ಶಾಸಕ ಯತ್ನಾಳ್ ಗೆ ಬಿಜೆಪಿ ವರಿಷ್ಠರ ಶಾಕ್: ಕಾರಣ ಕೇಳಿ ನೋಟಿಸ್

IMG_20241202_100657
Published on

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಟೀಕೆ, ಆರೋಪ, ಕೇಂದ್ರ ನಾಯಕರ ಸೂಚನೆಯನ್ನೂ ಕಡೆಗಣಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೆ ಪಕ್ಷದ ವರಿಷ್ಠರು ಶಾಕ್ ನೀಡಿದ್ದಾರೆ. ಪಕ್ಷದ ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಕಾರಣ ಕೇಳಿ ನೋಟಿಸ್ ನೀಡಿದ್ದು, ಸಮಜಾಯಿಷಿ ನೀಡಲು 10 ದಿನಗಳ ಗಡುವು ವಿಧಿಸಿದ್ದಾರೆ.

ವಕ್ಫ್ ಜಾಗೃತಿ ಅಭಿಯಾನದ ಮೊದಲ ಹಂತವನ್ನು ಯತ್ನಾಳ್ ನೇತೃತ್ವದ ತಂಡವು ಭಾನುವಾರ ಮುಕ್ತಾಯಗೊಳಿಸಿದೆ. ದಾವಣಗೆರೆಯಲ್ಲಿ 25 ಲಕ್ಷ ಜನರನ್ನು ಸೇರಿಸಿ ಬೃಹತ್ ಹಿಂದು ಸಮಾವೇಶ ಮಾಡುತ್ತೇವೆ. ಪ್ರಧಾನಿ ಮೋದಿಯವರನ್ನು ಕರೆ ತರುತ್ತೇವೆ. ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ರನ್ನು ಸೋಮವಾರ ಭೇಟಿಯಾಗುವೆ ಎಂದು ಯತ್ನಾಳ್ ತಿಳಿಸಿ, ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಿದ ದಿನವೇ ಅತ್ತ ಪಕ್ಷದ ಕೇಂದ್ರ ಶಿಸ್ತು ಸಮಿತಿ ಸಮಜಾಯಿಷಿ ಕೇಳಿ ಸೂಚನಾಪತ್ರವನ್ನು ಡಿ.1ರಂದು ಯತ್ನಾಳ್ ಅವರ ವಿಜಯಪುರ ಜಿಲ್ಲೆಯ ಸ್ವಂತ ವಿಳಾಸಕ್ಕೆ ರವಾನಿಸಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿ ಶನಿವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಕೆಲವು ನಾಯಕರನ್ನು ಭೇಟಿಯಾಗಿ ಅಂದೇ ಮರಳಿದ್ದರು. ರಾಜ್ಯಾಧ್ಯಕ್ಷರ ಬದಲಾವಣೆ ಭ್ರಮೆಯಲ್ಲಿರುವವರಿಗೆ ನಿರಾಸೆ ಕಾದಿದೆ ಎಂದು ಯತ್ನಾಳ್ ಮತ್ತವರ ತಂಡದ ಮೇಲೆ ಪರೋಕ್ಷ ವಾಗ್ದಾಳಿ ಮಾಡಿದ್ದರು.

ಯತ್ನಾಳ್ ವಿರುದ್ಧ ಚಾಡಿ ಹೇಳಲು ದೆಹಲಿಗೆ ಹೋಗಿದ್ದಲ್ಲ. ಪದೇ ಪದೆ ರಾಜ್ಯ ನಾಯಕರನ್ನು ಟೀಕಿಸುತ್ತಿರುವ ಯತ್ನಾಳ್ ವಿರುದ್ಧ ಬಿಗಿ ಕ್ರಮ ಕೈಗೊಳ್ಳಬೇಕು ಎನ್ನುವುದು ಕಾರ್ಯಕರ್ತರ ಅಪೇಕ್ಷೆಯಾಗಿದೆ ಎಂದು ವಿಜಯೇಂದ್ರ ಹೇಳಿದ ಮರು ದಿನವೇ ಯತ್ನಾಳ್ ಗೆ ನೋಟಿಸ್ ಜಾರಿಯಾಗಿದೆ. ಈ ನಡುವೆ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಲು  ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಿ.ಸಿ.ಪಾಟೀಲ್ ಇನ್ನಿತರರು ಒತ್ತಾಯಿಸಿದ್ದಾರೆ.

