ಪ್ರತಿಪಕ್ಷಗಳು ಜೈಲನ್ನೇ ಸಿಎಂ ಹೌಸ್​ ಮಾಡಲು ಹೊರಟಿವೆ: ಗೃಹಸಚಿವ ಅಮಿತ್​ ಷಾ ವಾಗ್ದಾಳಿ

photo-3-68aca68d40c11
Published on

ಹಲವು ಪ್ರಮುಖ ಮಸೂದೆಗಳ ಬಗ್ಗೆ ದೇಶದಲ್ಲಿ ಚರ್ಚೆ ಗರಿಗೆದರಿದೆ. ರಾಜಕೀಯ ಶುದ್ಧೀಕರಣದ ನಿಟ್ಟಿನಲ್ಲಿ ಈ ಮಸೂದೆಗಳು ಏಕೆ ಅವಶ್ಯಕ ಎಂದು ವಿವರಿಸುತ್ತ ಭ್ರಷ್ಟಾಚಾರ ವಿರುದ್ಧ ಸಮರ, ಸುಶಾಸನ ಹೀಗೆ ಹಲವು ಪ್ರಮುಖ ಸಂಗತಿಗಳ ಬಗ್ಗೆ ಸುದ್ದಿಸಂಸ್ಥೆ ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ಗೃಹ ಸಚಿವ ಅಮಿತ್ ಷಾ ಮಾತನಾಡಿದ್ದು, ವಿವರ ಇಲ್ಲಿದೆ.

ಸಾಂವಿಧಾನಿಕ ಹುದ್ದೆಯಲ್ಲಿರುವವರು ಗಂಭೀರ ಆರೋಪದ ಅಡಿಯಲ್ಲಿ ಜೈಲಿಗೆ ಹೋದಾಗ ಅವರು ಜೈಲಿನಿಂದ ಅಧಿಕಾರ ಚಲಾಯಿಸಬಹುದೇ? ಎಂದು ಪ್ರಶ್ನಿಸಿರುವ ಗೃಹ ಸಚಿವ ಅಮಿತ್ ಷಾ, ಪ್ರತಿಪಕ್ಷಗಳು ಜೈಲನ್ನೇ ಸಿಎಂ ಹೌಸ್ ಮಾಡಲು ಹೊರಟಿವೆ ಎಂದು ಆರೋಪಿಸಿದ್ದಾರೆ.

ಸಂವಿಧಾನಕ್ಕೆ 130ನೇ ತಿದ್ದುಪಡಿ ತರುವ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯದ ಸಚಿವರುಗಳು ಯಾವುದೇ ಗಂಭೀರ ಪ್ರಕರಣದಲ್ಲಿ ಬಂಧನಕ್ಕೊಳಗಾದರೆ, ಅವರಿಗೆ 30 ದಿನಗಳವರೆಗೆ ಜಾಮೀನು ಸಿಗದಿದ್ದರೆ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಕಾನೂನಿನ ಪ್ರಕಾರ ಅವರು 31ನೇ ದಿನವೇ ಹುದ್ದೆಯಿಂದ ವಜಾಗೊಳ್ಳುತ್ತಾರೆ.

ಮಸೂದೆ ಮಂಡಿಸುವಾಗಲೇ ಈ ಮಸೂದೆಯನ್ನು 31 ಸದಸ್ಯರ ಜಂಟಿ ಸಂಸದೀಯ ಸಮಿತಿಗೆ ನೀಡುವುದಾಗಿ ತಿಳಿಸಿದ್ದೆ. ವಿರೋಧ ಪಕ್ಷಗಳು ಜಂಟಿ ಸಂಸದೀಯ ಸಮಿತಿಯಲ್ಲಿ ತಮ್ಮ ವಾದ ಮಂಡಿಸಬಹುದು ಮತ್ತು ಸದನದಲ್ಲಿ ಮಸೂದೆ ಮಂಡನೆಯಾದ ಬಳಿಕವೂ ಚರ್ಚೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಬಹುದು. ಇದರ ಬದಲು ವಿರೋಧ ಪಕ್ಷಗಳು ಮಸೂದೆಯನ್ನು ಮಂಡನೆ ಮಾಡುವುದಕ್ಕೇ ವಿರೋಧಿಸುತ್ತಿದ್ದಾರೆ. ಈ ವರ್ತನೆ ಪ್ರಜಾಸತ್ತಾತ್ಮಕವಾದುದಲ್ಲ ಮತ್ತು ವಿರೋಧ ಪಕ್ಷಗಳು ದೇಶದ ಜನತೆಯ ಮುಂದೆ ಇದಕ್ಕೆ ಉತ್ತರ ನೀಡಬೇಕು ಎಂದು ಷಾ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ನೀಡಲಾಗಿದೆ. ಈ ಸಮಿತಿಯನ್ನು ವಿರೋಧ ಪಕ್ಷದ ಸಂಸದರು ಬಹಿಷ್ಕರಿಸಿದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಸಮಿತಿಯ ಸದಸ್ಯರಾಗುವಂತೆ ಅವಕಾಶ ನೀಡಲಾಗಿದೆ, ಅಲ್ಲಿ ಅವರು ತಮ್ಮ ವಾದ ಮಂಡಿಸಬಹುದು. ಸಮಿತಿಯ ಮುಂದೆ ಸಾಕಷ್ಟು ಜನರು ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ಸಾಕಷ್ಟು ಚರ್ಚೆಯ ಬಳಿಕ ಸಮಿತಿ ವರದಿ ಸಿದ್ಧಪಡಿಸುತ್ತದೆ. ಇದರ ಆಧಾರದಲ್ಲಿಯೇ ಮಸೂದೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ವಿರೋಧ ಪಕ್ಷದ ಸದಸ್ಯರು ಬಹಿಷ್ಕರಿಸಿದರೆ ಉಳಿದವರು ತಮ್ಮ ಕಾರ್ಯನಿರ್ವಹಿಸುತ್ತಾರೆ ಎಂದು ಷಾ ತಿಳಿಸಿದರು.

