ವಾಹನ ಮಾಲೀಕರಿಗೆ ಶಾಕ್! ವಾಣಿಜ್ಯ ವಾಹನ ತೆರಿಗೆ ಹೆಚ್ಚಳ, ಎಫ್​ಸಿ ನವೀಕರಣ ದರವೂ ತುಟ್ಟಿ

ವಿಜಯವಾಣಿ (6)
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ರಾಜ್ಯದಲ್ಲಿ ವಾಣಿಜ್ಯ ಬಳಕೆ ವಾಹನಗಳ ಖರೀದಿ ಇನ್ನಷ್ಟು ದುಬಾರಿಯಾಗುತ್ತಿದ್ದು, ಮಾಲೀಕರ ಜೇಬು ಸುಡುವುದು ನಿಶ್ಚಿತವಾಗಿದೆ. ಹಳೇ ವಾಹನಗಳ ಫಿಟ್​ನೆಸ್ ಸರ್ಟಿಫಿಕೇಟ್ (ಎಫ್​ಸಿ) ಶುಲ್ಕ ಹೆಚ್ಚಿಸಿ ಕೇಂದ್ರ ಸರ್ಕಾರ ಕರಡು ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಕೆಲ ವಾಹನಗಳ ಮೇಲೆ ತೆರಿಗೆ ಹೆಚ್ಚಿಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ಈ ಆಘಾತದ ನಡುವೆ ಏ.1ರಿಂದ ಉತ್ಪಾದನಾ ಕಂಪನಿಗಳು ವಾಹನಗಳ ಮಾರಾಟ ದರ ಹೆಚ್ಚಿಸಲು ನಿರ್ಧರಿಸಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ 2025 ಅನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಅದರನ್ವಯ ವಾಣಿಜ್ಯ ವಾಹನಗಳ ತೆರಿಗೆ ಏರಿಕೆ ಮಾಡಲಾಗಿದೆ. ಇನ್ಮುಂದೆ 10 ಲಕ್ಷ ರೂ.ಗಿಂತ ಒಳಗಿರುವ ಕ್ಯಾಬ್​ಗಳಿಗೂ ಜೀವಿತಾವಧಿ (ಲೈಫ್ ಟೈಂ) ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈವರೆಗೆ 10 ಲಕ್ಷ ರೂ.ಗಿಂತ ಮೇಲ್ಪಟ್ಟ ವಾಹನಗಳಿಗಷ್ಟೇ ತೆರಿಗೆ ಪಾವತಿಸಬೇಕಿತ್ತು.

ಹೆದ್ದಾರಿ ಸಚಿವಾಲಯಕ್ಕೆ ಪತ್ರ

ಇದೇ ವೇಳೆ ಕೇಂದ್ರ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2024 ಜಾರಿಗೆ ತರಲಾಗುತ್ತಿದ್ದು, ಹಳೇ ವಾಹನಗಳ ಎಫ್​ಸಿ ನವೀಕರಣ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕರಡು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. 8 ವರ್ಷ, 15 ವರ್ಷ ಹಾಗೂ 20 ವರ್ಷ ಹಳೆಯ ವಾಹನಗಳ ಎಫ್​ಸಿ ನವೀಕರಣ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಾಹನ ಮಾಲೀಕರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪರಿಷ್ಕರ ದರ ಜಾರಿಗೆ ತರಬಾರದು ಎಂದು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆದಿವೆ.

ಏ.1ರಿಂದ ವಾಹನಗಳ ಮಾರಾಟ ಬೆಲೆ ಹೆಚ್ಚಿಸುವುದಾಗಿ ಉತ್ಪಾದಕ ಕಂಪನಿಗಳು ಘೋಷಿಸಿವೆ. ಆದರೆ, ಸಣ್ಣ ವಾಹನಗಳಿಗೆ ಶೇ.18 ಜಿಎಸ್​ಟಿ ಹಾಗೂ ಶೇ.5 ಸೆಸ್ ವಿಧಿಸಲಾಗುತ್ತಿದೆ. ಅದೇ ಹೈಬ್ರಿಡ್ ವಾಹನಗಳಿಗೆ ಶೇ.28 ಜಿಎಸ್​ಟಿ ಹಾಗೂ ಶೇ.13 ಸೆಸ್ ಹಾಕಲಾಗುತ್ತಿದೆ. ಇದರ ಬದಲು ಎಲ್ಲ ವಾಹನಗಳಿಗೂ ಒಂದೇ ರೀತಿಯ ಜಿಎಸ್​ಟಿ ಹಾಗೂ ಸೆಸ್ ವಿಧಿಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. | ಕೆ. ರಾಧಾಕೃಷ್ಣ ಹೊಳ್ಳ ಅಧ್ಯಕ್ಷ, ಕರ್ನಾಟಕ ರಾಜ್ಯ ಪ್ರಯಾಣ ನಿರ್ವಾಹಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net