

ಕೊಚ್ಚಿ: ಮೂರು ವರ್ಷದ ಹಿಂದೆ ಬೇರೊಬ್ಬ ವ್ಯಕ್ತಿಯಿಂದ ಕೈಗಳನ್ನು ದಾನವಾಗಿ ಪಡೆದುಕೊಂಡು ತುಂಡಾಗಿದ್ದ ತನ್ನ ತೊಳುಗಳಿಗೆ ಸರ್ಜರಿ ಮೂಲಕ ಅಳವಡಿಸಿಕೊಂಡ ಯುವತಿಯಲ್ಲಿ ಇದೀಗ ಪವಾಡವೆನಿಸುವಂತಹ ಬದಲಾವಣೆಯೊಂದು ಕಾಣಿಸಿಕೊಂಡಿದೆ. ತನಗಿಂತ ಕಪ್ಪಿದ್ದ ಕೈಗಳನ್ನು ಅಳವಡಿಸಿಕೊಂಡ ಯುವತಿಯಲ್ಲಿ ಕೈ ಬಣ್ಣ ದೇಹದ ಬಣ್ಣಕ್ಕೆ ತಿರುಗಿದ್ದು, ಇದಕ್ಕೆ ಸ್ವತಃ ಆಪರೇಷನ್ ಮಾಡಿರುವ ವೈದ್ಯರೇ ಶಾಕ್ ಆಗಿದ್ದಾರೆ.
ಮೂರು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ ಶ್ರೇಯ ಸಿದ್ದನಗೌಡ ಹೆಸರಿನ ಯುವತಿಯನ್ನು ಕೊಚ್ಚಿಯ ಅಮೃತ ಇನ್ಸ್ಟಿಟ್ಯೂಟ್ನಲ್ಲಿ ಆಫ್ ಮೆಡಿಕಲ್ ಸೈನ್ಸ್ನಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಅಲ್ಲಿ ಅಪಘಾತವೊಂದರಲ್ಲಿ ತನ್ನ ಮೆದುಳಿನ ಜೀವವನ್ನೇ ಕಳೆದುಕೊಂಡು ಬದುಕಿದ್ದ 20 ವರ್ಷದ ಯುವಕನ ಕೈಗಳನ್ನು ಆತನ ಕುಟುಂಬದ ಅನುಮತಿಯ ಮೇರೆಗೆ ಈ ಯುವತಿಗೆ ಜೋಡಿಸಲಾಗಿತ್ತು. ಆಕೆಗಿಂತ ಕಪ್ಪಗಿದ್ದ ಆ ಯುವಕನ ಕೈಗಳು ಈಕೆಯ ಕೈಗಳಿಂತ ದಪ್ಪವಿದ್ದಿದ್ದರಿಂದ ಅದು ಆಪರೇಷನ್ ಮೂಲಕ ಜೋಡಿಸಿದ ಕೈಗಳು ಎಂದು ಸುಲಭವಾಗಿ ಕಂಡು ಹಿಡಿಯುವಂತಿತ್ತು.
ಕ್ರಮೇಣ ಜೋಡಿಸಲ್ಪಟ್ಟ ಕೈಗಳಲ್ಲಿ ತೂಕ ಕಡಿಮೆಯಾಗಿದ್ದು, ಶ್ರೇಯಾಳ ಕೈಗಳಿಗೆ ಹೊಂದಿಕೊಂಡಿದೆ. ಇನ್ನೂ ವಿಶೇಷವೆಂಬಂತೆ ಇದೀಗ ಆಕೆಗೆ ಜೋಡಿಸಲ್ಪಟ್ಟ ಕೈಗಳು ಆಕೆಯ ಮೈ ಬಣ್ಣಕ್ಕೆ ತಿರುಗಿದೆ. ವೈದ್ಯಕೀಯ ರಂಗದಲ್ಲಿ ಇದು ನಾನು ಕೇಳುತ್ತಿರುವ ಮತ್ತು ನೋಡುತ್ತಿರುವ ಮೊದಲನೇ ಬಣ್ಣ ಬದಲಾವಣೆ ಎಂದು ವೈದ್ಯರು ಸಂತಸದಿಂದ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಚರ್ಮದ ಬಣ್ಣ ನಿಯಂತ್ರಣದಲ್ಲಿ ಸ್ತ್ರೀ ಹಾರ್ಮೋನುಗಳಿಗೆ ಯಾವುದೇ ಪಾತ್ರವಿರುವುದಿಲ್ಲ. ಇದನ್ನು ಮೆಲನಿನ್ ನಿಯಂತ್ರಿಸುತ್ತದೆ. ಇದು ಅನುವಂಶಿಕ ಅಂಶಗಳಿಂದ ಮತ್ತು ಮೆದುಳಿನಿಂದ ಸ್ರವಿಸುವ ಮೆಲಮೊಸೈಟ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ನಿಂದ ನಿಯಂತ್ರಿಸಲ್ಪಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಶ್ರೇಯಾಳಿಗೆ ಆಪರೇಷನ್ ಮಾಡಿರುವ ವೈದ್ಯರು 2015ರಲ್ಲಿ ಅಬ್ದುಲ್ ರಹೀಂ ಹೆಸರಿನ ವ್ಯಕ್ತಿಗೆ ಕೈ ಜೋಡಿಸಿದ್ದು ಆತನ ಕೈಗಳಲ್ಲೂ ಸಹ ಬಣ್ಣ ಬದಲಾವಣೆ ಆಗಿದೆ ಎನ್ನುವುದನ್ನು ವೈದ್ಯರು ತಿಳಿಸಿದ್ದಾರೆ. ಈವರೆಗೆ ಒಟ್ಟು ಐದು ಆಪರೇಷನ್ಗಳನ್ನು ಮಾಡಲಾಗಿದ್ದು, ಅದರಲ್ಲಿ ತನಗಿಂತ ಕಪ್ಪಗಿರುವ ಕೈಗಳನ್ನು ಜೋಡಿಸಿಕೊಂಡ ಇಬ್ಬರು ವ್ಯಕ್ತಿಗಳಲ್ಲಿ ಮಾತ್ರ ಬಣ್ಣ ಬದಲಾವಣೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)