ಭಾರತದ ಜನಪ್ರತಿನಿಧಿ ಕಾನೂನಿನ ಅಡಿ ಯಾವುದೇ ಚುನಾಯಿತ ಸದಸ್ಯರಿಗೆ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾದರೆ ಅವರು ಅನರ್ಹರಾಗುತ್ತಾರೆ. ಹಲವರು ಈ ವಿಧದಲ್ಲಿ ಅನರ್ಹರಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೊರ್ಟ್​ಗೆ ಮೇಲ್ಮನವಿ ಸಲ್ಲಿಸಿ ಶಿಕ್ಷೆಗೆ ತಡೆಯಾಜ್ಞೆ ತಂದು ತಮ್ಮ ಸದಸ್ಯತ್ವವನ್ನು ಮತ್ತೆ ಪಡೆದುಕೊಂಡಿದ್ದಾರೆ. ಈಗ ಹಲವರು ಜೈಲಿಗೆ ಹೋದ ಬಳಿಕವೂ ರಾಜೀನಾಮೆ ನೀಡುತ್ತಿಲ್ಲ. ಇದು ಟ್ರೆಂಡ್ ಆಗಿದೆ, ಇವರು ಜೈಲಿನಿಂದಲೇ ಅಧಿಕಾರ ಚಲಾಯಿಸುತ್ತಿದ್ದಾರೆ. ಅಧಿಕಾರಿಗಳು ಇವರ ಸಹಿ ಪಡೆಯಲು ಜೈಲಿಗೆ ಹೋಗುತ್ತಿದ್ದರು ಎಂದರು.

ಜೈಲಿನಲ್ಲಿದ್ದು ಸರ್ಕಾರ ನಡೆಸಬಹುದೇ?

ದೇಶದಲ್ಲಿ ಎನ್​ಡಿಎ ಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚಿದೆ, ಪ್ರಧಾನ ಮಂತ್ರಿ ಸಹ ಎನ್​ಡಿಎ ಮೈತ್ರಿಕೂಟದಿಂದ ಆಯ್ಕೆಯಾದವರು. ಹಾಗಾಗಿ ಈ ಮಸೂದೆಯ ಅಡಿ ಎಲ್ಲರೂ ಬರುತ್ತಾರೆ. ಯಾರ ವಿರುದ್ಧವಾದರೂ ಆರೋಪ ಕೇಳಿ ಬಂದಾಗ ಅವರ ವಿರುದ್ಧ ಕೋರ್ಟ್ ಮೊರೆ ಹೋಗಬಹುದು. ಈ ಮಸೂದೆಯಲ್ಲಿ 30 ದಿನಗಳ ಸಮಯಾವಕಾಶವಿದೆ, ಸುಳ್ಳು ಪ್ರಕರಣ ದಾಖಲಾಗಿದ್ದರೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್​ನಲ್ಲಿ ಜಾಮೀನು ಪಡೆಯಬಹುದು. 30 ದಿನಗಳ ಬಳಿಕ ಜಾಮೀನು ಸಿಕ್ಕರೂ ಅವರು ಮತ್ತೆ ಅಧಿಕಾರ ಸ್ವೀಕರಿಸಬಹುದು.

