ಯೋಧನಾದ ಶಿವಯೋಗಿ

temple 1234
Published on

ಧರ್ಮ, ಪರಂಪರೆ, ಸಂಸ್ಕೃತಿಯ ರಕ್ಷಣೆಗಾಗಿ ಸರ್ವಸಂಗ ಪರಿತ್ಯಾಗ ಮಾಡಿದ ಹಲವು ಮಹಾತ್ಮರಿದ್ದಾರೆ. ಅಂತೆಯೇ ರಾಷ್ಟ್ರೀಯ ವಿಚಾರಧಾರೆಗಳನ್ನು ಅಳವಡಿಸಿಕೊಂಡು ದುಡಿದ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯೂ ಇದೆ. ಆದರೆ ಕಾವಿಧಾರಿಯಾದ ಶಿವಯೋಗಿಯೊಬ್ಬರು ಯೋಧನಂತೆ ಕೆಲಸ ಮಾಡಿದ ಅಪರೂಪದ ನಿದರ್ಶನ ಕರಿಭಂಟನಾಳ ಹಿರೇಮಠದಲ್ಲಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕರಿಭಂಟನಾಳದಲ್ಲಿರುವ ಹಿರೇಮಠವು ಸುತ್ತಮುತ್ತಲ ಪ್ರದೇಶದಲ್ಲಿ ಪ್ರಭಾವಿ ಮಠ. ಇಲ್ಲಿಗೆ 160 ವರ್ಷಗಳ ಹಿಂದೆ ಜೀವಿಸಿದ್ದ ಶ್ರೀ ಗಂಗಾಧರ ಮಹಾಸ್ವಾಮಿಗಳು ಧಾರ್ವಿುಕ ಚಿಂತನೆಯ ಜತೆಗೆ ಸ್ವಾತಂತ್ರ್ಯ ಹೋರಾಟದ ಬಗೆಗೂ ಜನರನ್ನು ಜಾಗೃತಗೊಳಿಸಿದ್ದರು. ಊರಿನ ಮುಗ್ಧ ಮಹಿಳೆಯ ಮೇಲೆ ಬ್ರಿಟಿಷರ ಅತ್ಯಾಚಾರ ಮತ್ತು ದೌರ್ಜನ್ಯದಿಂದ ಸಿಡಿದೆದ್ದ ಸ್ವಾಮಿಗಳು ಬ್ರಿಟಿಷರನ್ನು ಸದೆಬಡಿಯುವ ಪ್ರತಿಜ್ಞೆ ಮಾಡಿ, ಅದು ಈಡೇರುವವರೆಗೂ ವಿರಮಿಸಲಿಲ್ಲ. ಸದಾ ಪೂಜೆ-ಪುನಸ್ಕಾರ ನಡೆಸುತ್ತ, ಪುರಾಣಪ್ರವಚನ ಮಾಡುತ್ತಿದ್ದ ಸ್ವಾಮಿಗಳು ಸಮಯ ಬಂದರೆ ಯೋಧನಾಗುವದಕ್ಕೂ ಸಿದ್ಧ ಎಂಬ ಸಂದೇಶವನ್ನು ಸಾರುವ ಮೂಲಕ ಚರಿತ್ರೆಯ ಪುಟಗಳಲ್ಲಿ ‘ಕ್ರಾಂತಿ ಕೇಸರಿ’ ಎಂದು ಹೆಸರಾಗಿದ್ದಾರೆ. ಆ ಕಾಲಕ್ಕೆ ಶ್ರೀಮಠದ ಗುರುಕುಲಗಳಲ್ಲಿ ಗುಪ್ತವಾಗಿ ಶಸ್ತ್ರವಿದ್ಯೆಗಳನ್ನು ಹೇಳಿಕೊಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಸೈನ್ಯವನ್ನು ಸಜ್ಜುಗೊಳಿಸಿದರು. ಹಂಡೆ ವಜೀರ್ ಸಮುದಾಯದ ಕಟ್ಟುಮಸ್ತಾಗಿದ್ದ ಯುವಕರ ಸೈನ್ಯವನ್ನು ಸಿದ್ಧಗೊಳಿಸಿ, ಜಂಬಗಿ ಜಾಹಗೀರದಾರರಾಗಿದ್ದ ದೇಶಮುಖರ ಸಹಕಾರದೊಂದಿಗೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಸುರಪುರ ರಾಜ ಕೃಷ್ಣಪ್ಪ ನಾಯಕನಿಗೆ ಸಹಾಯ ಮಾಡಿದರು. ಶ್ರೀಗಳ ಮಾರ್ಗದರ್ಶನದಲ್ಲಿ ನಾಯಕ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಜಯ ಗಳಿಸಿದ.

