

| ಬೇಲೂರು ಹರೀಶ್ ಬೆಂಗಳೂರು
ಕರೊನಾದಿಂದ ಚೇತರಿಸಿಕೊಂಡು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ರಾಜ್ಯದಲ್ಲೀಗ ಜೀವರಕ್ಷಕ ಔಷಧಗಳ ಕೊರತೆ ತಲೆದೋರಿದೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಇತರ ಗಂಭೀರ ಕಾಯಿಲೆಗಳನ್ನು ನಿವಾರಿಸುವ ಔಷಧಗಳ ಸಮಸ್ಯೆಯಾಗಿರುವುದರಿಂದ ರೋಗಿಗಳು ದುಬಾರಿ ಬೆಲೆ ತೆತ್ತು ಖಾಸಗಿಯಲ್ಲಿ ಔಷಧ ಖರೀದಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.
ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್ಎಂಎಸ್ಸಿಎಲ್) ವಿವಿಧ ಟೆಂಡರ್ಗಳ ಅಂತಿಮ ಪ್ರಕ್ರಿಯೆ ಮುಗಿಸಿಲ್ಲ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ಎಂ) ವತಿಯಿಂದ ನೀಡಲಾಗುತ್ತಿರುವ ಅನುದಾನ ಸ್ಥಗಿತವಾಗಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗೆ ತೆರಳುವವರಿಗೆ ಗಂಭೀರ ಕಾಯಿಲೆ ನಿವಾರಿಸುವ ಮಾತ್ರೆ, ಚುಚ್ಚುಮದ್ದು ಸಹಿತ ನೂರಕ್ಕೂ ಹೆಚ್ಚು ಔಷಧಗಳ ಅಭಾವ ಎದುರಾಗಿದೆ. ಈ ಬಾರಿ ಬೇಡಿಕೆ ಇರುವ ಅಂದಾಜು 487.75 ಕೋಟಿ ರೂ. ಮೌಲ್ಯದ ಔಷಧಗಳ ಖರೀದಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದರೂ ಪ್ರಕ್ರಿಯೆ ಮುಗಿಯಲು ವಿಳಂಬವಾಗುತ್ತಿದೆ.
ಬೇಡಿಕೆ ಹೆಚ್ಚು: ರಾಜ್ಯ ವೈದ್ಯಕೀಯ ಸರಬರಾಜು ನಿಗಮ 23 ಜಿಲ್ಲಾ, 161 ತಾಲೂಕು ಆಸ್ಪತ್ರೆ, 203 ಸಮುದಾಯ, ಆರೋಗ್ಯ ಕೇಂದ್ರ, 2,331 ಪ್ರಾಥಮಿಕ ಆರೋಗ್ಯ ಕೇಂದ್ರ, 179 ನಗರ ಆರೋಗ್ಯ ಕೇಂದ್ರ ಸೇರಿ 3 ಸಾವಿರಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆಗಳಿಗೆ ಸಕಾಲದಲ್ಲಿ ಔಷಧ ಪೂರೈಸುವ ಸಂಸ್ಥೆಯಾಗಿದೆ. 2017ರಲ್ಲಿ 337 ಕೋಟಿ ರೂ, 2018ರಲ್ಲಿ 360 ಕೋಟಿ ರೂ, 2019ರಲ್ಲಿ 380 ಕೋಟಿ ರೂ., 2020ರಲ್ಲಿ 400 ಕೋಟಿ ರೂ, ಈ ಬಾರಿ 87.75 ಕೋಟಿ ರೂ. ಮೊತ್ತದ ಔಷಧ ಪೂರೈಸಲು ಬೇಡಿಕೆ ಬಂದಿದೆ.
