ಕಾಯಕ, ದಾಸೋಹ, ಶಿವಯೋಗ ಪೂಜ್ಯರ ಉಸಿರೇ ಆಗಿತ್ತು: ಇಂದು ಶಿವಕುಮಾರ ಸ್ವಾಮೀಜಿ ಪ್ರಥಮ ಪುಣ್ಯ ಸ್ಮರಣೆ

Siddaganga Shree
Published on

ಪರಮಪೂಜ್ಯರೇ ಒಂದು ಪವಾಡ. ಅವರ ಬದುಕು, ಸಾಧನೆ, ಜೀವನವೇ ಒಂದು ಪವಾಡಸದೃಶ. ನನ್ನ ನಂತರ ತುಂಬ ದೊಡ್ಡ ಶೂನ್ಯ ಆವರಿಸಲಿದೆ ಎಂಬ ಮಾತುಗಳನ್ನು ಅವರೇ ಹೇಳುತ್ತಿದ್ದರು. ಅವರು ಇಲ್ಲದೆ ಇರುವುದೇ ಶೂನ್ಯ. ಆ ಶೂನ್ಯ ತುಂಬುವುದು ಕಷ್ಟ. ಶೂನ್ಯದಲ್ಲೇ ಆಶಾವಾದದಿಂದ ಬದುಕಬೇಕಿದೆ. ಅವರು ತೋರಿದ ಮಾರ್ಗದಲ್ಲಿ ನಡೆಯುವ ಮೂಲಕ ಭರ್ತಿ ಮಾಡಿಕೊಳ್ಳಬೇಕಿದೆ. ಕಳೆದೊಂದು ವರ್ಷದಿಂದ ಅವರಿಲ್ಲ ಅನ್ನುವ ನೋವು ಇದ್ದರೂ ಆ ಒಂದು ಸ್ಮರಣೆ ಯಾವತ್ತೂ ಶಾಶ್ವತವಾಗಿ ಉಳಿದಿದೆ. ಅವರು ಕೊಟ್ಟಿರುವ ಆದರ್ಶಗಳು, ತೋರಿರುವ ಮಾರ್ಗದಲ್ಲಿ ನಡೆಯುವ ಮೂಲಕ ಪರಮಪೂಜ್ಯರಿಗೆ ಭಕ್ತಿಶ್ರದ್ಧೆಗಳನ್ನು ನಾವೆಲ್ಲ ಸಮರ್ಪಿಸಬೇಕಿದೆ.

ಶ್ರೀ ಸಿದ್ದಲಿಂಗಸ್ವಾಮೀಜಿ ಮಠಾಧ್ಯಕ್ಷರು, ಸಿದ್ದಗಂಗಾ ಮಠ ಕಾಯಕ, ದಾಸೋಹ, ಶಿವಯೋಗ ಪರಮಪೂಜ್ಯ ಶಿವಕುಮಾರ ಶ್ರೀಗಳ ಉಸಿರೇ ಆಗಿತ್ತು. ಈ ಮೂರನ್ನು ಬದುಕಿನಲ್ಲಿ ನಿರಂತರ ಆಚರಿಸಿಕೊಂಡು ಬಂದ ಶ್ರೀಗಳು ಕಾಯಕ, ದಾಸೋಹಕ್ಕೆ ಮಹತ್ವ ಕೊಟ್ಟಂತಹವರು. ಶರಣರ ಕಾಯಕ ತತ್ವ ಎಲ್ಲ ಸಮಸ್ಯೆಗಳಿಗೆ ಸಂಜೀವಿನಿ ಶಕ್ತಿಯಾಗಿದೆ. ಬಸವಾದಿ ಶರಣರ ಚಿಂತನೆ, ವಿಚಾರಧಾರೆಗಳ ಮಹಾ ಪ್ರಯೋಗಶಾಲೆಯಾಗಿ ಶ್ರೀ ಸಿದ್ಧಗಂಗಾ ಕ್ಷೇತ್ರವನ್ನು ರೂಪಿಸಿದ ಶ್ರೀಗಳು, 88-89 ವರ್ಷಗಳ ಕಾಲ ಶ್ರೀಮಠದ ಪೀಠಾಧಿಕಾರಿಯಾಗಿ ದಣಿವರಿಯದ ಸೇವೆ ಸಲ್ಲಿಸಿದ್ದು ಇತಿಹಾಸ. ಶ್ರೀಮಠದ ಏಳಿಗೆಗೆ ತಮ್ಮನ್ನೇ ಅರ್ಪಿಸಿಕೊಂಡವರು ಪರಮಪೂಜ್ಯರು.

