ಮಾಸ್ಕ್ ಧರಿಸಿ ಮುಖ ಮುಚ್ಚಿಕೊಳ್ಳುವ ಹೆಣ್ಣು ನಾನಲ್ಲ! ಆತನಿಗೆ ನಾಚಿಕೆಯಾಗಬೇಕು: ಶ್ರಾಸ್ತಿ | Jani Master

ವಿಜಯವಾಣಿ - 2025-01-26T154903.303
Published on

Jani Master: ಕೆಲವು ತಿಂಗಳುಗಳ ಹಿಂದೆಯಷ್ಟೇ ಟಾಲಿವುಡ್​ನ ಹೆಸರಾಂತ ಸ್ಟಾರ್ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ ಮಹಿಳಾ ಕೋರಿಯೋಗ್ರಾಫರ್​ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಅಂದು ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಯುವತಿಯ ದೂರಿನ ಅನ್ವಯ ಜಾನಿಯನ್ನು ಪೊಲೀಸರು ಬಂಧಿಸಿ, ಕೋರ್ಟ್​ ಮುಂದೆ ಹಾಜರುಪಡಿಸಿದ್ದರು. ಈಗ ಶಿಕ್ಷೆ ಅನುಭವಿಸಿ ಹೊರಬಂದಿರುವ ಜಾನಿ ಮಾಸ್ಟರ್​, ನನ್ನ ಮೇಲಿರುವ ಬಂದಿರುವ ಲೈಂಗಿಕ ಕಿರುಕುಳ ಆರೋಪ ಒಂದು ಅಪಾದನೆ ಅಷ್ಟೇ ಎಂದು ಹಲವು ಸಂದರ್ಶನಗಳಲ್ಲಿ ಹೇಳುತ್ತಿದ್ದಾರೆ. ಆದ್ರೆ, ಇಲ್ಲಿಯವರೆಗೂ ಎಲ್ಲಿಯೂ ಕಾಣಿಸಿಕೊಳ್ಳದ ದೂರುದಾರೆ, ಇದೇ ಪ್ರಥಮ ಬಾರಿಗೆ ಸಂದರ್ಶನ ನೀಡುವ ಮೂಲಕ ಜಾನಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಜಾನಿ ಮಾಸ್ಟರ್, ಈಗ ಜಾಮೀನಿನ ಮೇರೆಗೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದಿದ್ದೇ ತಡ ಸಾಲು ಸಾಲು ಸಂದರ್ಶನಗಳಲ್ಲಿ ಹೆಂಡತಿಯೊಂದಿಗೆ ಕಾಣಿಸಿಕೊಳ್ಳುತ್ತಿರುವ ಜಾನಿ, ನಾನು ಯಾವುದೇ ತಪ್ಪು ಮಾಡಿಲ್ಲ. ಈ ವಿಷಯದಲ್ಲಿ ಶೀಘ್ರವೇ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳುತ್ತೇನೆ ಎಂದು ಹೇಳುತ್ತಲೇ ಬಂದಿದ್ದಾರೆ. ಅಚ್ಚರಿ ಮೂಡುವಂತೆ ಈ ಘಟನೆ ನಂತರ ಪ್ರಥಮ ಬಾರಿಗೆ ಕ್ಯಾಮರಾ ಮುಂದೆ ಬಂದಿರುವ ದೂರು ದಾಖಲಿಸಿದ ಮಹಿಳಾ ಕೋರಿಯೋಗ್ರಾಫರ್​, ಮುಖ ಮುಚ್ಚಿಕೊಳ್ಳದೇ ತನ್ನ ಗುರುತನ್ನು ಬಹಿರಂಗಪಡಿಸಿದ್ದಾರೆ.

ಮುಖ ಏಕೆ ಮರೆ ಮಾಡಬೇಕು?

