ನಯನತಾರ ಬದಲು ಶ್ರದ್ದಾ; ಎಲಿ ನಿರ್ದೇಶಕನ ಹೊಸ ಸಿನಿಮಾದಲ್ಲಿ ನಟನೆ...

ascfsdfsdfsdf
Published on

ಶ್ರದ್ಧಾ ಶ್ರೀನಾಥ್ ಸದ್ಯ ಎಲ್ಲಿದ್ದಾರೆ, ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ?- ಹೀಗೊಂದು ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರವಾಗಿ ಕಾಲಿವುಡ್​ನತ್ತ ಕೈ ಮಾಡಿ ತೋರಿಸಬಹುದು. ಏಕೆಂದರೆ, ಕನ್ನಡಕ್ಕಿಂತ ಪರಭಾಷೆಯ ಸಿನಿಮಾಗಳಲ್ಲಿಯೇ ಅವರು ಹೆಚ್ಚು ನಟಿಸುತ್ತಿದ್ದಾರೆ. ಇದೀಗ ಅವರ ಬತ್ತಳಿಕೆಗೆ ಮತ್ತೊಂದು ತಮಿಳು ಸಿನಿಮಾ ಸೇರಿಕೊಂಡಿದೆ.

ತಮಿಳಿನಲ್ಲಿ ಈಗಾಗಲೇ ‘ತೆನಾಲಿರಾಮನ್’, ‘ಪೊಟ್ಟಾ ಪೊಟ್ಟಿ’ ‘ಎಲಿ’ ಸಿನಿಮಾ ನಿರ್ದೇಶನ ಮಾಡಿರುವ ಯುವರಾಜ್ ದಯಾಳನ್, ಈ ಹೊಸ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ನಟಿಸಬೇಕಿತ್ತು. ಅವರ ಆಯ್ಕೆಯೂ ಆಗಿತ್ತು. ನಯನತಾರಾ, ಶಾರುಖ್ ಖಾನ್ ಜತೆಗಿನ ಸಿನಿಮಾ ಒಪ್ಪಿದ್ದರಿಂದ, ಡೇಟ್ಸ್ ಸಮಸ್ಯೆ ಎದುರಾಗಿ, ಯುವರಾಜ್ ಚಿತ್ರ ಕೈಬಿಟ್ಟು ಮುಂಬೈಗೆ ಹಾರಬೇಕಾಯಿತು. ಹಾಗಾಗಿ, ನಯನತಾರಾ ಮಾಡಬೇಕಿದ್ದ ಪಾತ್ರ ಶ್ರದ್ಧಾ ಶ್ರೀನಾಥ್ ಪಾಲಾಯಿತು. ಶ್ರದ್ಧಾ ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ. ಚಿತ್ರದ ಕಥೆ ಏನು? ಶ್ರದ್ಧಾ ಪಾತ್ರವೇನು? ಅವರ ಜತೆಗೆ ಯಾರೆಲ್ಲಾ ನಟಿಸುತ್ತಿದ್ದಾರೆ? ಎಂಬ ವಿಷಯಗಳನ್ನು ಚಿತ್ರತಂಡದವರು ಇನ್ನೂ ಬಿಟ್ಟುಕೊಟ್ಟಿಲ್ಲ.ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ನೀಡಲಿದೆಯಂತೆ.

ಈ ಸಿನಿಮಾದ ಜತೆಯಲ್ಲಿಯೇ ಮಲಯಾಳಂನಲ್ಲಿ ಮೂಡಿಬರುತ್ತಿರುವ ಮೋಹನ್ ಲಾಲ್ ಅಭಿನಯದ ‘ಆರಟ್ಟು’ ಚಿತ್ರದಲ್ಲಿಯೂ ಶ್ರದ್ಧಾ ನಟಿಸುತ್ತಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ‘ಕಲಿಯುಗಂ’ ಕೆಲಸವೂ ಶುರುವಾಗಿದೆ. ಕನ್ನಡದಲ್ಲಿ ಸದ್ಯ ಯಾವುದೇ ಹೊಸ ಸಿನಿಮಾ ಅವರು ಒಪ್ಪಿಕೊಂಡಿಲ್ಲ. ಸತೀಶ್ ನೀನಾಸಂ ಜತೆಗೆ ಶ್ರದ್ಧಾ ಅಭಿನಯಿಸಿದ್ದ ‘ಗೋದ್ರಾ’ ಬಿಡುಗಡೆ ಆಗಿಲ್ಲ. ‘ರುದ್ರಪ್ರಯಾಗ’ ಚಿತ್ರದ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net