

ದುಬೈ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ವಿಶ್ವದ ಅತಿ ದೊಡ್ಡ ಮಾಲ್ ಎಂದೇ ಖ್ಯಾತಿ ಪಡೆದಿರುವ, ವಿಶ್ವ ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದಾದ 'ದುಬೈ ಮಾಲ್' ಕಟ್ಟುನಿಟ್ಟಿನ ಸುರಕ್ಷತೆಯಡಿ ಮತ್ತೆ ತೆರೆದಿದೆ.
ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿದ್ದರಿಂದ ಕೆಲ ಶರತ್ತುಗಳ ಮೇರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾಲ್ ತೆರೆದಿದೆ. ಮಾಲ್ನಲ್ಲಿ ಸದ್ಯ ಸಿನಿಮಾ, ಸ್ಕೇಟಿಂಗ್ ರಿಂಕ್, ಕಾರಂಜಿ ಆರಂಭವಾಗಿಲ್ಲ. ಅಲ್ಲದೆ ಮೂರು ಗಂಟೆಗೂ ಹೆಚ್ಚು ಕಾಲ ಗ್ರಾಹಕರು ಮಾಲ್ ಒಳಗೆ ಇರುವಂತಿಲ್ಲ. 3 ರಿಂದ 12 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಹಾಗೂ ಉಸಿರಾಟದ ತೊಂದರೆ ಉಳ್ಳವರು ಮಾಲ್ ಪ್ರವೇಶಿಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ.
ಮಾರ್ಚ್ 23ರಂದು ಮುಚ್ಚಲಾಗಿದ್ದ ಮಾಲ್ ಅನ್ನು ಈ ವಾರ ತೆರೆಯಲಾಗಿದ್ದು, ಗ್ರಾಹಕರು ಶಾಪಿಂಗ್ ಧಾಮಗಳಿಗೆ ಮರಳಿದ್ದಾರೆ. ವ್ಯಾಲೆಟ್ ನಿಲುಗಡೆಗಾಗಿ ಕೀ ಹಸ್ತಾಂತರಿಸುವ ವೇಳೆ ಗ್ರಾಹಕರಿಗೆ ಮಾಲ್ನ ಸಿಬ್ಬಂದಿ 'ವೆಲ್ಕಮ್ ಬ್ಯಾಕ್' ಎಂದು ಬರೆದಿರುವ ಕಪ್ಪು ಬಣ್ಣದ ಟೀ ಶರ್ಟ ನೀಡಿ ಸ್ವಾಗತಿಸುತ್ತಿದ್ದಾರೆ. ದ್ವಾರದಲ್ಲೇ ಥರ್ಮಾಮೀಟರ್ ಮೂಲಕ ಗ್ರಾಹಕರ ತಾಪಮಾನ ಪರೀಕ್ಷಿಸಿ ಒಳಬಿಡಲಾಗುತ್ತಿದೆ.
ದೇಶದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಮಿರೇಟ್ಸ್ ಹೇಳಿದೆ. ಆದಾಗ್ಯೂ, ಸೂಪರ್ರ್ಮಾರ್ಕೆಟ್, ಔಷಧಾಲಯ, ದಿನಸಿ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ.
ವಿಸ್ಮಯಗಳ ಗುಚ್ಛ ದುಬೈ ಮಾಲ್:
ವಿಸ್ಮಯಗಳ ಗುಚ್ಛವನ್ನೇ ಒಡಲಲ್ಲಿ ಇಟ್ಟಿಕೊಂಡಿರುವ ದುಬೈ ಮಾಲ್ ಅನ್ನು ಮಾಯಾನಗರಿ ಎಂದೇ ಹೇಳಬಹುದು. 13 ಸಾವಿರಕ್ಕೂ ಹೆಚ್ಚು ಐಷಾರಾಮಿ ಶಾಪಿಂಗ್ ಮಳಿಗೆ ಒಳಗೊಂಡಿರುವ ಈ ಮಾಲ್ನಲ್ಲಿ ವಿಶಾಲವಾದ ನದಿ, ನೃತ್ಯ ಸಂಯೋಜನೆಯ ಹೊರಾಂಗಣ ಕಾರಂಜಿ, ದೈತ್ಯ ದುಬೈ ಅಕ್ವೇರಿಯಂ, 150 ರೆಸ್ಟೋರೆಂಟ್ಗಳಿವೆ. ಅಂಡರ್ವಾಟರ್ ಮೃಗಾಲಯಕ್ಕೂ ನೆಲೆಯಾಗಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡ 'ಬುರ್ಜ್ ಖಲೀಫಾ'ದ ಪಕ್ಕದಲ್ಲೇ ಇರುವ ಈ ಮಾಲ್ಗೆ ಪ್ರತಿ ವರ್ಷ ಸುಮಾರು 8 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಡೀ ಒಂದು ದಿನವಿದ್ದರೂ ಈ ಮಾಲ್ನ ಸೌಂದರ್ಯ, ಅಭಿವೃದ್ಧಿ ಕಣ್ತುಂಬಿಕೊಳ್ಳಲು ಆಗಲ್ಲ. (ಏಜೆನ್ಸೀಸ್)