

ಹುಣಸೂರು: ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಐತಿಹಾಸಿಕ ಮಹತ್ವವುಳ್ಳ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರ 188ನೇ ವರ್ಷದ ದಿವ್ಯ ರಥಾರೋಹಣೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗುರುವಾರ ಬೆಳಗ್ಗೆ ಅರ್ಚಕ ಗುರುರಾಜ್ ಮತ್ತವರ ತಂಡದವರಿಂದ ದೇವರಿಗೆ ವಿವಿಧ ವಿಶೇಷ ಪೂಜೆ ಹೋಮ ಹವನಾದಿಗಳನ್ನು ನೆರವೇರಿಸಲಾಯಿತು. ಬೆಳಗ್ಗೆ 9.30ಕ್ಕೆ ದೇವರ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕೃತಗೊಂಡ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಉತ್ಸವ ಮೂರ್ತಿಗೆ ರಥದಲ್ಲಿ ಪೂಜೆ ನೆರವೇರಿಸಿದ ನಂತರ ನೆರದಿದ್ದ ಭಕ್ತರು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಜಯಕಾರ ಮೊಳಗಿಸುತ್ತಾ ಪುರುಷ, ಮಹಿಳೆಯರು ರಥದ ಹಗ್ಗವನ್ನು ಎಳೆಯುವ ಮೂಲಕ ರಥಾರೋಹಣೋತ್ಸವಕ್ಕೆ ಚಾಲನೆ ನೀಡಿದರು.
ಬ್ರಾಹ್ಮಣರ ಬೀದಿಯಿಂದ ರಥೋತ್ಸವ ಎಚ್.ಡಿ. ಕೋಟೆ ವೃತ್ತದ ಮೂಲಕ ಗಣೇಶನಗುಡಿ ಬೀದಿಯನ್ನು ಹಾದು ವಿಶ್ವೇಶ್ವರಯ್ಯ ವೃತ್ತವನ್ನು ತಲುಪಿ ಅಲ್ಲಿಂದ ಜೆ.ಎಲ್.ಬಿ.ರಸ್ತೆಯ ಮೂಲಕ ದೇವಾಲಯದ ಆವರಣವನ್ನು ತಲುಪಿತು. ದಾರಿಯುದ್ದಕ್ಕೂ ಭಕ್ತರು ರಥದ ಹಗ್ಗ ಎಳೆದ ಕೃತಾರ್ಥಭಾವ ಅನುಭವಿಸಿದರು. ಪ್ರತಿ ಮನೆ ಮನೆಯಿಂದಲೂ ದೇವರಿಗೆ ಹೂ ಹಣ್ಣು, ಕಾಯಿ ಒಡೆದು ಪೂಜೆ ಸಲ್ಲಿಸಿ ಭಕ್ತಿ ಭಾವ ತೋರಿದರು. ರಥೋತ್ಸವದಲ್ಲಿ ಅಲಂಕೃತ ಜೋಡೆತ್ತುಗಳು, ತಮಟೆ ವಾದನ, ಡೊಳ್ಳುಕುಣಿತ ಸೇರಿದಂತೆ ಮಂಗಳವಾದ್ಯದ ತಂಡ ಪಾಲ್ಗೊಂಡಿದ್ದವು. ಮಧ್ಯಾಹ್ನ 2 ಗಂಟೆಗೆ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು.