ವೈಶ್ವಿಕ ಪ್ರಜ್ಞೆಯ ಶ್ರೀ ತ್ಯಾಗರಾಜರು

4-678a9a2ebf69f
Published on
ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರೀ

ಸಂಗೀತ ತ್ರಿಮೂರ್ತಿಗಳಲ್ಲಿ ಅತಿ ಜನಪ್ರಿಯ ರಾದ ಸದ್ಗುರು ತ್ಯಾಗರಾಜರಿಲ್ಲದ ಕರ್ನಾಟಕ ಸಂಗೀತವನ್ನು ಭಾವಿಸಲೂ ಆಗದು! ಹಿಂದು, ಇಂದು, ಮುಂದುಗಳಿಗೆ ಅವರ ಕೃತಿಗಳು, ಶಿಷ್ಯ ಪರಂಪರೆ ಸುವರ್ಣ ಸೇತು.

ಇಂದಿಗೆ 178 ವರ್ಷಗಳ ಹಿಂದೆಯಷ್ಟೇ ಭೌತಿಕ ಶರೀರವನ್ನು ತ್ಯಜಿಸಿದ ಅವರು ಹುಟ್ಟಿದ್ದು 1767 ರಲ್ಲಿ. ತಂದೆ ತಾಯಿಗಳು ಇಟ್ಟ ನಾಮ ತ್ಯಾಗಬ್ರಹ್ಮ. ತ್ಯಾಗರಾಜಯ್ಯನೆಂದು ಅವರೇ ತಂಜಾವೂರು ಕಲೆಕ್ಟರ್ ಆಫೀಸಿನಲ್ಲಿ ಅಣ್ಣ ತಮ್ಮಂದಿರ ಆಸ್ತಿ ವಿಭಾಗದ ಸಂದರ್ಭದಲ್ಲಿ ಸಹಿ ಮಾಡಿದ್ದಾರೆ. ಲೋಕ ಅವರನ್ನು ಗುರುತಿಸುವುದು ತ್ಯಾಗರಾಜರೆಂದು. ಸಾತ್ತಿ್ವಕ ಜೀವನ; ರಾಮಭಕ್ತಿಯ ಕೀರ್ತನ ರತ್ನಗಳು; 96 ಕೋಟಿ ರಾಮನಾಮ ಜಪ; ಅಂತ್ಯದಲ್ಲಿ ಸನ್ಯಾಸ ಸ್ವೀಕಾರ; ಹೀಗೆ ಭಿನ್ನವಾದ ಜೀವನ ನಡೆಸಿ ಅವರು ಅಮರರಾದರು.

ಪಿತಾಮಹ ಗಿರಿರಾಜ ಕವಿ ತಂಜಾವೂರು ದೊರೆಗಳ ಆಸ್ಥಾನ ದಲ್ಲಿ ಪದ ರಚನಕಾರರು; ಮಾತಾಮಹ ಕಾಳಹಸ್ತಯ್ಯ ವೀಣಾ ವಾದಕರು. ಒಬ್ಬ ತಾತನಿಂದ ವೀಣೆ, ಇನ್ನೊಬ್ಬರಿಂದ ತೆಲುಗು- ಸಂಸ್ಕೃತ ಸಾಹಿತ್ಯ ಕಲಿತು, ತಾಯಿ ಹಾಡುತ್ತಿದ್ದ ಪುರಂದರ ದಾಸರ, ಭದ್ರಾಚಲ ರಾಮದಾಸರ ರಚನೆಗಳನ್ನು ಕಲಿತ ತ್ಯಾಗರಾಜರು ತಂಜಾವೂರು ಆಸ್ಥಾನ ವಿದ್ವಾನ್ ಸೊಂಟಿ ವೆಂಕಟರಮಣಯ್ಯ ಅವರಲ್ಲಿ ಸಂಗೀತ ಕಲಿತದ್ದು ಒಂದು ವರ್ಷ ಮಾತ್ರ! ಎಂಟನೇ ವಯಸ್ಸಿನಲ್ಲೇ ತಮ್ಮ ಆರಾಧ್ಯ ದೈವ ಶ್ರೀರಾಮನ ಮೇಲೆ ಸಂಸ್ಕೃತ ದಲ್ಲಿ ‘ನಮೋ ನಮೋ ರಾಘವಾಯ’ ಎಂಬ ಕೃತಿ ರಚಿಸಿದರು.

ಮೊದಲ ಮದುವೆಯಲ್ಲಿ ಹೆಂಡತಿ ಪಾರ್ವತಮ್ಮ ತೀರಿಕೊಂಡ ಮೇಲೆ ಅವರ ತಂಗಿ ಕಮಲಮ್ಮನನ್ನು ಮದುವೆಯಾದರು. ಸೀತಾ ಲಕ್ಷ್ಮಿ ಎಂಬ ಪುತ್ರಿ. ಆಕೆಯನ್ನು ಮದುವೆ ಮಾಡಿಕೊಟ್ಟ ಮೇಲೆ ಆಕೆ ತಂದೆಯ ಮನೆಗೆ ಬಂದಿರುವ ದಾಖಲೆಗಳೇ ಇಲ್ಲ. ಇವರೆಂದೂ ಹೊಲಗದ್ದೆಗಳಿಗೆ ಬಂದು ಕೆಲಸ ಮಾಡಿಸಲಿಲ್ಲ; ಮೂರು ಹೊತ್ತು ರಾಮ - ರಾಮ ಸಂಗೀತ, ಶಿಷ್ಯರು.

ರೋಸಿ ಹೋದ ಅಣ್ಣ ಜಪೇಶಯ್ಯನು ಸ್ವಲ್ಪ ದಿನದ ಮಟ್ಟಿಗೆ ರಾಮ ಪಂಚಾಯತನದ ವಿಗ್ರಹವನ್ನೇ ಕಾವೇರಿ ನದಿ ತೀರದಲ್ಲಿ ಹೂತಿಟ್ಟ! ಇದರಿಂದ ನೊಂದ ತ್ಯಾಗರಾಜರನ್ನು ಶಿಷ್ಯರು ತೀರ್ಥಕ್ಷೇತ್ರ ಪರ್ಯಟನೆ ಮಾಡಿಸಿದರು. ಮುಂದೆ ತಮ್ಮ ವಾಸಸ್ಥಾನವಾದ ತಿರುವಯ್ಯಾರಿಗೆ ಹಿಂತಿರುಗಿದ ಮೇಲೆ ಅಣ್ಣ ಹೂತಿಟ್ಟ ವಿಗ್ರಹಗಳು ದೊರೆತು ಪರಮಾನಂದವಾಯಿತು.ಅವರ ಕೀರ್ತಿ ಉತ್ತರ ಭಾರತವೂ ಸೇರಿದಂತೆ ಎಲ್ಲಾ ಕಡೆ ಹಬ್ಬಿತು.ತಂಜಾವೂರು ರಾಜ ಶರಭೋಜಿ ಅನೇಕ ಆಭರಣಗಳನ್ನು ಕೊಟ್ಟು ಆಸ್ಥಾನಕ್ಕೆ ಕರೆದರೂ ನಿಧಿಗಿಂತ ರಾಮನ ಸನ್ನಿಧಿಯೇ ಮೇಲೆಂದರು.

ತಮ್ಮಂತೆಯೇ ವಾಗ್ಗೇಯಕಾರರಾಗಿದ್ದ ಸ್ವಾತಿ ತಿರುನಾಳರು ತಿರುವಾಂಕೂರಿಗೆ ಕರೆದರೂ, ಮೇಲಿನ ಲೋಕದಲ್ಲಿ ಅವರನ್ನು ಭೇಟಿಯಾಗುವುದಾಗಿ ಭವಿಷ್ಯವಾಣಿಯನ್ನು ಹೇಳಿದರು. ಸ್ವಾತಿ ತಿರುನಾಳರು 1846ರ ಡಿ. 25ರಂದು ತೀರಿಕೊಂಡರೆ ಇನ್ನು12 ದಿನಗಳಿಗೆ ತ್ಯಾಗರಾಜರು ಜ. 6, 1847ರಲ್ಲಿ ತೀರಿಕೊಂಡರು.

ತ್ಯಾಗರಾಜರಿಗೆ ವಾಲಾಜಪೇಟೆ ವೆಂಕಟರಮಣ ಭಾಗವತರು, ವೀಣಾ ಕುಪ್ಪಯ್ಯ, ಉಮೈಯಾಳಪುರಂ ಕೃಷ್ಣ ಭಾಗವತರು, ತಿಲೈಸ್ಥಾನಂ ರಾಮಯ್ಯಂಗಾರರು, ಆಕುಮಡುಗುಲ (ಮಾನಂಬು ಚಾವಡಿ) ವೆಂಕಟ ಸುಬ್ಬಯ್ಯ, ಶ್ಯಾಮಶಾಸ್ತ್ರಿಗಳ ಮಕ್ಕಳಾದ ಸುಬ್ಬರಾಯ ಶಾಸ್ತ್ರಿ, ಪಲ್ಲವಿ ಶೇಷಯ್ಯನವರ ತಂದೆ ನೇಕಾರ ಪಟ್ಟಿ ಸುಬ್ಬಯ್ಯಮೊದಲಾದ ಶಿಷ್ಯರಿದ್ದರು. (ಲೇಖಕನ ಮುತ್ತಾತ ಚಿಂತಲಪಲ್ಲಿ ವೆಂಕಟರಾಯರು ಪಲ್ಲವಿ ಶೇಷಯ್ಯ ಹಾಗೂ ವಾಲಾಜಪೇಟೆಯ ವರ ಶಿಷ್ಯರಾದ ಮೈಸೂರು ಸದಾಶಿವರಾಯರ ನೇರ ಶಿಷ್ಯರು).

