

ಬೆಂಗಳೂರು: ಕೆಂಪು ವಲಯದಲ್ಲೂ (ರೆಡ್ ಜೋನ್) ಆರ್ಥಿಕ ಚಟುವಟಿಕೆ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆಯಾ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕಾರ್ಖಾನೆಗಳು, ಎಲೆಕ್ಟ್ರಿಕ್ ಅಂಗಡಿಗಳು, ಟೈಲ್ಸ್ ಅಂಗಡಿಗಳನ್ನು ತೆರಯಬಹುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರು ನಗರವನ್ನು 4 ವಲಯಗಳಾಗಿ ವಿಂಗಡಿಸಲು ನಿರ್ಧರಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ವಿಂಗಡಣೆ ಮಾಡಲಾಗುವುದು ಎಂದರು.
2 ಗಂಟೆಯಲ್ಲಿ ಸಿಗುತ್ತೆ ಅನುಮತಿ: ಅಂಗಡಿ ಮುಂಗಟ್ಟೆಗಳು, ಕಾರ್ಖಾನೆಗಳನ್ನು ತೆರೆಯಲು ಅರ್ಜಿ ಸಲ್ಲಿಸಿದ ಎರಡು ಗಂಟೆಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅನುಮತಿ ದೊರೆಯುತ್ತದೆ ಎಂದು ಆರ್. ಅಶೋಕ್ ಹೇಳಿದರು.
ಈ ರೀತಿಯಾಗಿ ಅನುಮತಿ ಪಡೆದುಕೊಂಡು ವೋಲ್ವೋ ಕಂಪನಿ ಈಗಾಗಲೆ ಕಾರ್ಯಾರಂಭಿಸಿದೆ. ಕಾರ್ಖಾನೆಗಳು ಶೇ.33 ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಬಹುದು. ಉಳಿದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದು ಕಡ್ಡಾಯ ಎಂದು ಹೇಳಿದರು.
ಮಾರ್ಕೆಟ್ನಲ್ಲಿ ತರಕಾರಿ, ಹಣ್ಣು, ಔಷಧ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಇನ್ನುಳಿದಂತೆ ಬೇರಾವುದೇ ಚಟುವಟಿಕೆಯನ್ನು ಅಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಮದ್ಯದ ಬಗ್ಗೆ ಸಿಎಂ ತೀರ್ಮಾನ: ಎಲ್ಲೆಲ್ಲಿ ಮದ್ಯದಂಗಡಿಗಳನ್ನು ತೆರೆಯಬೇಕು. ಒಬ್ಬರಿಗೆ ಎಷ್ಟು ಪ್ರಮಾಣದ ಮದ್ಯ ಕೊಡಬೇಕು ಎಂಬ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಲಿದ್ದಾರೆ. ಮದ್ಯಂಗಡಿಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೂಡ ಅವರೇ ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.