ಜೋಳಿಗೆ ಹಿಡಿದು ಭಿಕ್ಷಾಟನೆ: ಪೂಜ್ಯರು ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿ ಮಠವನ್ನು ಕಟ್ಟಿ ಬೆಳೆಸಿದ್ದಾರೆ. ಉದ್ಧಾನಶಿವಯೋಗಿಗಳು ಲಿಂಗೈಕ್ಯರಾದ ಬಳಿಕ ಶ್ರೀಗಳು ಶ್ರೀಮಠದ ಉತ್ತರಾಧಿಕಾರ ವಹಿಸಿಕೊಂಡಾಗ 30-40 ಮಕ್ಕಳಿದ್ದರು. ಮಠಕ್ಕೆ ನಿಶ್ಚಿತ ಆದಾಯ ಇರಲಿಲ್ಲ. ಭೂಮಿ ಇರಲಿಲ್ಲ. 15-16 ಎಕರೆ ಖುಷ್ಕಿ ಭೂಮಿ ಮಠದ ಒಡೆತನದಲ್ಲಿತ್ತು. ದಾಸೋಹಕ್ಕೆ ಸಾಲಸೋಲ ಮಾಡಿ ಪಡಿ ಪದಾರ್ಥಗಳನ್ನು ತಂದಿದ್ದ ನಿದರ್ಶನಗಳಿವೆ. ಇಂತಹ ಕಠಿಣ ಸಂದರ್ಭದಲ್ಲಿ ಮಠದ ಜವಾಬ್ದಾರಿ ಹೊತ್ತ್ತುಕೊಂಡ ಪೂಜ್ಯರು ಕಾಲ್ನಡಿಗೆಯಲ್ಲಿ ಹಳ್ಳಿಗಳನ್ನು ಸುತ್ತಿ ರೈತಾಪಿ ಬಂಧುಗಳು ನೀಡಿದ ದಾನದಿಂದಲೇ ನಿರ್ವಹಣೆ ಜತೆಗೆ ಮಠವನ್ನು ಸ್ವಾವಲಂಬಿಯಾಗಿ ರೂಪಿಸಿದ್ದಾರೆ. ಹತ್ತು ಸಾವಿರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವವರೆಗೆ ಎಂದೂ ಶ್ರೀಗಳು ವಿರಮಿಸಿರಲಿಲ್ಲ.

ಮಠಕ್ಕೆ ಎಲ್ಲವೂ ಭಕ್ತರೇ. ಅವರೇ ಬೆನ್ನೆಲುಬು. ಮಠವನ್ನು ಕಟ್ಟಿರುವುದೇ ಭಕ್ತಾದಿಗಳು ನೀಡಿದ ದಾನದಿಂದ. ಶ್ರೀಮಠದ ನಿರಂತರ ಅನ್ನ ದಾಸೋಹಕ್ಕೆ ಗ್ರಾಮೀಣ ಭಾಗದ ಜನರು ಬರಗಾಲದಲ್ಲೂ ದವಸಧಾನ್ಯ ಕೊಡುವ ಪವಿತ್ರ ಭಾವನೆಯಿದೆ. ಇದೇ ಮಠದ ಭದ್ರಬುನಾದಿ. ಅದು ನಮ್ಮ ಮಠದ ಪರಂಪರೆ ಕೂಡ. ರೈತಾಪಿ ಬಂಧುಗಳೇ ಮಠದ ದೊಡ್ಡ ಶಕ್ತಿ.