ಜಾನಿ ಮಾಸ್ಟರ್ ವಿರುದ್ಧ ಪ್ರಕರಣ ದಾಖಲಿಸಿದ ಡ್ಯಾನ್ಸ್ ಕೋರಿಯೋಗ್ರಾಫರ್ ಶ್ರಾಸ್ತಿ ವರ್ಮಾ, "ನಾನೇಕೇ ನನ್ನ ಮುಖ ಮಾಸ್ಕ್​​ನಿಂದ ಮರೆಮಾಚಬೇಕು? ದೂರು ಕೊಟ್ಟಿರುವುದೇ ನಾನು. ನಾನ್ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಹೆದರುವ ಮಾತಿಲ್ಲ. ಮಾಸ್ಕ್​ ಧರಿಸದೆಯೇ ನಾನು ಸಂದರ್ಶನ ನೀಡುವುದಾಗಿ ಹೇಳಿ ಮಾತು ಪ್ರಾರಂಭಿಸಿದರು. ತಾನು ಗಟ್ಟಿಗಿತ್ತಿ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವ ಹೆಣ್ಣು ಮಗಳು. ಹತ್ತು ಹುಡುಗಿಯರು ನನ್ನನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅಷ್ಟೇ ಸಾಕು ನನಗೆ" ಎಂದಿದ್ದಾರೆ.

ಬದಲಾಗಲೇ ಇಲ್ಲ

ಜಾನಿ ಮಾಸ್ಟರ್ ಪ್ರಕರಣದ ಬಗ್ಗೆ ಮುಕ್ತವಾಗಿ ಮಾತನಾಡಿದ ಶ್ರಾಸ್ತಿ, "ಸೇಡು ತೀರಿಸಿಕೊಳ್ಳಲು ನಾನು ಪ್ರಕರಣ ದಾಖಲಿಸಿಲ್ಲ. ತಾನು ಸ್ವಾಭಿಮಾನಕ್ಕಾಗಿ ಮಾತ್ರ ದೂರು ದಾಖಲಿಸಿದ್ದೇನೆ. ಹೆಣ್ಣು ಆಟಿಕೆ ಅಲ್ಲ. ನಿಮಗೆ ಆಕೆ ಇಷ್ಟವಿಲ್ಲದಿದ್ದರೆ, ಕನಿಷ್ಠ ಗೌರವಿಸುವುದನ್ನು ಕಲಿಯಿರಿ. ಎಲ್ಲರೂ ನನ್ನನ್ನು ನೀನ್ಯಾಕೆ ನಾಲ್ಕು ವರ್ಷಗಳ ನಂತರ ಲೈಂಗಿ ದೌರ್ಜನ್ಯ ದೂರು ದಾಖಲಿಸಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಆದ್ರೆ, ನಿಜ ಸಂಗತಿ ನನಗೆ ಮಾತ್ರ ಗೊತ್ತಿತ್ತು. ನಾಲ್ಕು ವರ್ಷಗಳ ಹಿಂದೆ ಜಾನಿ ಮಾಸ್ಟರ್ ನನಗೆ ಕಿರುಕುಳ ನೀಡಿದ್ದ. ಆಗ ನಾನಿನ್ನು ಚಿಕ್ಕವಳು. ಅಪ್ರಾಪ್ತೆ ಆಗಿದ್ದೆ. ಚಿತ್ರರಂಗದಲ್ಲಿ ಅಷ್ಟೊಂದು ಪ್ರಭಾವ ಹೊಂದಿರುವ ವ್ಯಕ್ತಿಯ ವಿರುದ್ಧ ಹೋರಾಡುವ ಶಕ್ತಿ ನನಗಿರಲಿಲ್ಲ. ಅಸಲಿಗೆ ಆ ವ್ಯಕ್ತಿ (ಜಾನಿ ಮಾಸ್ಟರ್) ಮುಂದಿನ ದಿನಗಳಲ್ಲಿ ಬದಲಾಗುತ್ತಾನೆ ಎಂದು ನಾನು ಭಾವಿಸಿದ್ದೆ. ಆದರೆ, ಆತ ಮಾತ್ರ ಬದಲಾಗದೆ, ಕಿರುಕುಳ ಮುಂದುವರಿಸಿದ" ಎಂದು ಹೇಳಿದರು.

ನನ್ನಂತೆ ಅನ್ಯಾಯಕ್ಕೊಳಗಾದ...

