ್ಪು ಚುಕ್ಕೆಗಳಾಗಿರುವ ಅಂಧಕಾರಗಳು, ಕಷ್ಟಗಳು ಕಳೆದು ಸುಖ, ಸಮದ್ಧಿ, ನೆಮ್ಮದಿ, ಅಭಿವೃದ್ಧಿ ಎಂಬ ಗೌರವರ್ಣ ಪ್ರಾಪ್ತಿಗೆ ಈ ಗೌರಿಹಬ್ಬ ಸಾಕ್ಷಿಯಾಗಿದೆ. ಗೌರಿ ಎಂದರೆ ಪಾರ್ವತಿ. ಶಿವನ ಸತಿ, ಗಣೇಶನ ಮಾತೆ. ಗಣೇಶ ಹಬ್ಬದ ಹಿಂದಿನ ದಿನ ಗೌರಿಹಬ್ಬ ಆಚರಿಸಲಾಗುತ್ತದೆ. ಪಾರ್ವತಿಯ ಒಂದು ರೂಪವಾಗಿರುವ ಗೌರಿ ಎಂದರೆ ಗೌರವರ್ಣ ಎಂಬಂತಾಗುತ್ತದೆ. ಹೌದು! ಶಿವನ ಹೆಂಡತಿಯ ಬಾಳಿನಲ್ಲೂ ಚರ್ಮದ ವರ್ಣ ಕಾಡಿತ್ತು ಎಂದು ಪುರಾಣಗಳು ಪುಷ್ಟೀಕರಿಸುತ್ತವೆ. ಗೌರಿ ಜನ್ಮತಾಳಿದ್ದು ಹೇಗೆ ಎನ್ನುವುದಕ್ಕೆ ಪುರಾಣಗಳು ನೀಡುವ ಕಾರಣಗಳು ಹೀಗಿವೆ:

ದಕ್ಷಬ್ರಹ್ಮನಿಗೆ ಕಾಳಿ ಎಂಬ ಪುತ್ರಿ ಇದ್ದಳು. ಆಕೆ ಕಪ್ಪು ಬಣ್ಣದವಳು. ದಕ್ಷಬ್ರಹ್ಮ ಕಾಳಿಯನ್ನು ಶಿವನಿಗೆ ಮದುವೆ ಮಾಡಿಕೊಟ್ಟಿದ್ದ. ಶಿವ ಮತ್ತು ಕಾಳಿ ದಂಪತಿ ಚೆನ್ನಾಗಿದ್ದರು. ಏತನ್ಮಧ್ಯೆ ಒಮ್ಮೆ ಆಸ್ಥಾನ ಮಂಟಪದಲ್ಲಿ ವಿಷ್ಣು ಮತ್ತು ದೇವತೆಗಳಿದ್ದ ಸಂದರ್ಭದಲ್ಲಿ ಶಿವನು ಕಾಳಿಯನ್ನು ‘ಕಷ್ಣವರ್ಣಳಾದ ಕಾಳಿಯೇ ಬಾ.. ಸೌಂದರ್ಯದಿಂದ ಕೂಡಿದ ನಿನ್ನ ರೂಪ ನನಗೆ ಪ್ರಿಯ’ ಎನ್ನುತ್ತಾನೆ. ಇದರಿಂದ ದುಃಖಿತಳಾದ ಕಾಳಿ ತನ್ನ ಕಪ್ಪು ಬಣ್ಣವನ್ನು ನೀಗಲು ಅಲ್ಲೇ ಅಗ್ನಿಗೆ ಹಾರುತ್ತಾಳೆ. ನಂತರದ ಜನ್ಮದಲ್ಲಿ ಪರ್ವತರಾಜನ ಮಗಳಾಗಿ ಹುಟ್ಟಿ ಮತ್ತೆ ಶಿವನನ್ನೇ ಮದುವೆ ಮಾಡಿಕೊಳ್ಳುತ್ತಾಳೆ. ಆಗ, ಗೌರವರ್ಣದ ಹೊಂದಿರುವ ಗೌರಿಯಾಗಿರುತ್ತಾಳೆ.