ಕೋಟ್ಯಂತರ ರೂ. ಬಾಕಿ: ವೈದಕೀಯ ಸರಬರಾಜು ನಿಗಮದಲ್ಲಿ ಕೋಟ್ಯಂತರ ರೂ. ಮೊತ್ತದ ಔಷಧ ಬಿಲ್, ಭದ್ರತಾ ಠೇವಣಿ ಹಾಗೂ ಇಎಂಡಿ ಬಾಕಿಯಿವೆ. ಕಳೆದ 4 ವರ್ಷಗಳಿಂದ ಬಾಕಿ ಔಷಧ ಬಿಲ್ಗಳಿಗೆ ಹಣ ಪಾವತಿಸಿಲ್ಲ. ಹೀಗಾಗಿ ಔಷಧ ಪೂರೈಸಿದ್ದ ಸರಬರಾಜುದಾರರು ಕಂಗಾಲಾಗಿದ್ದಾರೆ. ಟೆಂಡರ್ ನಿಯಮಾನುಸಾರ 30 ದಿನದೊಳಗೆ ಔಷಧ ಬಿಲ್ಗಳಿಗೆ ಹಣ ಪಾವತಿಸಬೇಕು. ನೆರೆಯ ತಮಿಳುನಾಡು ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಪೇಮೆಂಟ್ ಆಗುತ್ತಿದೆ. ಆದರೆ, ಕರ್ನಾಟಕದಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ಔಷಧ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಟೆಂಡರ್ ಸಭೆಯಲ್ಲಿ ಬಾಕಿ ಬಿಲ್ಗಳಿಗೆ ಹಣ ಪಾವತಿಸುವಂತೆ ಸರಬರಾಜುದಾರರು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಯಾವೆಲ್ಲ ಔಷಧ ಕೊರತೆ: ಶ್ವಾಸಕೋಶ, ಕರುಳು, ರಕ್ತಹೀನತೆ, ಸರ್ಪಸುತ್ತು, ನ್ಯುಮೋನಿಯಾ, ಕ್ಯಾನ್ಸರ್, ಅಸ್ತಮಾ, ಸಕ್ಕರೆಕಾಯಿಲೆ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶ್ರಯ ರಕ್ತಸ್ರಾವ, ಹೃದಯಾಘಾತ, ಮೂಳೆ ಸಮಸ್ಯೆ, ತುರಿಕೆ, ಫಂಗಸ್, ಮೈಗ್ರೇನ್, ಯೋನಿ ಸೋಂಕು, ಶೀತ, ಅನೆಸ್ತೀಶಿಯಾ, ಹೃದಯ ಶಸ್ತ್ರಚಿಕಿತ್ಸೆ, ರಕ್ತಹೆಪು್ಪಗಟ್ಟುವಿಕೆ, ಹುಣ್ಣು, ನೋವು, ವಾಕರಿಕೆ, ವಾಂತಿ, ಮಿದುಳು ಮತ್ತು ನರ, ಕಣ್ಣಿನ ಸೊಂಕು ಸೇರಿ ವಿವಿಧ ಗಂಭೀರ ಕಾಯಿಲೆಗಳ ನಿವಾರಿಸುವ ನೂರಕ್ಕೂ ಹೆಚ್ಚು ಔಷಧ, ಹಲವು ವಿಧದ ಮಾತ್ರೆ ಹಾಗೂ ಚುಚ್ಚುಮದ್ದು.
ಉತ್ತರ ಕರ್ನಾಟಕದಲ್ಲಿ ಗಂಭೀರ: ಪ್ರತಿ ವರ್ಷ ಫೆಬ್ರವರಿಯಲ್ಲಿ ಟೆಂಡರ್ ಆಹ್ವಾನಿಸಿ ಮಾರ್ಚ್ನಲ್ಲಿ ಪ್ರಕ್ರಿಯೆ ಮುಗಿಸಿ ಔಷಧ ಸಂಗ್ರಹಿಸಲಾಗುತ್ತದೆ. ಅದರಂತೆ, ಕರ್ನಾಟಕದ ಕೆಎಸ್ಎಂಎಸ್ಸಿಎಲ್ (ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿ.)