

ಲಾಕ್ಡೌನ್ನಿಂದ ಕಳೆದ ನಾಲ್ಕೈದು ತಿಂಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಕೆಲಸಗಳಿಗೆ ಇದೀಗ ಚಾಲನೆ ಸಿಕ್ಕಿದ್ದು, ಸಿನಿಮಾ ತಂಡಗಳು ಮತ್ತೆ ಕ್ಯಾಮರಾ ಆನ್ ಮಾಡಿವೆ. ಇದೀಗ ಕೆಜಿಎಫ್ ಚಾಪ್ಟರ್ 2 ತಂಡವೂ ಇಂದಿನಿಂದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು, ಇಡೀ ತಂಡ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಶೇ 90 ಭಾಗ ಚಿತ್ರೀಕರಣ ಮುಕ್ತಾಯವಾಗಿದೆ.
ಇನ್ನು ಅಧೀರನಾಗಿ ಕಾಣಿಸಿಕೊಂಡಿರುವ ಸಂಜಯ್ ದತ್ ಅವರ ಭಾಗದ ಶೂಟಿಂಗ್ ಬಾಕಿ ಉಳಿದಿದ್ದು, ಈಗತಾನೇ ಕ್ಯಾನ್ಸರ್ನಿಂದ ಚೇತರಿಸಿಕೊಂಡ ಬಳಿಕವಷ್ಟೇ ಅವರ ಭಾಗದ ಚಿತ್ರೀಕರಣ ಮಾಡಿಕೊಳ್ಳಲು ತಂಡ ಯೋಜನೆ ರೂಪಿಸಿದೆ.
ಸಂಗೀತದ ಕೆಲಸವೂ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೂ ಈಗಾಗಲೇ ಚಾಲನೆ ಸಿಕ್ಕಿದೆ. ಯಶ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ.