ತುಮಕೂರು : ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಜೋಳಿಗೆ ಹಿಡಿದು ಮಂಡಿಪೇಟೆಯಲ್ಲಿ ಭಿಕ್ಷಾಟನೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತರು, ವರ್ತಕರು ದವಸ, ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ಸಲ್ಲಿಸಿದರು.
ಫೆ.18ರಿಂದ ಮಾ.4ರವರೆಗೆ ಶ್ರೀಮಠದಲ್ಲಿ ನಡೆಯಲಿರುವ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಗಳು ಮಂಗಳವಾರ ಭಿಕ್ಷಾಟನೆ ನಡೆಸಿದರು. ಪ್ರತೀ ವರ್ಷ ಈ ರೀತಿ ಭಿಕ್ಷಾಟನೆ ಕೈಗೊಳ್ಳುವುದು ಮೊದಲಿನಿಂದ ಶ್ರೀಮಠದಲ್ಲಿ ನಡೆದುಕೊಂಡು ಬಂದ ಪದ್ಧತಿ.
ಈ ಮೊದಲು ಡಾ.ಶಿವಕುಮಾರ ಸ್ವಾಮೀಜಿ ಭಿಕ್ಷಾಟನೆ ಮಾಡುತ್ತಿದ್ದರು, ಅದೇ ಪರಂಪರೆಯನ್ನು ಶ್ರೀಸಿದ್ದಲಿಂಗಸ್ವಾಮೀಜಿ ಮುಂದುವರಿಸಿದ್ದು, ಮಂಡಿಪೇಟೆಯ ವ್ಯಾಪಾರಿಗಳು ಶ್ರೀಗಳ ಆಶೀರ್ವಾದ ಪಡೆದು ಕಾಣಿಕೆ ಸಮರ್ಪಿಸಿದರು.
ನಗರದ ಅಶೋಕ ರಸ್ತೆಯಲ್ಲಿರುವ ಶ್ರೀಬಸವೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ರೆಡ್‌ಕ್ರಾಸ್ ಬಿಲ್ಡಿಂಗ್, ಮಂಡಿಪೇಟೆ ಸೇರಿ ನಗರದಾದ್ಯಂತ ಶ್ರೀಗಳು ಸಂಚರಿಸಿ ಭಕ್ತರಿಂದ ಕಾಣಿಕೆ, ದವಸ ಧಾನ್ಯ ಸ್ವೀಕರಿಸಿದರು. ಭಿಕ್ಷಾಟನೆಗೆ ಬಂದ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಬರ ಮಾಡಿಕೊಂಡ ವರ್ತಕರು, ಜನಸಾಮಾನ್ಯರು ಕಾಣಿಕೆ, ದವಸ ಧಾನ್ಯಗಳನ್ನು ನೀಡಿ ಆಶೀರ್ವಾದ ಪಡೆದರು.
ಅಕ್ಕಿ, ರಾಗಿ, ತೊಗರಿಬೇಳೆ, ಬೆಲ್ಲ, ಹುಣೇಸಹಣ್ಣು ಹೀಗೆ ಎಲ್ಲ ರೀತಿಯ ದವಸ ಧಾನ್ಯಗಳು ಶ್ರೀಮಠಕ್ಕೆ ದಾನವಾಗಿ ಹರಿದುಬಂದವು. ಈ ದಾಸ್ತಾನು ಸಂಗ್ರಹಿಸಿ ಜಾತ್ರೆ ಸಂದರ್ಭದಲ್ಲಿ ರಾಜ್ಯದೆಲ್ಲೆಡೆಯಿಂದ ಬರುವ ಭಕ್ತರಿಗೆ, ಸಾರ್ವಜನಿಕರಿಗೆ ದಾಸೋಹ ಏರ್ಪಡಿಸಲಾಗುವುದು ವಾಡಿಕೆ. ಟ್ರ್ಯಾಕ್ಟರ್‌ಗಳಲ್ಲಿ ಧವಸ, ಧಾನ್ಯಗಳನ್ನು ತುಂಬಿಕೊಂಡು ಹೋಗಲಾಯಿತು. ಶ್ರೀಗಳ ಭಿಕ್ಷಾಟನೆ ಸಂದರ್ಭದಲ್ಲಿ ಮಠದ ಭಕ್ತರಾದ ಟಿ.ಕೆ.ನಂಜುಂಡಪ್ಪ, ಕೋರಿ ಮಂಜಣ್ಣ, ನೇರಳಾಪುರ ಕುಮಾರ್, ಪಂಚಾಕ್ಷರಯ್ಯ, ಎಂ.ಬಿ. ಕುಮಾರ್, ಎಲ್‌ಐಸಿ ಪಂಡಿತ್, ಮಲ್ಲೇಶ್ ಸೇರಿ ನೂರಾರು ಭಕ್ತರು ಇದ್ದರು.
ಮುಂದುವರಿದ ಪರಂಪರೆ : ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಹಾಗಾಗಿ, ಶ್ರೀಕ್ಷೇತ್ರದಲ್ಲಿ ಜಾತ್ರೆ ಮಾಡಲಾಗುತ್ತಿದೆ. ಸೋಂಕು ಕಡಿಮೆಯಾಗಿದ್ದರೂ ಜಾತ್ರೆಗೆ ಮತ್ತು ಶ್ರೀಮಠಕ್ಕೆ ಬರುವ ಭಕ್ತಾದಿಗಳಿಗೆ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದು ಸಿದ್ದಲಿಂಗಶ್ರೀಗಳು ಹೇಳಿದರು.
ಶ್ರೀಕ್ಷೇತ್ರದ ಆರಾಧ್ಯ ದೈವ ಶ್ರೀಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಪರಮಪೂಜ್ಯರು ನಡೆಸಿಕೊಂಡು ಬಂದಿರುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದ್ದು, ನಗರದ ಮಂಡಿಪೇಟೆ, ಅಶೋಕ ರಸ್ತೆ ಸೇರಿ ವಿವಿಧೆಡೆ ಭಿಕ್ಷಾಟನೆ ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಒಂದೆರಡು ವರ್ಷಗಳಿಂದ ಕರೊನಾ ಮತ್ತಿತರ ಕಾರಣದಿಂದ ಜನ, ವ್ಯಾಪಾರಿಗಳು ತತ್ತರಿಸಿದ್ದರೂ ಜಾತ್ರೆಗೆ ತಮ್ಮ ಕೈಲಾದ ನೆರವು ನೀಡುತ್ತಿರುವುದು ಶ್ರೀಮಠದ ಮೇಲಿನ ಅನನ್ಯ ಭಕ್ತಿಯನ್ನು ತೋರುತ್ತದೆ. ಮುಂದಿನ ದಿನದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ ಎಲ್ಲರಿಗೂ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಶ್ರೀಸಿದ್ದಲಿಂಗಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