

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ನಡೆದ ಖರೀದಿ ಕುರಿತು ನ್ಯಾ. ಜಾನ್ ಮೈಕಲ್ ಡಿ ಕುನ್ಹಾ ನೀಡಿದ ವರದಿ ಕುರಿತು ಡಿ.ಕೆ.ಶಿವಕುಮಾರ್ ಅಚ್ಚರಿಯ ಅಭಿಪ್ರಾಯ ಹೊರಹಾಕಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಕುನ್ಹಾ ವರದಿ ನೋಡಿದೆ. ನನಗೆ ಕರೋನ ಬಂದಷ್ಟು ಗಾಬರಿ ಆಯ್ತು. ಇದರ ಕುರಿತು ಹೆಚ್ಚಿನ ವರದಿ ಕೇಳಿದ್ದೇನೆ. ಅಂಕಿ ಅಂಶಗಳ ಬಗ್ಗೆ ಆರೋಗ್ಯ ಸಚಿವರು ವಿವರಣೆ ನೀಡುತ್ತಾರೆ ಎಂದರು.
ಒಳ ಮೀಸಲು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ತೆಲಂಗಾಣ ಹಾಗೂ ರಾಜ್ಯ ಸರ್ಕಾರ ಮಾತುಕೊಟ್ಟಂತೆ ನಡೆದಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಕೂಡ ಈ ವಿಚಾರ ಇತ್ತು. ಮುಂದೆ ಜನಸಂಖ್ಯೆ ಆಧಾರದಲ್ಲಿ ತೀರ್ಮಾನ ಮಾಡಲಿದ್ದೇವೆ. ಎಲ್ಲ ವರ್ಗಕ್ಕೆ ನ್ಯಾಯ ದೊರಕಬೇಕು ಎಂದರು.
ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದೇ ಇರುವುದಕ್ಕೂ ಸ್ಪಷ್ಟನೆ ನೀಡಿದ ಅವರು ನಾನೇ ಬೇಕು ಎಂದೇ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ. ನಾನೇ ತಡೆ ಹಿಡಿದಿದ್ದೇನೆ. ಅಲ್ಲಿನ ಶಾಸಕರು ನಮ್ಮ ಸರ್ಕಾರದ ಮೇಲೆ ಏನೇನೋ ಆರೋಪ ಮಾಡಿದ್ದರು. ಅದನ್ನೆಲ್ಲ ಸಾಬೀತು ಮಾಡಬೇಕಲ್ಲವೇ? ನನ್ನನ್ನೂ ಭೇಟಿ ಕೂಡ ಆಗಿದ್ದರು, ಆಗ ಕೂಡ ಹೇಳಿದ್ದೇನೆ. ಹೋರಾಟ ಮಾಡುವುದಾದರೆ ಮಾಡಲಿ ಎಂದು ಹೇಳಿದರು.