ನಲ್ಲಿ ಈ ಪ್ರಕ್ರಿಯೆ ಮುಗಿಸಿ ಏಪ್ರಿಲ್ನಲ್ಲಿ ಔಷಧ ಸ್ವೀಕರಿಸಬೇಕಾಗಿತ್ತು. ಆದರೆ, ಪ್ರಸಕ್ತ ಸಾಲಿನ ಹೊಸ ಟೆಂಡರ್ ಪ್ರಕ್ರಿಯೆಯನ್ನು ಸೆಪ್ಟೆಂಬರ್ ಕಳೆದರೂ ಮುಗಿಸಿಲ್ಲ. ಕಳೆದ ವರ್ಷ ಬಾಕಿ ಇರುವ ಟೆಂಡರ್ಗಳನ್ನೇ ನಡೆಸಲಾಗುತ್ತಿದೆ. ಹೊಸ ಟೆಂಡರ್ ಪ್ರಕ್ರಿಯೆ ವಿಳಂಬವಾಗುವ ಹಿನ್ನೆಲೆಯಲ್ಲಿ 2 ತಿಂಗಳವರೆಗೆ ಔಷಧ ಕೊರತೆ ನಿಶ್ಚಿತವಾದಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನನಿತ್ಯ ಬಳಕೆಯಾಗುವ ಜ್ವರ, ನೆಗಡಿ, ನೋವಿನ ಔಷಧಗಳೂ ಕೊರತೆಯಾಗಿವೆ. ಅವುಗಳನ್ನು ಖಾಸಗಿ ಮೆಡಿಕಲ್ನಲ್ಲಿ ಖರೀದಿಸಲು ವೈದ್ಯರು ತಿಳಿಸುತ್ತಿದ್ದಾರೆ. ರಾಜ್ಯಾದ್ಯಂತ ಈ ಸಮಸ್ಯೆ ಇದ್ದರೂ ಉತ್ತರ ಕರ್ನಾಟಕದಲ್ಲಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೈಸೇರದ ಅನುದಾನ: ಔಷಧ ಕೊರತೆ, ತುರ್ತು ಸಂದರ್ಭದಲ್ಲಿ 5 ಲಕ್ಷ ರೂ.ವರೆಗೆ ಜೀವರಕ್ಷಕ ಔಷಧಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಖರೀದಿಸಲು ಅವಕಾಶವಿದೆ. ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್ಎಚ್ಎಂ) ಸಂಸ್ಥೆ ರಾಷ್ಟ್ರೀಯ ಉಚಿತ ಔಷಧ ಸೇವೆಯಡಿ (ಎನ್ಎಫ್ಡಿಎಸ್) ಜಿಲ್ಲಾಸ್ಪತ್ರೆಗೆ 25 ಲಕ್ಷ ರೂ. ಹಾಗೂ ತಾಲೂಕು ಆಸ್ಪತ್ರೆಗೆ 10 ಲಕ್ಷ ರೂ. ಅನುದಾನ ನೀಡುತ್ತದೆ. ಅನುದಾನ ಕೊರತೆಯಿಂದ ಈ ಬಾರಿ ಜಿಲ್ಲಾಸ್ಪತ್ರೆಗೆ 10 ಲಕ್ಷ ರೂ. ಹಾಗೂ ತಾಲೂಕು ಆಸ್ಪತ್ರೆಗೆ 5 ಲಕ್ಷ ರೂ. ನೀಡುವುದಾಗಿ ತಿಳಿಸಿತ್ತು. ಆದರೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಚ್ಚಾವಸ್ತುಗಳು ತುಟ್ಟಿ: ಔಷಧಗಳ ಜತೆಗೆ, ಜನರಿಗೆ ಔಷಧ ತಯಾರಿಸುವಂತಹ ಕಚ್ಚಾವಸ್ತುಗಳ ಬೆಲೆ ಏರಿಕೆಯ ಬಿಸಿ ಕೂಡ ತಟ್ಟಿದೆ. ಇಂಥ ಕಚ್ಚಾವಸ್ತುಗಳ ಬೆಲೆ ಪ್ರತಿ ಕೆಜಿಗೆ ಸರಾಸರಿ ಶೇ.150-ಶೇ.200 ರಷ್ಟು ಏರಿಕೆಯಾಗಿದೆ. ಕರೊನಾಕ್ಕೆ ಬಳಸುವ ಆಂಟಿಬಯೋಟಿಕ್ಸ್ ಚುಚ್ಚುಮದ್ದು ದರ ಶೇ.236 ಹೆಚ್ಚಾಗಿದೆ. ಹೃದಯ ಕಾಯಿಲೆ, ಸೋಂಕು ನಿವಾರಕ, ಡಯಾಬಿಟಿಸ್, ಆಂಟಿ ಬಯೋಟಿಕ್ಸ್ ಉತ್ಪಾದನೆಗೆ ಅಗತ್ಯವಿರುವಂತಹ ಕಚ್ಚಾವಸ್ತುಗಳು ಚೀನಾದಿಂದ ಭಾರತಕ್ಕೆ ಆಮದಾಗುತ್ತಿದೆ. ಕರೊನಾ ಅವಧಿಯಲ್ಲಿನ ಲಾಕ್ಡೌನ್, ಸಾಗಣೆ ವೆಚ್ಚ ಮತ್ತು ಕಚ್ಚಾವಸ್ತುಗಳ ಕೊರತೆ ಇನ್ನಿತರ ಕಾರಣಗಳಿಂದ ಔಷಧ ಬೆಲೆ ಹೆಚ್ಚಳವಾಗಿದೆ.