

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಪಂಚಭಾಷಾ ನಟಿಯೊಬ್ಬರ ಹೆಸರನ್ನು ಮಾಜಿ ಡಾನ್ ದಿ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಬಾಯ್ಬಿಟ್ಟಿದ್ದಾನೆ. ನಟಿಯ ವಿಚಾರಣೆಗೆ ಸಿಸಿಬಿ ಪೊಲೀಸರು ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಪ್ರಕರಣದ ಸಂಬಂಧ ರಿಕ್ಕಿ ರೈಯನ್ನು ಸುದೀರ್ಘವಾಗಿ ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ ವೇಳೆ ತನ್ನ ಗೆಳೆಯ ಆದಿತ್ಯ ಆಳ್ವ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ತನಗೆ ನಟಿಯೊಂದಿಗೆ ಸ್ನೇಹ ವಾಗಿತ್ತು. ಆಕೆಗೆ ಪೆಡ್ಲರ್ ಸಂಪರ್ಕ ಹೊಂದಿರುವ ಅನುಮಾನವಿದೆ ಎಂದು ರಿಕ್ಕಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಪಾರ್ಟಿಯಲ್ಲಿ ಸ್ನೇಹ ಗಳಿಸಿದ ಬಳಿಕ ನಟಿ ಜತೆ ಆತ್ಮೀಯತೆ ಬೆಳೆಯಿತು. ಗೆಳೆತನದಲ್ಲೇ ಹಲವು ಪಾರ್ಟಿಗಳಿಗೆ ಜತೆಯಲ್ಲಿ ಹೋಗಿದ್ದೆವು. ಆಕೆ ಡ್ರಗ್ಸ್ ಸೇವಿಸಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ‡. ಗೆಳೆಯ ಆದಿತ್ಯ ಆಳ್ವ ಮಾತ್ರವಲ್ಲದೆ, ವಿರೇನ್ ಖನ್ನಾ ಸೇರಿ ಇತರರು ಸಂಘಟಿಸಿದ್ದ ಕೆಲ ಪಾರ್ಟಿಗಳಲ್ಲಿ ನಟಿ ಜತೆ ಪಾಲ್ಗೊಂಡಿದ್ದೇನೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ನಟಿ ಜತೆ ಸ್ನೇಹವಿಲ್ಲ ಎಂದು ರಿಕ್ಕಿ ರೈ ಸ್ಪಷ್ಟಪಡಿಸಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ:ಕುತೂಹಲ ಕೆರಳಿಸಿದ ರಮೇಶ್ ಜಾರಕಿಹೊಳಿ-ದೇವೇಂದ್ರ ಫಡ್ನವೀಸ್ ತುರ್ತು ಭೇಟಿ; ತಿಂಗಳಲ್ಲಿದು 2ನೇ ಬಾರಿ !
ರಿಕ್ಕಿ ಹೇಳಿಕೆ ಆಧರಿಸಿ ಸಿಸಿಬಿ ಅಧಿಕಾರಿಗಳು, ಪಂಚಾಭಾಷ ತಾರೆ ಪತ್ತೆಗೆ ಮುಂದಾಗಿದ್ದಾರೆ. ರಿಕ್ಕಿ ಮೊಬೈಲ್ಗಳ ವಶಕ್ಕೆ ಪಡೆದಿರುವ ಅಧಿಕಾರಿಗಳು, ವಾಟ್ಸ್ಆಪ್ ಚಾಟಿಂಗ್ ಪರಿಶೀಲಿಸುತ್ತಿದ್ದಾರೆ.
ಆಳ್ವನ ಮತ್ತೊಬ್ಬ ಸ್ನೇಹಿತನ ವಿಚಾರಣೆ: ತಲೆಮರೆಸಿಕೊಂಡಿರುವ ಆದಿತ್ಯ ಆಳ್ವನ ಮತ್ತೊಬ್ಬ ಸ್ನೇಹಿತನನ್ನು ಸಿಸಿಬಿ ಪೊಲೀಸರು ಗುರುವಾರ ವಿಚಾರಣೆ ನಡೆಸಿದ್ದಾರೆ. ಹಲಸೂರಿನ ನಿರ್ಮಾಣ ಗುತ್ತಿಗೆದಾರ ಲೋಕೇಶ್ ತನಿಖೆಗೊಳಪಡಿಸಿ ಆದಿತ್ಯ ಜತೆ ಸ್ನೇಹದ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಿಕ್ಕಿ ಎರಡನೇ ದಿನದ ವಿಚಾರಣೆಗೆ ಗೈರಾಗಿದ್ದ. ಬುಧವಾರ ವಿಚಾರಣೆ ನಡೆಸಿದ ಅಧಿಕಾರಿಗಳು ಗುರುವಾರ ಬರುವಂತೆ ಸೂಚನೆ ನೀಡಿದ್ದರು. ಬೆಳಗ್ಗೆ ಕರೆ ಮಾಡಿ ವಿಚಾರಣೆ ಬರುವುದು ಬೇಡ ಎಂದು ರಿಕ್ಕಿಗೆ ಸೂಚಿಸಿದ್ದರು.