

ಬೆಂಗಳೂರು:
ಪತ್ರಿಕೋದ್ಯಮದಲ್ಲಿ ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಪಿಡುಗು ತಡೆಗಟ್ಟಲು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಕೆಂಧೂಳಿ ಆಯೋಜಿಸಲಾಗಿದ್ದ ವಾರಪತ್ರಿಕೆ ಅಂದು -ಇಂದು ಮತ್ತು ಲಂಕೇಶ್ ಕಂಡ ವಾರಪತ್ರಿಕೆ, ಸೈದ್ದಾಂತಿಕ ನಿಲುವುಗಳ ಕುರಿತ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಮಂಡಿಸಲಾಗುವುದು ಎಂದರು.
ಕೆಲವು ಗಂಭೀರ ವಿಷಯಗಳ ಪ್ರಸಾರ ಮಾಡಬೇಕಾದ ಮಾಧ್ಯಮಗಳು ಅದನ್ನು ಬಿಟ್ಟು ಮೌಢ್ಯ ಬಿತ್ತುವ ಕೆಲಸವಾಗುತ್ತಿದೆ ಈ ಮೂಲಕ ಪತ್ರಿಕೋದ್ಯಮ ಹಾದಿ ತಪ್ಪುತ್ತಿದೆ ಎಂದರು.
ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಪತ್ರಿಕೋದ್ಯಮದ ಮಡಿವಂತಿಕೆ ದೂರವಾಗಬೇಕು. ಪ್ರಶ್ನೆ ಮಾಡುವ ಹಕ್ಕನ್ನು ಪತ್ರಕರ್ತರು ಕಳೆದುಕೊಳ್ಳಬಾರದು. ಆಳುವ ಸರ್ಕಾರಗಳ ಕೈಗೊಂಬೆಯಾಗಿ ಮಾಧ್ಯಮಗಳು ಕೆಲಸ ಮಾಡುತ್ತಿರುವುದು ತೀವ್ರ ನೋವು ತಂದಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ದಿನ ನಿತ್ಯ ವೃತ್ತಿ ಸವಾಲಿನ ನಡುವೆ ಈಜಬೇಕಾಗಿದೆ. ಕೆಯುಡಬ್ಲೂೃಜೆ ಹೋರಾಟದ ಲವಾಗಿಯೇ ಪತ್ರಕರ್ತರಿಗಾಗಿಯೇ ಬಸ್ ಪಾಸ್ ಮತ್ತು ಹೆಲ್ತ್ ಸ್ಕೀಂನ್ನು ತಡವಾಗಿಯಾದರೂ ಸರ್ಕಾರ ಜಾರಿಗೊಳಿಸಿದ್ದು, ಅದಕ್ಕಾಗಿ ಅಭಿನಂದಿಸುವೆ ಎಂದರು.
ಹಿರಿಯ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್, ಅಂಕಣಕಗಾರ್ತಿ ಕುಸುಮ ಆಯರಹಳ್ಳಿ ಮಾತನಾಡಿ, ಮಾಧ್ಯಮ ಲೋಕದಲ್ಲಿ ಅಜಗಜಾಂತರ ಬದಲಾವಣೆಗಳುಆಗಿವೆ. ಆದರೆ, ವೈಚಾರಿಕ ಪ್ರೌಢಿಮೆ ಇಂದಿನ ಯುವ ಪೀಳಿಗೆಯ ಪತ್ರಕರ್ತರಲ್ಲಿ ಕಣ್ಮರೆಯಾಗಿದೆ ಎಂದರು.
ಕೆಂಧೂಳಿ ಪತ್ರಿಕೆಯ ಸಂಪಾದಕ ತುರುವನೂರು ಮಂಜುನಾಥ್ ಅತಿಥಿಗಳನ್ನು ಗೌರವಿಸಿದರು.
ಹಿರಿಯ ಪತ್ರಕರ್ತರಾದ ಡಿ.ಉಮಾಪತಿ, ಕಂ.ಕ.ಮೂರ್ತಿ, ಆರಾಧ್ಯ ಸೆರಿದಂತ ಹಲವರು ಉಪಸ್ಥಿತರಿದ್ದರು.