"ಕಿರುಕುಳ ಮುಂದುವರಿದ ಕಾರಣ ನಾನು ಪೊಲೀಸರಿಗೆ ದೂರು ಸಲ್ಲಿಸಿದೆ. ಪ್ರಕರಣ ದಾಖಲಿಸುವ ಮೊದಲು, ನನ್ನ ಮುಂದೆ ಕೇವಲ ಎರಡು ಆಯ್ಕೆಗಳಿದ್ದವು. ಮೊದಲನೆಯದು, ನಾನು ಮುಂದೆ ಬಂದು ದೂರು ನೀಡಬೇಕೇ? ಎಂದು. ಎರಡನೇಯದು ಆತ್ಮಹತ್ಯೆ ಮಾಡಿಕೊಳ್ಳಬೇಕೇ? ಎಂದು. ಆಗ ನಾನು ಮೊದಲನೆಯ ಆಯ್ಕೆಯನ್ನು ಆರಿಸಿಕೊಂಡೆ. ನಾನು ಜಗಳವಾಡಬಹುದೆಂದು ಭಾವಿಸಿ ಹೊರಗೆ ಬಂದೆ. ನಾನು ಸಮಾಜದ ಬಗ್ಗೆ ಯೋಚಿಸಲಿಲ್ಲ. ನನಗೆ ಸಾಮಾಜಿಕ ಮಾಧ್ಯಮದ ಬಗ್ಗೆ ಕಿಂಚಿತ್ತು ಕಾಳಜಿ ಇರಲಿಲ್ಲ. ಧೈರ್ಯದಿಂದ ಹೊರಬಂದು ದೂರು ನೀಡಿದ್ದೇನೆ. ಅದಕ್ಕಾಗಿಯೇ ನಾನು ಮುಖಕ್ಕೆ ಮಾಸ್ಕ್​ ಧರಿಸದೆ, ಮಾಧ್ಯಮದ ಮುಂದೆ ಬಂದಿದ್ದೇನೆ. ನನ್ನಂತೆ ಅನ್ಯಾಯಕ್ಕೊಳಗಾದ ಎಲ್ಲಾ ಹೆಣ್ಣುಮಕ್ಕಳು ತಮ್ಮ ಕುಟುಂಬದವರು ಏನಾದರೂ ಅಂದುಕೊಳ್ಳುತ್ತಾರೆ ಎಂದು ಚಿಂತಿಸಿ, ಹೇಳದೆ ಕೂರಬೇಡಿ. ಧೈರ್ಯದಿಂದ ಮುಂದೆ ಬಂದು ಮಾತನಾಡಿ" ಎಂದು ಶ್ರಾಸ್ತಿ ಹೇಳಿದ್ದಾರೆ.

ಆ ಯುವಕ ಎಲ್ಲೋದ?

ನಾನು ಜಾನಿ ವಿರುದ್ಧ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಸಮೀರ್ ಎಂಬ ಹುಡುಗ ನನ್ನ ವಿರುದ್ಧ ದೂರು ನೀಡಲು ಪ್ರಯತ್ನಿಸಿದ. ಅಸಲಿಗೆ ಆತ ಆರೋಪಿಯ (ಜಾನಿ ಮಾಸ್ಟರ್) ಸಂಬಂಧಿ. ಅವನು ತನ್ನ ಹೆಂಡತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ನನ್ನ ವಿರುದ್ಧ ದೂರು ನೀಡಲು ಪ್ರಯತ್ನಿಸಿದನು. ಆದರೆ ಪೊಲೀಸರು ಮಾತ್ರ ಆತನ ದೂರನ್ನು ಸ್ವೀಕರಿಸಲಿಲ್ಲ. ನಾನು ಅವನಿಗೆ ಮೋಸ ಮಾಡಿದ್ದೇನೆ. ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಸಮೀರ್ ಹೇಳಿದ್ದ. ಅಂದು, ಮಾಧ್ಯಮಗಳು ಇದನ್ನೆಲ್ಲಾ ಪ್ರಸಾರ ಮಾಡಿದವು. ಇದಲ್ಲದೆ, ಪೊಲೀಸರು ಅದನ್ನು ಸ್ವೀಕರಿಸದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತ ಹೇಳಿದ್ದ. ಅವನು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡ್ನಾ? ಎಲ್ಲಿದ್ದಾನೆ ಆತ? ಮಾಧ್ಯಮಗಳು ಅವನ ಬಗ್ಗೆ ಏಕೆ ವಿಚಾರಿಸುತ್ತಿಲ್ಲ? ಎಂದು ಶಾಸ್ತಿ ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net