ಶಿಕ್ಷಣ ಯಜ್ಞ: ಹಳ್ಳಿಗಾಡಿನ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರ ಬದುಕು ಹಸನಗೊಳಿಸುವ ಶ್ರೀಗಳ ಚಿಂತನೆ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಹುಟ್ಟಲು ಕಾರಣವಾಯಿತು. ಹಳ್ಳಿಗಾಡಿನ ಹೆಣ್ಣುಮಕ್ಕಳು ಸಹ ಶಿಕ್ಷಣ ಪಡೆಯಲು ಇದರಿಂದ ಸಾಧ್ಯವಾಯಿತು. ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿತು. ಈಗಲೂ ಶ್ರೀಗಳ ಶಿಕ್ಷಣ ಯಜ್ಞದ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳುತ್ತಾರೆ.

ಆಚಾರ ಶ್ರದ್ಧೆ ಅಚ್ಚರಿ: ಪರಮಪೂಜ್ಯರು ಲೋಕಕಲ್ಯಾಣ ಕಾರ್ಯ, ಆತ್ಮಶಕ್ತಿಯ ಶಿವಯೋಗವನ್ನು ಒಟ್ಟೊಟ್ಟಿಗೆ ಸಾಧಿಸಿಕೊಂಡು ಬಂದವರು. ಯಾವತ್ತೂ ಆಚಾರ ಸಂಪನ್ನರಾಗಿದ್ದರು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಆಚಾರವನ್ನು ಬಿಟ್ಟುಕೊಟ್ಟವರಲ್ಲ. ಪೂಜ್ಯರ ಆಚಾರ ಶ್ರದ್ಧೆ ಇಂದಿಗೂ ಅಚ್ಚರಿ ತರುವಂಥದ್ದು. ಶಿವಲಿಂಗ ಪೂಜೆಯನ್ನು ಪರಮಪೂಜ್ಯರು ವ್ರತದಂತೆ ಆಚರಣೆ ಮಾಡಿಕೊಂಡು ಬಂದಿದ್ದರು. ಪ್ರತಿದಿನ ಮುಂಜಾನೆ 3.30ಕ್ಕೆ ಎದ್ದು ಅಭ್ಯಾಸ ಸೇರಿ ಎಲ್ಲ ಕಾರ್ಯವನ್ನು ಮುಗಿಸಿ 3 ಗಂಟೆಗಳ ಕಾಲ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು. ಈ ತೆರನಾದ ಪವಿತ್ರ ಜೀವನ ಒಂದೆರೆಡು ವರ್ಷಗಳಲ್ಲ, 89 ವರ್ಷಗಳು ನಿತ್ಯ ನಿರಂತರವಾಗಿ ನಡೆಸಿಕೊಂಡು ಬಂದಿದ್ದರು ಪೂಜ್ಯರು. ಸಮಯ ಪಾಲನೆಗೂ ಒತ್ತುಕೊಡುತ್ತಿದ್ದ ಶ್ರೀಗಳು, ಎಲ್ಲರಿಗೂ ಆದರ್ಶಪ್ರಾಯರೆನಿಸಿದ್ದರು.

ಪ್ರಸಾದ ನಿಷ್ಠೆ: ಪರಮಪೂಜ್ಯರ ಪ್ರಸಾದ ನಿಷ್ಠೆ ಎಷ್ಟಿತ್ತೆಂದರೆ, ಅವರು ಪ್ರತಿನಿತ್ಯ ಒಂದೇ ರೀತಿಯ ಆಹಾರ ಸೇವಿಸುತ್ತಿದ್ದರು. ಹಿತಮಿತ, ಸಾತ್ವಿಕ ಪ್ರಸಾದದ ಜತೆಗೆ ಬೇವಿನ ಕಷಾಯ ಸೇವಿಸುತ್ತಿದ್ದುದು ಆರೋಗ್ಯಕ್ಕೆ ಪುಷ್ಟಿದಾಯಕವಾಗಿದ್ದಲ್ಲದೆ, ಪೂಜ್ಯರು ಅಖಂಡಬ್ರಹ್ಮಚರ್ಯು ಕಾಪಾಡಿಕೊಂಡು ಬರಲು ಕೂಡ ಸಾಧ್ಯವಾಗಿತ್ತು. ‘ಗಣತಿಂತಿಯೊಳಗೆನ್ನ ಇರಿಸು’ ಎನ್ನುವ ಬಸವಣ್ಣನವರ ವಚನದಂತೆ ಪೂಜ್ಯರು ಜನರ ಮಧ್ಯದಲ್ಲೇ ಇರಲು ಬಯಸಿದ್ದರು. ಬಡವಬಲ್ಲಿದನೆಂಬ ಭೇದವನ್ನು ಎಂದೂ ಎಣಿಸಲಿಲ್ಲ. ಯಾರೂ ಬೇಕಾದರೂ ಕಾಣುವ ಅವಕಾಶವನ್ನು ಶ್ರೀಗಳು ಕಲ್ಪಿಸಿದ್ದರು. ಶ್ರೀಗಳ ಸರಳ ಬದುಕೇ ಒಂದು ಸಂದೇಶದಂತಿತ್ತು.