ಸಣ್ಣಪುಟ್ಟ ಆರೋಪಗಳಿಗಾಗಿ ಹುದ್ದೆ ತ್ಯಜಿಸಬೇಕಿಲ್ಲ, 5 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾಗುವಂತಹ ಗಂಭೀರ ಆರೋಪಗಳಿದ್ದಾಗ ಮಾತ್ರ ಹುದ್ದೆ ತ್ಯಜಿಸಬೇಕಾಗುತ್ತದೆ. ಈ ಹಿಂದೆ ಹಲವರು ತಮ್ಮ ವಿರುದ್ಧ ಆರೋಪ ಕೇಳಿ ಬಂದಾಗ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಹ ರಾಜೀನಾಮೆ ನೀಡಿ, ಜೈಲಿನಿಂದ ವಾಪಸ್ ಬಂದ ಬಳಿಕ ಮತ್ತೆ ಸಿಎಂ ಆಗಿದ್ದಾರೆ. ಯಾವುದೇ ಪ್ರಧಾನಿ, ಸಿಎಂ ಅಥವಾ ಸಚಿವರು ಜೈಲಿನಲ್ಲಿದ್ದು ಸರ್ಕಾರ ನಡೆಸಬಹುದೇ ಎಂದು ಪ್ರಶ್ನಿಸಿದರು.

ರಾಹುಲ್ ಉತ್ತರಿಸಬೇಕು

ಐಎನ್​ಡಿಐಎ ಮೈತ್ರಿಕೂಟದ ಅಭ್ಯರ್ಥಿ ನ್ಯಾ. ಸುದರ್ಶನ್ ತಮ್ಮ ತೀರ್ಪಿನ ಮೂಲಕ ಸಲ್ವಾ ಜುಡೆಮ್ ಅನ್ನು ರದ್ದುಗೊಳಿಸುವ ಮೂಲಕ ಆದಿವಾಸಿಗಳ ಆತ್ಮರಕ್ಷಣೆಯ ಅಧಿಕಾರವನ್ನು ಕೊನೆಗೊಳಿಸಿದ್ದರು. ಅಂದು ನಕ್ಸಲ್​ವಾದ ವಿನಾಶದ ಅಂಚಿನಲ್ಲಿತ್ತು. ಆದರೆ ಈ ತೀರ್ಪಿನಿಂದ ನಕ್ಸಲ್​ವಾದ ಮತ್ತೆ ಜೀವಂತವಾಗಿತ್ತು. ಇವರನ್ನು ಅಭ್ಯರ್ಥಿಯಾಗಿ ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ರಾಹುಲ್ ಗಾಂಧಿಯದು ದ್ವಿಮುಖ ನೀತಿ

ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೇಂದ್ರ ಸಚಿವರಾಗಿದ್ದಾಗ ಕೋರ್ಟ್ ಅವರಿಗೆ ಶಿಕ್ಷೆ ವಿಧಿಸಿತ್ತು. ಈ ವೇಳೆ ಯುಪಿಎ ಸರ್ಕಾರ ಲಾಲು ಪ್ರಸಾದ್​ರನ್ನು ರಕ್ಷಿಸಲು ಸುಗ್ರೀವಾಜ್ಞೆ ತಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾಗುವ ವರೆಗೆ ಅನರ್ಹತೆಯನ್ನು ತಡೆಹಿಡಿದಿತ್ತು. ಇದೇ ಅವರ ನೈತಿಕತೆ. ಅಂದು ರಾಹುಲ್ ಗಾಂಧಿ ತಮ್ಮದೇ ಸರ್ಕಾರದ ಸುಗ್ರೀವಾಜ್ಞೆಯ ಪ್ರತಿಯನ್ನು ಸುದ್ದಿಗೋಷ್ಠಿಯಲ್ಲಿ ಹರಿದುಹಾಕಿದ್ದರು. ಪ್ರಧಾನಿಯ ತೀರ್ವನವನ್ನು ಪ್ರಶ್ನಿಸಿದ್ದರು. ಅದೇ ರಾಹುಲ್ ಗಾಂಧಿ ಬಿಹಾರದಲ್ಲಿ ಸರ್ಕಾರ ರಚಿಸಲು ಲಾಲು ಪ್ರಸಾದ್ ಯಾದವ್​ರೊಂದಿಗೆ ಕೈಜೋಡಿಸಿದ್ದಾರೆ. ಇದು ಅವರ ದ್ವಿಮುಖ ನೀತಿಯಲ್ಲವೇ? ಎಂದು ಪ್ರಶ್ನಿಸಿದರು.