ವಿಷಮ ವಿಷಮರ್ಧನ ಹಿರೇಮಠ: ಕರಿಭಂಟನಾಳ ಹಿರೇಮಠವು ಶ್ರೀಶೈಲಪೀಠದ ಶಾಖಾಮಠವಾಗಿದ್ದು, ಈ ಪರಂಪರೆಯ ಓರ್ವರು ಜಗದ್ಗುರುಗಳಾಗಿ ಸೇವೆ ಸಲ್ಲಿಸಿರುವ ಇತಿಹಾಸವಿದೆ. ಏಳು ಶಾಖಾಮಠಗಳನ್ನು ಹೊಂದಿರುವ ಕರಿಭಂಟನಾಳ ಹಿರೇಮಠದ ಗುರುಪರಂಪರೆಯಲ್ಲಿ ಗಂಗಾಧರಸ್ವಾಮಿಗಳ ಕಾಲ ಅತ್ಯಂತ ಪ್ರಮುಖ. ನಾಗರಪಂಚಮಿಯಂದು ಜನಿಸಿದ ಶ್ರೀಗಳು ಉರಗಮಂತ್ರ ಸಿದ್ಧಿಸಿಕೊಂಡಿದ್ದರು. ಈ ಭಾಗದಲ್ಲಿ ಎಲ್ಲೇ ಸರ್ಪ ಕಚ್ಚಿದರೂ ಗಂಗಾಧರಸ್ವಾಮಿಗಳ ಹೆಸರಿನಲ್ಲಿ ಕಲ್ಲು ಕಟ್ಟಿಕೊಂಡು ಶ್ರೀಮಠಕ್ಕೆ ಬಂದು ತೀರ್ಥಸ್ನಾನ ಮಾಡಿ ನಂತರ ಮಂತ್ರೋಪದೇಶದಿಂದ ವಿಷ ನಿವಾರಿಸುವ ವ್ಯವಸ್ಥೆ ಇಂದಿಗೂ ಇದೆ. ಈ ಕಾರಣಕ್ಕಾಗಿಯೇ ಗಂಗಾಧರಸ್ವಾಮಿಗಳನ್ನು ವಿಷಮ ವಿಷಮರ್ಧನ ಸ್ವಾಮಿಗಳು ಎಂದು ಕರೆಯಲಾಗುತ್ತದೆ.

ರಾಷ್ಟ್ರೀಯ ಸದ್ಭಾವನಾ ಗೋಷ್ಠಿ: ಶ್ರೀಗಳ ಪುಣ್ಯಸ್ಮರಣೆಯ ನಿಮಿತ್ತ ಪ್ರತಿವರ್ಷ ಶಿವರಾತ್ರಿ ವೇಳೆ ಕರಿಭಂಟನಾಳದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಕರಿಭಂಟನಾಳ ಹಿರೇಮಠದ ವಾರ್ಷಿಕ ಜಾತ್ರೆಯಲ್ಲಿ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಕೇತಿಕವಾಗಿ ಆಚರಿಸಲ್ಪಟ್ಟು; ಸಾಮಾಜಿಕ-ರಾಷ್ಟ್ರೀಯತೆಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ಹುತಾತ್ಮ ಯೋಧರ ಸ್ಮರಣೆ, ದಕ್ಷ ಅಧಿಕಾರಿಗಳ ಸನ್ಮಾನ, ಯೋಧ ಕುಟುಂಬಗಳಿಗೆ ಸಹಾಯಧನ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆ ಹಿನ್ನಲೆಯಲ್ಲಿ ಫೆ. 20ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 20ರಂದು ಸಾಮೂಹಿಕ ವಿವಾಹ, 21ರಂದು ಯೋಗಶಿಬಿರ, 22ರಂದು ಬಾಲಗಾಯಕ ಜ್ಞಾನೇಶ್ವರನಿಂದ ದೇಶಭಕ್ತಿಗೀತೆ ಗಾಯನ ಹಾಗೂ ಅಗ್ನಿಕುಂಡ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. 23ರಂದು ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ‘ರಾಷ್ಟ್ರೀಯ ಸದ್ಭಾವನಾ ಗೋಷ್ಠಿ’ಯನ್ನು ಆಯೋಜಿಸಲಾಗಿದೆ. ಇದೇ ವಂಶಪರಂಪರೆಯಲ್ಲಿ ಮುನ್ನಡೆಯುತ್ತಿರುವ ಕರಿಭಂಟನಾಳ ಹಿರೇಮಠದ ಸದ್ಯದ ಧರ್ವಧ್ಯಕ್ಷರಾಗಿರುವ ಶ್ರೀ ಶಿವಕುಮಾರಸ್ವಾಮಿಗಳು ಸದಾ ಧರ್ಮ ಮತ್ತು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

ಪ್ರಶಾಂತ ರಿಪ್ಪನ್​ಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net