ಇಲ್ಲಿ ಇಲ್ಲ ಪವಾಡದದ್ಭುತ ಅಥವಾ ಉತ್ಸವದಬ್ಬರ

ಮುಡಿಯನೆತ್ತಿದೆ ಸರಳ ಸಾಧಾರಣದ ಬದುಕಿನ ಗೋಪುರ

ಅದರ ಮೇಲಿದೆ ತ್ಯಾಗ ಧ್ವಜ ಕೈಬೀಸಿ ಕರೆವುದು ಪಥಿಕರ

ಪರಮ ನಿರಪೇಕ್ಷೆಯಲಿ ದಿನವೂ ಸೇವೆಗಾಗಿದೆ ಸರ್ವರ!!

ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ ಲಕ್ಷ ಜನಗಳ ಪೊರೆದಿದೆ

ತೀರ್ಥವಾಗಿದೆ ಭಕ್ತರಿಗೆ ಜೊತೆಗೇ ಸ್ಪೂರ್ತಿಯಾಗಿದೆ ಬುದ್ಧಿಗೆ

ಬಂದ ಹಣತೆಗೆ ಎಣ್ಣೆ-ಬತ್ತಿಯ ದೀಪ್ತಿದಾನವ ಮಾಡಿದೆ

ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೊರೆಕ್ಕೆಯ ಹಾದಿಗೆ!!

ಸದ್ದುಗದ್ದುಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ

ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ

ಕಾವಿಯುಡುಗೆಯನುಟ್ಟ್ಟು ನಭವೇ ಕಿರಣ ಹಸ್ತವ ಚಾಚಿದೆ

ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ!!

| ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ

ಪುಣ್ಯಸಂಸ್ಮರಣೋತ್ಸವ

ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರಥಮ ಪುಣ್ಯಸ್ಮರಣೆ ಭಾನುವಾರ (ಜ.19) ಬೆಳಗ್ಗೆ 10.30ಕ್ಕೆ ಶ್ರೀಮಠದ ಆವರಣದಲ್ಲಿ ನಡೆಯಲಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಸುತ್ತೂರು ಮಹಾಸಂಸ್ಥಾನದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ನೇತೃತ್ವ ವಹಿಸುವರು. ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರಸ್ವಾಮೀಜಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಉಪಸ್ಥಿತರಿರುವರು. ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ ಮತ್ತಿತರರು ಹಾಜರಿರುವವರು. ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ದಾಸೋಹ ವ್ಯವಸ್ಥೆ ಮಾಡಲಾಗಿದೆ.