ಇಷ್ಟು ಜನ ಶಿಷ್ಯರಿದ್ದರೂ ತೀರಿಕೊಂಡಾಗ ಇದ್ದು ಕರ್ಮಗಳನ್ನು ಮಾಡಿದವರು ತಿಲ್ಲೈಸ್ಥಾನಂರವರು. ಅಲ್ಲಿಯೂ ಒಂದು ಸಮಸ್ಯೆ ಇತ್ತು. ತ್ಯಾಗರಾಜರು ಸನ್ಯಾಸ ತೆಗೆದುಕೊಂಡು 24 ಗಂಟೆಗಳೂ ಆಗಿರಲಿಲ್ಲ. ಹೀಗಾಗಿ ಯತಿಗಳಿಗಾಗಿ ನಡೆಸುವ ಸಮಾಧಿ ಮತ್ತು ಗೃಹಸ್ಥರಿಗೆ ನಡೆಸುವ ಶ್ರಾದ್ಧಗಳೆರಡನ್ನೂ ಮಾಡಬೇಕಾಗಿ ಬಂತು.

ಎಲ್ಲಾ ಶಿಷ್ಯರಲ್ಲೂ ಅವರ ಕೃತಿಗಳು ಚದುರಿ ಹೋಗಿ ಪಾಠಾಂತರ ವ್ಯತ್ಯಾಸವಿತ್ತು. ಇವೆಲ್ಲವನ್ನು ಬಗೆಹರಿಸಿ ಐದು ಘನರಾಗಗಳಲ್ಲಿನ ಕೃತಿಗಳನ್ನು ಪಂಚರತ್ನಗಳೆಂದು ಕರೆದು ವಿದ್ವಜ್ಜನರ ಕೈಯಲ್ಲಿ ಹಾಡಿಸಿದವರು ತಂಜಾವೂರು ಎರೆಯಪ್ಪ ಭಾಗವತರು.

ಅಂದು ಪ್ರಾರಂಭವಾದ ಆರಾಧನೆಗೆ ಭಿನ್ನಮತಗಳಿದ್ದವು. ಅವುಗಳೆಲ್ಲವನ್ನೂ ಪರಿಹರಿಸಿ, ಹೆಣ್ಣು ಮಕ್ಕಳನ್ನು ಹಾಡಿಸಲೇಬಾರ ದೆಂದು ಇದ್ದ ಕಾಲದಲ್ಲಿ, ತನ್ನಲ್ಲಿದ್ದ ಎಲ್ಲಾ ಧನ-ಕನಕಗಳನ್ನು ನೀಡಿ, ತ್ಯಾಗರಾಜರ ಸಮಾಧಿಯ ಜಾಗವನ್ನು ಕೊಂಡು, ಅಲ್ಲಿ ತ್ಯಾಗರಾಜರ ವಿಗ್ರಹ ಸ್ಥಾಪಿಸಿ, ಮೈಸೂರು ರಾಜ್ಯದಿಂದ ಬರುವ ಕನ್ನಡ ಕಲಾವಿದರಿಗೆ ಮೈಸೂರು ಛತ್ರವನ್ನು ಕಟ್ಟಿಸಿ ಆರಾಧನೆಯು ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದವರು ವಿದ್ಯಾ ಸುಂದರಿ ಬೆಂಗಳೂರು ನಾಗರತ್ನಮ್ಮನವರು. ತ್ಯಾಗರಾಜರು ರಾಮಭಕ್ತಿ ಸಾಮ್ರಾಜ್ಯದ ದೊರೆ. ಅವರ ಕೃತಿಗಳಲ್ಲಿ ಪಂಚರತ್ನಗಳಲ್ಲೊಂದಾದ ‘ಎಂದರೋ ಮಹಾನುಭಾವುಲು; ಅಂದರಿಕಿ ವಂದನಮುಲು’ ಎಂಬುದು ಕೀರ್ತನಕಾರನೊಬ್ಬನ ಆಲೋಚನೆ ಮಾತ್ರವಲ್ಲ; ಅದು ವಿಶ್ವ ಕವಿಯೊಬ್ಬನಿಗಿರುವ ವೈಶ್ವಿಕ ಪ್ರಜ್ಞೆ.

(ಲೇಖಕರು, ತ್ಯಾಗರಾಜ ನೇರ ಶಿಷ್ಯ ಪರಂಪರೆಯ ಗಾಯಕರು, ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಉಪಕುಲಸಚಿವರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net