

ನಮ್ಮ ದೇಶ ಮತ್ತೊಮ್ಮೆ ಭೂತಕಾಲದ ಸುಸ್ಥಿತಿಗೆ ಮರಳುವುದು ಸಾಧ್ಯವೇ ಎಂಬ ಪ್ರಶ್ನೆ ಸಹಜ. 1970ರಲ್ಲಿ ಡಾ. ವರ್ಗೀಸ್ ಕುರಿಯನ್ ಅವರ ಹಾಲಿನ ಕ್ರಾಂತಿಯಿಂದ ಹೈನುಗಾರಿಕೆಯಲ್ಲಿ ಆಮೂಲಾಗ್ರ ಬದಲಾವಣೆ ಕಂಡೆವು. ಅಷ್ಟೇ ಅಲ್ಲದೆ ಸಾವಿರಾರು ರೈತರಿಗೆ ಹಳ್ಳಿಯಲ್ಲಿ ಇದರಿಂದ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ. ಭಾರತವು ಹಾಲು ಉತ್ಪಾದನೆ ಮಾಡುವ ಅಗ್ರದೇಶಗಳ ಸಾಲಿನಲ್ಲಿ ಸೇರಿದೆ.
ಪ್ರಾರಂಭಿಕ ದಿನಗಳಲ್ಲಿ, ಪ್ರಾಯಶಃ ಡಾ ಕುರಿಯನ್ರ ಮಾತನ್ನು ಯಾರೂ ಕೇಳದೇ ಇರಬಹುದು ಅಥವಾ ಅವರ ಆಲೋಚನೆಯನ್ನು ಹೀಯಾಳಿಸಿರಬಹುದು, ಹಾಸ್ಯಮಾಡಿರಬಹುದು. ಡಾ. ಎಂ.ಎಸ್. ಸ್ವಾಮಿನಾಥನ್ ಅದ್ಭುತ ವಿಚಾರಗಳಿಂದ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವುದು 1960 ರ ಹಸಿರುಕ್ರಾಂತಿಯಲ್ಲಿ ಸಾಧ್ಯವಾಯಿತು. ಮುಖ್ಯವಾಗಿ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಾಗಿ, ನಮಗೆ ಬೇಕಾಗುವಷ್ಟು ಬೆಳೆಯನ್ನು ಬೆಳೆಯಲು ಸಾಧ್ಯವಾಯಿತು. ಮಾತ್ರವಲ್ಲ, ಹೊರ ದೇಶಗಳಿಗೆ ರಪ್ತು ಮಾಡಲೂ ಸಾಧ್ಯವಾಯಿತು. ಹೀಗೆ ಅದ್ಭುತ ಚಿಂತನೆಗಳು ಮೂಡಬೇಕು. ಆ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಬೇಕು. ಅದರಿಂದ ಹಣ, ಅಧಿಕಾರ, ಆನಂದ, ತೃಪ್ತಿ ದೊರೆಯುತ್ತದೆ.
ಅಲ್ಲದೆ ಕೇವಲ ನಾನು ಬಾಳದೇ, ಅನೇಕ ಜನರಿಗೆ ಬಾಳನ್ನು ಕೊಡಲು ಸಾಧ್ಯವಾಗುತ್ತದೆ. ನನ್ನ ಶಿಷ್ಯರು ತಾಳೆ ಮರದಂತೆ ಬೆಳೆಯಬೇಕು ಎಂದು ಸ್ವಾಮಿ ವಿವೇಕಾನಂದರು ತಮ್ಮ ಶಿಷ್ಯರಿಗೆ ತಿಳಿಸಿದ್ದರು. ಅದರ ಅರ್ಥ, ತಾಳೆ ಮರವು ನೇರವಾಗಿ, ದೃಢವಾಗಿ, ಆಕಾಶದತ್ತ ಬೆಳೆಯುವುದು. ಇದರಂತೆ ಶಿಷ್ಯರೂ ಉನ್ನತವಾದ ಉದ್ದೇಶಗಳನ್ನು ಹೊಂದಿ ಬೆಳೆಯಬೇಕು. ತಾಳೆ ಮರವು ಬೇರುಗಳಿಂದ ನೀರು-ಗೊಬ್ಬರಗಳನ್ನು ತೆಗೆದುಕೊಂಡು, ಎತ್ತರಕ್ಕೆ ಬೆಳೆಯುವಂತೆ, ಶಿಷ್ಯರೂ ತಮ್ಮ ಆದರ್ಶಗಳಿಂದ ಹಾಗೂ ಗುರುಗಳ ಮಾರ್ಗದರ್ಶನದಿಂದ ಆಧ್ಯಾತ್ಮಿಕ ಮತ್ತು ಬೌದ್ಧಿಕ ಬೆಳವಣಿಗೆ ಸಾಧಿಸಬೇಕು. ತಾಳೆ ಮರವು ವೃಥಾ ಶಾಖೆಗಳನ್ನು ಹರಡದೆ, ನೇರವಾಗಿ ಬೆಳೆಯುವಂತೆ, ಶಿಷ್ಯರೂ ನೇರ ಮಾರ್ಗದಲ್ಲಿ, ಏಕಾಗ್ರತೆ ಹಾಗೂ ಸಂಕಲ್ಪದೊಂದಿಗೆ ಜೀವನದಲ್ಲಿ ಮುಂದುವರಿಯಬೇಕು ಎನ್ನುವುದು ಅವರ ಮಾತಿನ ಅರ್ಥ.