ಪರಮಪೂಜ್ಯರ ಬದುಕೇ ತೆರೆದ ಪುಸ್ತಕ

ಮಹಾತ್ಮ ಗಾಂಧೀಜಿ ಅವರು ಹೇಳಿದ ‘Mಢ ಔಜ್ಛಿಛಿ ಜಿಠ Mಢ Mಛಿಠಠಚಜಛಿ’ ಎಂಬಂತೆ ಶ್ರೀಗಳು ಪುಸ್ತಕ ಬರೆದು ತಮ್ಮ ಜೀವನ ಚರಿತ್ರೆ ಹೇಳಲಿಲ್ಲ. ಆದರೆ, ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬದುಕಿದ್ದವರು. ನನ್ನ ಜೀವನವೇ ನನ್ನ ಬದುಕು. ನನ್ನ ಬದುಕೇ ನನ್ನ ಸಂದೇಶ ಅನ್ನುವ ರೀತಿ ತ್ಯಾಗಮಯ, ಸೇವಾಮಯ, ಸಾಧನಾಮಯವಾದ ಬದುಕನ್ನು ಬಾಳಿದಂತವರು ಶಿವಕುಮಾರ ಶ್ರೀಗಳು. ಹೀಗಾಗಿ ಪೂಜ್ಯರ ಬದುಕು ಅಂದರೆ ಅದೊಂದು ತೆರೆದಪುಸ್ತಕ! ದೀರ್ಘಕಾಲ ಬದುಕಿದ್ದೇನೆ. ನನ್ನ ಜೀವನಪೂರ್ತಿ ಹೆಚ್ಚು ಬದುಕಿದ್ದೇನೆ ಅನ್ನುವ ತೃಪ್ತಿ ಪೂಜ್ಯರಿಗಿತ್ತು. ಬದುಕಿನ ತುಂಬ ಶ್ರೀಗಳು ಸೇವೆ ಸಲ್ಲಿಸಿದ್ದರು. ಶ್ರೀಗಳಿಗೆ ಶ್ರೀಗಳೇ ಸಾಟಿ. ಜಗತ್ತಿನ ಪುಣ್ಯವೇ ಮೈವೆತ್ತಿ ಬಂತೆಂದವರು, ಜ್ಞಾನವೆತ್ತೆಂಬರು, ಮುಕ್ತಿಯಂತೆ ಹೋದರು ನಮ್ಮ ಪೂಜ್ಯರು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಶ್ರೀಗಳ ಕುರಿತ ‘ಶ್ರೀ ಸಿದ್ದಗಂಗೆಯ ಶ್ರೀ ಚರಣದಲ್ಲಿ’ ಪದ್ಯ ಪರಮಪೂಜ್ಯರ ಇಡೀ ಜೀವನ ಚರಿತ್ರೆಯನ್ನೇ ಸೂತ್ರ ಪ್ರಾಯವಾಗಿ ತಿಳಿಸುವಂತಿದೆ.

ಕಟ್ಟಡದ ಎಲ್ಲ ಕಲ್ಲುಗಳು ಹಸ್ತಸ್ಪರ್ಶ

ಕಾಯಕವೇ ಕೈಲಾಸ ಎನ್ನುವಂತೆ ಪ್ರತಿಯೊಂದು ಕೆಲಸವನ್ನೂ ಅವರು ಪವಿತ್ರವೆಂದೇ ಭಾವಿಸಿದ್ದರು. ಸೌದೆ ಒಡೆದಿದ್ದಾರೆ, ದನಕರುಗಳ ಮೈತೊಳೆದಿದ್ದಾರೆ, ನೇಗಿಲು ಹಿಡಿದು ಹೊಲ ಉಳುಮೆ ಮಾಡಿದ್ದಾರೆ. ಗದ್ದೆಗೆ ನೀರು ಹಾಯಿಸಿದ್ದಾರೆ. ಹೊಲದಲ್ಲಿ ಕಟಾವು, ಪ್ರಸಾದ ನಿಲಯದಲ್ಲಿ ತಾವೇ ನಿಂತು ಅಡುಗೆ ಮಾಡಿದ್ದಾರೆ. ಶ್ರೀಮಠದ ಕಸವನ್ನೂ ಗುಡಿಸಿದ್ದಾರೆ. ಮಠದ ಪ್ರತಿಯೊಂದು ಕಲ್ಲಿನಲ್ಲೂ ಶ್ರೀಗಳ ಹಸ್ತಸ್ಪರ್ಶ ಇದೆ ಎಂಬುದು ಅತಿಶಯೋಕ್ತಿಯಲ್ಲ. ಶ್ರೀಗಳು ಕಾಯಕಯೋಗಿ ಅನ್ನುವುದಕ್ಕೆ ಅನ್ವರ್ಥ ಅನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net