ಚಿತ್ರರಂಗಕ್ಕೆ ಶ್ರಾವಣ ಶುಕ್ರದೆಸೆ: ಕನ್ನಡದ ಖ್ಯಾತನಟರ ಸಿನಿಮಾಗಳು ಬಿಡುಗಡೆಗೆ ಸಿದ್ಧ

shravana 1
Published on

ಬೆಂಗಳೂರು: ಒಂದೆರೆಡು ಸಿನಿಮಾ ಹೊರತುಪಡಿಸಿದರೆ ಕಳೆದ ಹಲವು ತಿಂಗಳಿನಿಂದ ಯಾವುದೇ ಖ್ಯಾತನಾಮ ನಟರ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಇದರಿಂದ ಥಿಯೇಟರ್ ಚಟುವಟಿಕೆಗಳು ಡಲ್ ಆಗಿ, ಮೌನ ಆವರಿಸಿದ್ದಂತಿತ್ತು. ಕೆಲವೊಂದು ಸಿನಿಮಾಗಳು ಬಿಡುಗಡೆಗೊಂಡರೂ ಸದ್ದು ಮಾಡುತ್ತಿರಲಿಲ್ಲ. ಹೀಗಾಗಿ ಉತ್ಸಾಹ ಇಲ್ಲದಂತಾಗಿತ್ತು. ಇದಕ್ಕೆ ಈ ಶ್ರಾವಣದಿಂದಲೇ ುಲ್‌ಸ್ಟಾಪ್ ಸಿಗುವ ಮುನ್ಸೂಚನೆ ದೊರೆದಂತಿದೆ. ಮುಂದಿನ ಮೂರು ತಿಂಗಳಲ್ಲಿ ಪ್ರತಿ ತಿಂಗಳಲ್ಲಿ ಖ್ಯಾತನಟರ ಬಹುವೆಚ್ಚದ, ನಿರೀಕ್ಷೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಇದರಿಂದ ಚಿತ್ರರಂಗಕ್ಕೆ ಹೊಸಕಳೆ ಬರಲಿದೆ. ಥಿಯೇಟರ್‌ಗಳು ತುಂಬುವ ಲಕ್ಷಣ ಗೋಚರಿಸುತ್ತಿವೆ. ಮತ್ತಷ್ಟು ಸಿನಿ ಹಬ್ಬ ಜೋರಾಗಲಿದ್ದು, ಶ್ರಾವಣದಿಂದಲೇ ಶುಕ್ರದೆಸೆ ಆರಂಭವಾಗಲಿದೆ. ಹೀಗಾಗಿ, ಈ ಸಲದ ಶ್ರಾವಣ ಕನ್ನಡ ಚಿತ್ರೋದ್ಯಮಕ್ಕೂ ಅಶಾಭಾವ ಮೂಡಿಸಿದಂತಿದೆ.

ಈ ತಿಂಗಳಲ್ಲಿ ‘ಭೀಮ’, ಕೃಷ್ಣಂ ಪ್ರಣಯ ಸಖಿ: ಶ್ರಾವಣದ ಮೊದಲ ವಾರವೇ ಚಿತ್ರರಂಗಕ್ಕೆ ಶುಭ ಗಳಿಗೆ ಬರುವಂತಿದೆ. ಈ ವಾರ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರ ಬಿಡುಗಡೆಯಾಗಲಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಅಲ್ಲದೇ, ಚಿತ್ರತಂಡ ಹೇಳಿಕೊಂಡಂತೆ, ಮುಚ್ಚಿದ್ದ 20 ಚಿತ್ರಮಂದಿರಗಳು ಮತ್ತೆ ಪುನಾರಂಭಗೊಳ್ಳಲಿವೆಯಂತೆ. ಇದು ಭರವಸೆ ಮೂಡಿಸಿದೆ. ಮೊದಲ ವಾರ ಬಳಿಕ ಆಗಸ್ಟ್ 15ರಂದು ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಹಾಗೂ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯದ ‘ಗೌರಿ’ ಸಿನಿಮಾ ಬಿಡುಗಡೆಯಾಗಲಿದೆ. ಈ ತಿಂಗಳ ಈ ಮೂರು ಸಿನಿಮಾಗಳು ನಿರೀಕ್ಷೆ ಹೆಚ್ಚಿಸಿದ್ದು, ಥಿಯೇಟರ್ ತುಂಬಿಸುವ ಲಕ್ಷಣ ಕಾಣುತ್ತಿದೆ. ಈ ಮೂಲಕ ಶ್ರಾವಣದಿಂದಲೇ ಚಿತ್ರೋದ್ಯಮ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ಲಕ್ಷಣ ಕಾಣುತ್ತಿದೆ

ಮುಂದಿನ ತಿಂಗಳಿನಿಂದ ಮತ್ತಷ್ಟು ಚುರುಕು: ಆಗಸ್ಟ್‌ನಲ್ಲಿ ಚುರುಕುಗೊಂಡಿದ್ದ ಸಿನಿ ಚಟುವಟಿಕೆಗಳು ಸೆಪ್ಟೆಂಬರ್ ಹಾಗೂ ಆಕ್ಟೋಬರ್‌ಗೆ ಮುಂದುವರಿಯಲಿವೆ. ಈ ಎರಡು ತಿಂಗಳು ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲಿವೆ. ಸೆಪ್ಟೆಂಬರ್‌ನಲ್ಲಿ ಶಿವರಾಜಕುಮಾರ್ ನಟನೆಯ ‘ಬೈರತಿ ರಣಗಲ್’ ಬಿಡುಗಡೆಯಾಗಲಿದೆ. ಇದು ಮುಂದಿನ ತಿಂಗಳ ಬರವನ್ನು ನೀಗಿಸಲಿದೆ. ಅಕ್ಟೋಬರ್‌ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ಧತೆ ನಡೆಸಿವೆ. ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಆಕ್ಟೋಬರ್ 11ರಂದು ಬಿಡುಗಡೆಯಾಗಲಿದೆ. ಬಳಿಕ ಸುದೀಪ್ ನಟನೆಯ ‘ಮ್ಯಾಕ್ಸ್’, ಉಪೇಂದ್ರರ ‘ಯುಐ’ ಬಿಡುಗಡೆಯಾಗಲಿವೆ. ಈ ಮೂಲಕ ಒಂದರ ಹಿಂದೆ ಒಂದು ಚಿತ್ರಗಳು ಬಿಡುಗಡೆಯಾಗುವ ಮೂಲಕ ಥಿಯೇಟರ್ ಸೇರಿ ಚಿತ್ರೋದ್ಯಮದ ಚಟುವಟಿಕೆಗಳಿಗೆ ವೇಗ ಸಿಗಲಿದೆ ಎಂದರೆ ತಪ್ಪಾಗಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net