ಕೌಶಿಕ ಜನ್ಮ: ಇನ್ನೊಂದು ಕಥೆಯ ಪ್ರಕಾರ ಶುಂಭನಿ ಶುಂಭ ಎಂಬ ಅಸುರರು ಲೋಕಕ್ಕೆ ಕಂಟಕವಾಗಿ ಕಾಡುತ್ತಿರುತ್ತಾರೆ. ಅವರಿಂದ ಲೋಕವನ್ನು ಕಾಪಾಡಲು ದೇವತೆಗಳು ಪಾರ್ವತಿಯ ಮೊರೆ ಹೋಗುತ್ತಾರೆ. ಇವರನ್ನು ಸಂಹಾರ ಮಾಡಲು ಪಾರ್ವತಿಯ ದೇಹದಿಂದ ಕೌಶಿಕೆ ಎನ್ನುವ ಸುಂದರಿ ಜನ್ಮಪಡೆಯುತ್ತಾಳೆ. ಉದ್ದೇಶ ಈಡೇರಿತಾದರೂ, ಪಾರ್ವತಿ ಕಪ್ಪುವರ್ಣ ಪಡೆಯುತ್ತಾಳೆ. ಇದನ್ನು ಕಂಡ ಶಿವ ಪಾರ್ವತಿಯನ್ನು ಕಾಳಿ ಎಂದು ಕರೆಯುತ್ತಾನೆ. ಕಾಳಿಯು ತಪಸ್ಸು ಮಾಡಿ ಗೌರವರ್ಣವನ್ನು ಪಡೆದುಕೊಳ್ಳುತ್ತಾಳೆ. ಈ ಕಥೆಗಳ ನಿರೂಪಣೆ ಬೇರೆಯಾಗಿದ್ದರೂ, ಕಾಳಿ ಎಂಬ ಕಪ್ಪು ದೇವತೆ ಗೌರವರ್ಣದ ಗೌರಿಯಾಗಿರುವುದರ ಬಗ್ಗೆ ತಿಳಿಸುತ್ತವೆ.

ನಮ್ಮ ಕಪ್ಪುಗಳು ಎಂದರೆ, ನಮ್ಮ ಚರ್ಮದ ಬಣ್ಣವಲ್ಲ. ಬದಲಾಗಿ, ನಮ್ಮಲ್ಲಿನ ಅಂಧಕಾರದ ಗುಣಗಳು ಕಳೆದುಕೊಳ್ಳುವ ಸಮಯ ಇದಾಗಿದೆ. ಕಥೆಗಳ ಪ್ರಕಾರ ಕಾಳಿಯು ಅಗ್ನಿಪ್ರವೇಶ ಅಥವಾ ತಪಸ್ಸಿನಿಂದ ಗೌರವರ್ಣ ಪಡೆದಳು. ದೇವತೆಗಳಿಗೆ ಅದು ಸಾಧ್ಯ. ಮಾನವರಾದ ನಮ್ಮಲ್ಲಿನ ಅಂಧಕಾರಗಳು ಎನ್ನುವ ಕಪ್ಪು ಕಳೆದು ಸಮದ್ಧಿ, ನೆಮ್ಮದಿ, ಅಭಿವೃದ್ಧಿ ಎನ್ನುವ ಗೌರವರ್ಣದ ಬೆಳಕು ನಮ್ಮನ್ನು ಆವರಿಸಲು ಈ ಗೌರಿ ಹಬ್ಬ ಹಾದಿಯಾಗಲಿ.

ವ್ರತಾಚರಣೆಯ ವಿಧಾನ : ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿಕೊಂಡ ಪದ್ಮ ಬರೆದು ಅದರ ಮೇಲೆ ಒಂದು ಸಣ್ಣ ತಟ್ಟೆಯನ್ನಿಟ್ಟು ಅರಿಶಿಣದ ಗೌರಿಯನ್ನಿಟ್ಟುಕೊಳ್ಳಬೇಕು. ಇದರ ಹಿಂದೆ ಮಣ್ಣಿನ ಗೌರಿಯನ್ನು ಇಡಬೇಕು. ಗಂಗೆಯ ಮೃತ್ತಿಕೆಯಿಂದ ಮರಳ ಗೌರಿ ಅಥವಾ ಗಂಗೆಯನ್ನು ಪೂಜಿಸಿ ಅವಳಿಂದ ಅರಿಶಿನದ ಗೌರಿಯನ್ನು ಮಾಡಿ ದೇವಿಯನ್ನು ಆವಾಹಿಸಿ ಷೋಡಶೋಪಚಾರ ಪೂಜೆ ಮಾಡಬೇಕು. ರವಿಕೆ ಕಣವನ್ನು ತಟ್ಟೆಯ ಸುತ್ತು ಹೊದಿಸಬೇಕು. ನೈವೇದ್ಯಕ್ಕೆ ಕೋಸಂಬರಿ, ಹೋಳಿಗೆ, ಪಾಯಸ ಪ್ರಿಯವಾದುದು. 16 ಎಳೆ ಗೆಜ್ಜೆ ವಸ್ತ್ರ, ಬಳೆ ಬಿಚ್ಚೋಲೆ ಏರಿಸಬೇಕು. ಹದಿನಾರು ಸ್ಥಾನಗಳಲ್ಲಿ್ಲ ಗೌರಿ ದೇವಿಯ ಅಂಗಪೂಜೆ ಮಾಡಬೇಕು. ಗೌರಿ ಪೂಜೆಯ ವ್ರತ ಪುಷ್ಪಗಳ ಸಂಖ್ಯೆ ಹದಿನಾರು. ದೋರ ಗ್ರಂಥಿಗಳು ಹದಿನಾರು. ಗೌರಿ ವ್ರತದ ಸಾಫಲ್ಯಕ್ಕೆ ಬೇಕಾಗುವ ವರ್ಷಗಳು ಹದಿನಾರು. ಬಾಗಿನಗಳು ಹದಿನಾರು. ಹದಿನಾರು ಕಲೆಗಳಿಂದ ಕೂಡಿದ ಪರಮಾತ್ಮಮಯಿಯಾದ ಪ್ರಕೃತಿಮಾತೆಯೇ ಗೌರಿದೇವಿ.

ಗೌರಿಗೆ ಉಪ್ಪಕ್ಕಿ: ಗೌರಿ ಗಣೇಶ ಬಿಡುವ ದಿನ ಗೌರಿಗೆ ಪೂಜೆ ಮಾಡಿ ಉಪ್ಪು ಅಕ್ಕಿಯನ್ನು ತಟ್ಟೆಗೆ ಹಾಕಿಕೊಂಡು ಅದನ್ನು 3 ಸಲ ತೆಗೆದು ಬೇರೆ ತಟ್ಟೆಗೆ ಹಾಕಬೇಕು.

ಸೋಬಲಕ್ಕಿ: ಗೌರಿಯನ್ನು ವಿಸರ್ಜಿಸಿ ಕೆಳಗಿಳಿಸಿದಾಗ ಅವಳಿಗೆ ಒಂದು ತಟ್ಟೆಯಲ್ಲಿ ರವಿಕೆ, ಕಣ, ತೆಂಗಿನಕಾಯಿ, ಎಲೆ ಅಡಿಕೆ, ಮಂಗಳಗೌರಿಗೆ ಇಟ್ಟಿದ್ದ ಅರಿಶಿನ ಗೌರಿ, ಕೊಬ್ಬರಿ ಬೆಲ್ಲಗಳನ್ನು ತೋರಿಸಿ ನಂತರ ಆರತಿ ಮಾಡಬೇಕು. ಗೌರಿಯನ್ನು ಕಳುಹಿಸಿಕೊಡುವಾಗ ಗುಡಾನ್ನ, ಘೃತಾನ್ನ, ಹುಳಿಯನ್ನ, ಪಾಯಸ, ಪರಮಾನ್ನ ಎಂಬ ಪಂಚಪಕ್ವಾನ್ನಗಳನ್ನು ಅರ್ಪಿಸಿ ಸೋಬಲಕ್ಕಿ ಇಟ್ಟು ಆರತಿ ಮಾಡುತ್ತಾರೆ. ತವರಿಗೆ ಬಂದ ದೇವಿ ಮರು ವರುಷ ಬರಲಿ ಎಂಬ ಭಾವನೆ ಇದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net