

Donald Trump: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕನ್ ಟೆಕ್ ಕಂಪನಿಗಳ ಮೇಲೆ ಡಿಜಿಟಲ್ ಸೇವಾ ತೆರಿಗೆಗಳು ಮತ್ತು ಸಂಬಂಧಿತ ನಿಯಮಗಳನ್ನು ವಿಧಿಸುವ ಎಲ್ಲಾ ದೇಶಗಳಿಗೆ ಅಮೆರಿಕಾದ ಚಿಪ್ ರಫ್ತಿನ ಮೇಲೆ "ಗಣನೀಯ" ಹೊಸ ಸುಂಕಗಳನ್ನು ವಿಧಿಸುವ ಬೆದರಿಕೆ ಹಾಕಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅವರು, ಡಿಜಿಟಲ್ ತೆರಿಗೆಗಳು, ಡಿಜಿಟಲ್ ಸೇವೆಗಳ ಶಾಸನ, ಮತ್ತು ಡಿಜಿಟಲ್ ಮಾರ್ಕೆಟ್‌ಗಳ ನಿಯಮಗಳು ಎಲ್ಲವೂ ಅಮೆರಿಕಾದ ತಂತ್ರಜ್ಞಾನವನ್ನು ಹಾನಿಗೊಳಿಸಲು ಅಥವಾ ತಾರತಮ್ಯ ಮಾಡಲು ರೂಪಿಸಲಾಗಿವೆ. ಅಮೆರಿಕದ ಅಧ್ಯಕ್ಷನಾಗಿ "ಅದ್ಭುತ ಅಮೆರಿಕನ್ ಟೆಕ್ ಕಂಪನಿಗಳ" ಮೇಲೆ ದಾಳಿ ಮಾಡುವ ದೇಶಗಳಿಗೆ ವಿರುದ್ಧವಾಗಿ ನಿಲ್ಲುತ್ತೇನೆ. ಆಶ್ಚರ್ಯಕರ ರೀತಿಯಲ್ಲಿ ಈ ದೇಶಗಳು ಚೀನಾದ ಅತಿದೊಡ್ಡ ಟೆಕ್ ಕಂಪನಿಗಳಿಗೆ ಸಂಪೂರ್ಣ ರಿಯಾಯಿತಿ ನೀಡುತ್ತವೆ. ಇದು ಈಗಲೇ ನಿಲ್ಲಬೇಕು ಎಂದು ಹೇಳಿದ್ದಾರೆ.
ಡಿಜಿಟಲ್ ತೆರಿಗೆಗಳು, ಶಾಸನ, ನಿಯಮಗಳು ಅಥವಾ ಕಾನೂನುಗಳನ್ನು ಹೊಂದಿರುವ ಎಲ್ಲಾ ದೇಶಗಳಿಗೆ ನಾನು ಎಚ್ಚರಿಕೆ ನೀಡುತ್ತೇನೆ, ಈ ತಾರತಮ್ಯದ ಕ್ರಿಯೆಗಳನ್ನು ತೆಗೆದುಹಾಕದಿದ್ದರೆ, ನಾನು ಆ ದೇಶದ ಯುಎಸ್‌ಎಗೆ ರಫ್ತು ಮಾಡುವ ಉತ್ಪನ್ನಗಳ ಮೇಲೆ ಗಣನೀಯ ಹೆಚ್ಚುವರಿ ಸುಂಕಗಳನ್ನು ವಿಧಿಸುವೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಅಮೆರಿಕ ಮತ್ತು ಅಮೆರಿಕಾದ ತಂತ್ರಜ್ಞಾನ ಕಂಪನಿಗಳು ಇನ್ನು ಮುಂದೆ ವಿಶ್ವದ 'ಪಿಗ್ಗಿ ಬ್ಯಾಂಕ್' ಅಥವಾ 'ಡೋರ್‌ಮ್ಯಾಟ್' ಆಗಿರುವುದಿಲ್ಲ. ಅಮೆರಿಕ ಮತ್ತು ನಮ್ಮ ಅದ್ಭುತ ಟೆಕ್ ಕಂಪನಿಗಳಿಗೆ ಗೌರವ ತೋರಿಸಿ, ಇಲ್ಲವಾದರೆ, ಪರಿಣಾಮಗಳನ್ನು ಎದುರಿಸಿ ಎಂದಿದ್ದಾರೆ.
ಸಾಮಾನ್ಯವಾಗಿ ಆಲ್ಫಾಬೆಟ್, ಮೆಟಾ, ಮತ್ತು ಆಮೆಜಾನ್‌ನಂತಹ ಕೆಲವು ದೊಡ್ಡ ಮತ್ತು ಸ್ಥಾಪಿತ ಟೆಕ್ ಕಂಪನಿಗಳಿಗೆ ಮಾತ್ರ ಅನ್ವಯಿಸುವ ತೆರಿಗೆಗಳನ್ನು ಕೈಬಿಡುವಂತೆ ವ್ಯಾಪಾರ ಪಾಲುದಾರರ ಮೇಲೆ ಒತ್ತಡ ಹೇರಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಅಮೆರಿಕಾದ ಕಂಪನಿಗಳಾಗಿವೆ. (ಏಜೆನ್ಸೀಸ್)