

ಗೋಣಿಕೊಪ್ಪಲು: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳೂರಿನಲ್ಲಿ ದಾಯಾದಿಗಳ ನಡುವೆ ಆಸ್ತಿ ವಿಚಾರಕ್ಕೆ ಕಲಹ ನಡೆದು ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳ್ಳೂರಿನ ನಿವಾಸಿಗಳಾದ ಬಿ.ಪಿ.ಸಚಿನ್‌ಕುಮಾರ್ ಹಾಗೂ ರೋಷನ್‌ಕುಮಾರ್ ಗಾಯಗೊಂಡವರು. ಸಚಿನ್ ಮಂಗಳವಾರ ಮನೆಯಲ್ಲಿದ್ದ ವೇಳೆ ಆರೋಪಿಗಳಾದ ಬೆಳ್ಳೂರಿನ ನಿವಾಸಿ ಬಾಳೇರ ಟಿಮ್ಸನ್(36), ಹಾಗೂ ಟಿಮ್ಸನ್‌ನ ತಾಯಿ ಜ್ಯೋತಿ (64) ಕಾರಿನಲ್ಲಿ ಮನೆಯ ಬಳಿಗೆ ಬಂದು ಮಾತಾಡಬೇಕೆಂದು ಸಚಿನ್ ಅವರನ್ನು ಹೊರಗೆ ಕರೆದು ಥಳಿಸಿದ್ದಾರೆ. ಹೊಡೆದಾಟ ನೋಡಿ ಬಿಡಿಸಲು ಬಂದ ಸ್ಥಳೀಯ ರೋಷನ್‌ಕುಮಾರ್ ಅವರ ಮೇಲೂ ಹಲ್ಲೆ ಮಾಡಲಾಗಿದೆ.
ಈ ವೇಳೆ ಟಿಮ್ಸನ್ ಕಾರಿನಲ್ಲಿ ಇಟ್ಟಿದ್ದ ರಿವಾಲ್ವರ್‌ನಿಂದ ಏಕಾಏಕಿ ಸಚಿನ್ ಬಲಗಾಲಿಗೆ ಮತ್ತು ರೋಷನ್‌ಕುಮಾರ್ ಎಡ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಸಚಿನ್‌ಕುಮಾರ್ ಮತ್ತು ರೋಷನ್‌ಕುಮಾರ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿದ್ದರಿಂದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸಚಿನ್‌ಕುಮಾರ್ ಮತ್ತು ರೋಷನ್‌ಕುಮಾರ್ ಅವರನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ತಿ ವಿಚಾರಕ್ಕಾಗಿ ಜಗಳ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುವುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಟಿಮ್ಸ್‌ನ್ ಹಾಗೂ ಜ್ಯೋತಿ ಇಬ್ಬರನ್ನು ಶ್ರೀಮಂಗಲ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೊಲೆ ಯತ್ನಕ್ಕೆ ಆರೋಪಿಗಳು ಬಳಸಿದ ರಿವಾಲ್ವರ್ ಅನ್ನು ಪೊಲೀಸರು ವಶಕ್ಕೆ ಪಡೆದು ಜಮ್ಮಾ ವಿನಾಯಿತಿಯನ್ನು ರದ್ದುಗೊಳಿಸುವ ಕುರಿತು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.