Shraddha Kapoor - ಲಾವಣಿ ರಾಣಿ ವಿಠಾಬಾಯಿಯಾದ ಶ್ರದ್ಧಾ

ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್
Published on
Shraddha Kapoor -
ಮಹಾರಾಷ್ಟ್ರದ ಜಾನಪದ ಲೋಕದಲ್ಲಿ ಲಾವಣಿ ಡಾನ್ಸರ್ ಆಗಿ, ಗಾಯಕಿಯಾಗಿ ತಮ್ಮದೇ ಛಾಪು ಮೂಡಿಸಿದ್ದವರು ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್. ಅವರ ಲಾವಣಿ ಡಾನ್ಸ್ ಅದೆಷ್ಟು ಜನಪ್ರಿಯವಾಗಿತ್ತೆಂದರೆ, ಅವರ ಶೋಗಳು ಹೌಸ್‌ಫುಲ್ ಆಗಿ, ಆ ಸಮಯದಲ್ಲಿ ಥಿಯೇಟರ್‌ಗಳು ಖಾಲಿ ಇರುತ್ತಿದ್ದವಂತೆ. ಇಂತಹ ಜಾನಪದ ದಿಗ್ಗಜೆ ಈಠಾರನ್ನು ‘ತಮಾಷಾ ಸಾಮ್ರಾಟಿಣಿ’ ಹಾಗೂ ‘ಲಾವಣಿ ಕ್ವೀನ್’ ಎಂದೂ ಕರೆಯಲಾಗುತ್ತಿತ್ತು. ಅವರ ಕಲಾಸೇವೆಯನ್ನು ಗುರುತಿಸಿ ರಾಷ್ಟ್ರಪತಿ ಮೆಡಲ್ ನೀಡಲಾಗಿದೆ. ಹಲವು ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ಅವರಿಗೆ ಒಲಿದಿವೆ. ಇಷ್ಟೆಲ್ಲ ಸಾಧನೆಗಳನ್ನು ಮಾಡಿದ್ದರೂ ಈಠಾ ಕೊನೆಯ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. 2002ರಲ್ಲಿ ಅನಾರೋಗ್ಯಕ್ಕೀಡಾದ ಅವರು 66ನೇ ವಯಸ್ಸಿನಲ್ಲಿ ವಿಧಿವಶರಾದರು. ನಂತರ ಅವರ ಅಭಿಮಾನಿಗಳು ಹಣ ಸಂಗ್ರಹಿಸಿ ಆಸ್ಪತ್ರೆ ಬಿಲ್ ಪಾವತಿ ಮಾಡಿ, ಈಠಾ ಪಾರ್ಥಿವ ಶರೀರ ಪಡೆದಿದ್ದರು ಎಂಬ ಮಾಹಿತಿ ಇದೆ. 2006ರಿಂದ ಪ್ರತಿ ವರ್ಷ ಮಹಾರಾಷ್ಟ್ರ ಸರ್ಕಾರ ವಿಠಾಬಾಯಿ ಹೆಸರಿನಲ್ಲೇ ಒಂದು ಪ್ರಶಸ್ತಿ ನೀಡುತ್ತಾ ಬಂದಿದೆ. ಇದೀಗ ಇಂತಹ ದಂತಕಥೆಯ ಬಯೋಪಿಕ್‌ನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಟೀಸರ್ ಬಿಡುಗಡೆಯಾಗಿದೆ. ತುಂಬು ಗರ್ಭಿಣಿಯಾಗಿದ್ದರೂ ಲಾವಣಿ ಮಾಡುತ್ತಿದ್ದ ಈಠಾಬಾಯಿಗೆ ಸ್ಟೇಜ್ ಮೇಲೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ತೆರೆಯ ಹಿಂದೆ ಬಂದು, ಮಗುಗೆ ಜನ್ಮ ನೀಡಿ, ಪಕ್ಕದಲ್ಲಿ ಸಿಕ್ಕ ಕಲ್ಲಿನಲ್ಲೇ ಹೊಕ್ಕುಳಬಳ್ಳಿ ಕತ್ತರಿಸಿಕೊಂಡು, ಮಗುವನ್ನು ಅಲ್ಲೇ ಮಲಗಿಸಿ, ಮತ್ತೆ ವೇದಿಕೆಗೆ ಬಂದು ಡಾನ್ಸ್ ಮಾಡಿದ್ದರು ಎಂಬ ಮಾಹಿತಿ ಇದೆ. ವಿಷಯ ಗೊತ್ತಾಗಿ ನೆರೆದಿದ್ದ ಜನರೇ ಡಾನ್ಸ್ ನಿಲ್ಲಿಸಿ, ಅವರನ್ನು ಮಗು ಬಳಿ ಕರೆದೊಯ್ದಿದ್ದರು ಎನ್ನಲಾಗಿದೆ. ಟೀಸರ್‌ನಲ್ಲಿ ಈ ವಿಷಯವನ್ನೇ ಹೈಲೈಟ್ ಮಾಡಲಾಗಿದ್ದು, ‘ಈಠಾ’ ಕುತೂಹಲ ಮೂಡಿಸುವಂತಿದೆ. ‘ಛಾವಾ’ ಖ್ಯಾತಿಯ ಲಕ್ಷ್ಮಣ್ ಉಟೇಕರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಇದೇ ಆ. 28ರಂದು ಸಿನಿಮಾ ತೆರೆಗೆ ಬರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net