ಆರೋಗ್ಯ ಸಮಸ್ಯೆಯಿಂದ ಧನಕರ್ ರಾಜೀನಾಮೆ

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆರೋಗ್ಯ ಸಮಸ್ಯೆಯಿಂದಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಪತ್ರದಲ್ಲಿಯೇ ಇದು ಸ್ಪಷ್ಟವಾಗಿ ತಿಳಿಸಲಾಗಿದೆ. ಅವರು ಸಾಂವಿಧಾನಿಕ ಹುದ್ದೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು. ಅವರ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದು, ಈ ಕುರಿತು ಹೆಚ್ಚು ಚರ್ಚೆ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದರು.

ಚುನಾವಣೆಗೆ ಸಂಬಂಧಿಸಿದ್ದಲ್ಲ

ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಿಲ್ಲ. ದೇಶದ ಪೂರ್ವ ವಲಯದಿಂದ ರಾಷ್ಟ್ರಪತಿ ಬಂದಿದ್ದಾರೆ. ಪಶ್ಚಿಮದಿಂದ ಪ್ರಧಾನ ಮಂತ್ರಿ ಬಂದಿದ್ದಾರೆ. ಹಾಗಾಗಿ ರಾಧಾಕೃಷ್ಣನ್ ದಕ್ಷಿಣವನ್ನು ಪ್ರತಿನಿಧಿಸಲಿದ್ದಾರೆ. ರಾಧಾಕೃಷ್ಣನ್ ಹಲವು ದಶಕಗಳಿಂದ ಕಳಂಕರಹಿತ ರಾಜಕಾರಣ ಮಾಡಿದ್ದಾರೆ. ಬಿಜೆಪಿಯ ಸಾಕಷ್ಟು ನಾಯಕರು ಆರ್​ಎಸ್​ಎಸ್​ನೊಂದಿಗೆ ನಂಟು ಹೊಂದಿದ್ದಾರೆ. ಇದರಲ್ಲಿ ಸಮಸ್ಯೆ ಏನಿದೆ ಎಂದರು.

ಪ್ರಧಾನಿ ದಿಟ್ಟ ಹೆಜ್ಜೆ

ಮಸೂದೆಯ ಕರಡು ಸಿದ್ಧಪಡಿಸುವಾಗ ಪ್ರಧಾನಮಂತ್ರಿಯನ್ನು ಇದರಲ್ಲಿ ಸೇರ್ಪಡೆ ಮಾಡಿರಲಿಲ್ಲ. ಆದರೆ ಪ್ರಧಾನಿ ಹುದ್ದೆಯನ್ನೂ ಈ ಮಸೂದೆಯಲ್ಲಿ ಸೇರ್ಪಡೆ ಮಾಡುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮನ್ನು ರಕ್ಷಿಸಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. ಇದು ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ತೋರಿಸುತ್ತದೆ.

ಸಿಬಿಐ ನನಗೆ ಸಮನ್ಸ್ ನೀಡಿದ ಕೂಡಲೇ ರಾಜೀನಾಮೆ ನೀಡಿದ್ದೆ, ಆ ಬಳಿಕ ನನ್ನ ಬಂಧನವಾಗಿತ್ತು. ಕೋರ್ಟ್​ನಲ್ಲಿ ವಿಚಾರಣೆ ನಡೆದು ಇದು ರಾಜಕೀಯ ದ್ವೇಷದ ಪ್ರಕರಣ ಎಂದು ತಿಳಿಸಿ ನಿದೋಷಿ ಎಂದು ತೀರ್ಪು ನೀಡಿತ್ತು. ತೀರ್ಪು ಬರುವ ಮೊದಲೇ ನನಗೆ ಜಾಮೀನು ಸಿಕ್ಕಿತ್ತು. ನಾನು ಸಂಪೂರ್ಣ ನಿದೋಷಿ ಎಂದು ತೀರ್ಪು ಬರುವವರೆಗೆ ಯಾವುದೇ ಸಾಂವಿಧಾನಿಕ ಹುದ್ದೆ ಸ್ವೀಕರಿಸಿರಲಿಲ್ಲ. ನಾನು 2 ವರ್ಷ ಗುಜರಾತ್​ನಿಂದ ಹೊರಗೂ ಇದ್ದೆ. ಹಾಗಾಗಿ ನನಗೆ ನೈತಿಕತೆ ಪಾಠ ಮಾಡಬೇಡಿ ಎಂದು ವಿಪಕ್ಷ ನಾಯಕರಿಗೆ ತಿಳಿಸಿದ್ದೆ. | ಅಮಿತ್ ಷಾ ಕೇಂದ್ರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net