ಶೋಕಾಸ್ ನೋಟಿಸ್ ನಲ್ಲಿ ಏನಿದೆ ?

ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ, ರಾಜ್ಯ ಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನಿಮ್ಮ ನಿರಂತರ ವಾಗ್ದಾಳಿ, ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸುವುದು, ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಎಲ್ಲ ವಿಷಯಗಳ ಬಗ್ಗೆ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಸಾರ್ವಜನಿಕ ಹೇಳಿಕೆಗಳು ಮತ್ತು ನಿಲುವುಗಳನ್ನು ಮಾಧ್ಯಮಗಳು ಮತ್ತು ವಿವಿಧ ಪಕ್ಷದ ವೇದಿಕೆಗಳಲ್ಲಿ ಮಾತನಾಡಿರುವುದು ವರದಿಯಾಗಿದೆ.

ಈ ಹಿಂದೆಯೂ ಹಲವು ಬಾರಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಸದ್ವರ್ತನೆಯ ಭರವಸೆ ನೀಡಿದ್ದರೂ ನಿಮ್ಮ ಅಶಿಸ್ತಿನ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಿರುವುದು ಆತಂಕಕಾರಿ ಸಂಗತಿ.

ನಿಮ್ಮ ಹಿರಿತನ ಮತ್ತು ಪಕ್ಷದಲ್ಲಿನ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು, ಈ ಹಿಂದೆ ನೀವು ಸಲ್ಲಿಸಿದ ವಿವರಣೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿಯು ಮೃದು ನಿಲುವು ತಳೆಯಿತು.

ಶಿಸ್ತಿನ ಉಲ್ಲಂಘನೆ

ಆದರೆವರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಪಕ್ಷದ ಅಧಿಕೃತ ನಿಲುವನ್ನು ಧಿಕ್ಕರಿಸಿ ಪಕ್ಷದ ನಾಯಕರ ವಿರುದ್ಧ ನೀವು ಮಾಡಿದ ಸುಳ್ಳು, ತಥಾಕಥಿತ ಆರೋಪಗಳು, ಬಿಜೆಪಿ ಪಕ್ಷದ ನಿಯಮಗಳ 25ನೇ ವಿಧಿಯಲ್ಲಿ ವ್ಯಾಖ್ಯಾನಿಸಿದಂತೆ ಪಕ್ಷದ ಶಿಸ್ತಿನ ಗಂಭೀರ ಉಲ್ಲಂಘನೆಯಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ವಿರುದ್ಧ ಪಕ್ಷವು ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂಬುದಕ್ಕೆ ದಯವಿಟ್ಟು ಕಾರಣ ತೋರಿಸಿ. ಈ ಸೂಚನೆಯ ಸ್ವೀಕೃತಿಯಿಂದ ಹತ್ತು ದಿನಗಳಲ್ಲಿ ವಿವರಣೆಯನ್ನು ಸದಸ್ಯ ಕಾರ್ಯದರ್ಶಿ, ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಸಲ್ಲಿಸಬೇಕು.

ನಿಗದಿತ ಗಡುವಿನೊಳಗೆ ಸಮಜಾಯಿಷಿ ನೀಡದಿದ್ದರೆ ಹೇಳುವುದು ಏನೂ ಇಲ್ಲವೆಂದು ಪರಿಗಣಿಸಿ ಮುಂದಿನ ಕ್ರಮವಹಿಸಬೇಕಾಗುತ್ತದೆ ಎಂದು ಶೋಕಾಸ್ ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net